ರಿಲ್ಯಾಕ್ಸ್ ಮೂಡ್‍ನಲ್ಲಿ ಅಭ್ಯರ್ಥಿಗಳು, ಕುಟುಂಬ ಸದಸ್ಯರು…
ಮೈಸೂರು

ರಿಲ್ಯಾಕ್ಸ್ ಮೂಡ್‍ನಲ್ಲಿ ಅಭ್ಯರ್ಥಿಗಳು, ಕುಟುಂಬ ಸದಸ್ಯರು…

April 20, 2019

ಮೈಸೂರು: ಈಗ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್, ಶುಕ್ರವಾರ ಬೆಳಿಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಉಪಹಾರ, ಬಂದವರಿಗೆ ಉಪಚಾರ, ಸಮಾ ಲೋಚನೆಯಲ್ಲಿ ಕಾಲ ಕಳೆದರು.

ಸುಡು ಬಿಸಿಲಿನ ನಡುವೆಯೂ ಕಳೆದ 15 ದಿನ ಗಳಿಂದ ನಿರಂತರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಈ ಇಬ್ಬರು ಅಭ್ಯರ್ಥಿಗಳು ಮತದಾನ ಮುಗಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ವಿಶ್ರಾಂತಿಗೆ ಹೊರಳಿದರು. ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತಸದ ಕಾಲ ಕಳೆದರು.

ಹಾಲಿ ಸಂಸದರೂ ಆದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ, ಪತ್ನಿ ಅರ್ಪಿತಾ ಸಿಂಹ ಅದರಲ್ಲೂ ಪುತ್ರಿ ವಿಪಂಚಿ ಸಿಂಹ ಜೊತೆಯಲ್ಲಿ ಆಹ್ಲಾದಕರ ರೀತಿ ಕಾಲ ಕಳೆದರು. ಈ ಮಧ್ಯೆ ಪತಿಯ ಪ್ರಚಾರಕ್ಕೆ ಸಾಥ್ ನೀಡಿದ್ದ ಪತ್ನಿ ಅರ್ಪಿತಾ ಸಿಂಹ ಕಾಲು ನೋವಿನಿಂದ ನರಳುತ್ತಿರುವ ಬಗ್ಗೆ ಸಿಂಹ ತಿಳಿಸಿದರು.

ಬಳಿಕ ಸಿಂಹ ತಮ್ಮ ಕಚೇರಿಗೆ ತೆರಳಿ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಮತದಾನ ಕುರಿತು ಚರ್ಚಿಸಿದರು. ಎಲ್ಲೆಲ್ಲಿ ಹೇಗೆ ಮತದಾನ ನಡೆದಿದೆ ಎಂಬ ಕುರಿತು ಮಾಹಿತಿ ಪಡೆದು ಕೊಂಡರು. ನಾಳೆಯಿಂದ ಬೀದರ್‍ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ. ಬಳಿಕ ಉತ್ತರ ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲೂ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವುದಾಗಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇತ್ತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಸಹ ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ಪತ್ನಿ ಪುಷ್ಪಾವತಿ ಮತ್ತು ಮಕ್ಕ ಳೊಂದಿಗೆ ಕಾಲ ಕಳೆದರು. ಸುಮಾರು 20 ದಿನ ಗಳಿಂದ ಸತತ ಸುತ್ತಾಟದಿಂದ ದಣಿದಿದ್ದ ಅವರು ಇಂದು ಬೆಳಿಗ್ಗೆಯಿಂದಲೇ ತಮ್ಮ ನಿವಾಸದ ಕಚೇರಿ ಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮಾತಿಗಿಳಿದು, ಮತದಾನದ ಮಾಹಿತಿ ಪಡೆದರು. ಕೊಡಗು ಮತ್ತು ಮೈಸೂರು ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದಿರುವ ಶೇಕಡಾವಾರು ಮತ ದಾನ, ಯಾವ ಬೂತ್‍ನಲ್ಲಿ ಎಷ್ಟೆಷ್ಟು ಮತಗಳು ಬಿದ್ದಿರ ಬಹುದು ಎಂಬಿತ್ಯಾದಿ ಅಂಕಿ ಅಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಮುಖಂಡರು, ಕಾರ್ಯಕರ್ತರ ಭೇಟಿಯ ಒತ್ತಡ ದಲ್ಲಿ ತಡವಾಗಿ ಸ್ನಾನ ಮಾಡಿದೆ. ಪ್ರಚಾರ ಸಂದರ್ಭ ದಲ್ಲಿ ಬರೀ ಹೋಟೆಲು ತಿಂಡಿ, ಊಟ ಮಾಡಿ ಸಾಕಾ ಗಿತ್ತು. ಇಂದು ನನ್ನ ಪತ್ನಿ ಮಾಡಿದ್ದರು. ಅದನ್ನು ಮಧ್ಯಾಹ್ನ 12.30 ವೇಳೆಗೆ ತಿಂದ ಬಗ್ಗೆ `ಮೈಸೂರು ಮಿತ್ರ’ನಲ್ಲಿ ತಿಳಿಸಿದರು. ಏ.23ರಂದು ರಾಜ್ಯದಲ್ಲಿ ನಡೆಯಲಿರುವ 2ನೇ ಹಂತದ ಚುನಾವಣೆಯಲ್ಲಿ ಪಕ್ಷ ಸೂಚಿಸಿದರೆ ಪ್ರಚಾರಕ್ಕೆ ತೆರಳುವುದಾಗಿ ತಿಳಿಸಿದರು.

Translate »