ಮೀಸಲಾತಿ ವರ್ಗದವರಿಗೆ ಜನರಲ್ ಮೆರಿಟ್‍ನಲ್ಲಿ ಅವಕಾಶ ನಿರಾಕರಣೆ  ಆದೇಶ ಹಿಂಪಡೆಯಲು ಬಿಎಸ್‍ಪಿ ಒತ್ತಾಯ
ಮೈಸೂರು

ಮೀಸಲಾತಿ ವರ್ಗದವರಿಗೆ ಜನರಲ್ ಮೆರಿಟ್‍ನಲ್ಲಿ ಅವಕಾಶ ನಿರಾಕರಣೆ ಆದೇಶ ಹಿಂಪಡೆಯಲು ಬಿಎಸ್‍ಪಿ ಒತ್ತಾಯ

November 20, 2018

ಮೈಸೂರು: ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದಂತೆ ನೇರ ಮೀಸಲಾತಿಗೆ ಅರ್ಹರಾದವರು ಜನರಲ್ ಮೆರಿಟ್‍ನಲ್ಲಿ ಪ್ರವೇಶ ಪಡೆಯುವಂತಿಲ್ಲ ಎಂಬ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ, ಸರ್ಕಾರ ಈ ಆದೇಶದ ಮೂಲಕ ಎಸ್‍ಸಿ-ಎಸ್‍ಟಿ ಹಾಗೂ ಓಬಿಸಿ ಸಮುದಾಯದ ಪ್ರತಿಭಾವಂತರಿಗೆ ಅನ್ಯಾಯ ಮಾಡಲು ಹೊರಟಿದೆ. ಈ ಆದೇಶ ಸಂವಿಧಾನ ವಿರೋಧಿ ಎಂದು ಖಂಡಿಸಿದರು.

ಎಸ್‍ಸಿ-ಎಸ್‍ಟಿ, ಓಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ರಾಜ್ಯದಲ್ಲಿ ಶೇ.95ರಷ್ಟು ನೇರ ಮೀಸಲಾತಿಗೆ ಒಳಪಡುತ್ತಾರೆ. ಇವರನ್ನು ಜನರಲ್ ಮೆರಿಟ್‍ನಿಂದ ಹೊರಗಿಟ್ಟರೆ, ಇನ್ನುಳಿದ ಶೇ.5ರಷ್ಟು ಅಭ್ಯರ್ಥಿಗಳಿಗೆ ಶೇ.50ರಷ್ಟು ಅವಕಾಶ ಲಭ್ಯವಾಗಲಿದೆ. ಇದು ಘೋರ ಅನ್ಯಾಯ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಆದೇಶವನ್ನು ಪರಿಶೀಲಿಸಿ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರ ಖಾಯಂಗೊಳಿಸುವ ಬೇಡಿಕೆ ಈಡೇರಿಸುವ ಸರ್ಕಾರದ ಭರವಸೆ ಹಾಗೆಯೇ ಉಳಿದಿದ್ದು, ಖಾಯಂಗೆ ಒತ್ತಾಯಿಸಿ ದಸರಾ ವೇಳೆ ವಾರ ಕಾಲ ಪೌರಕಾರ್ಮಿಕರು ಮುಷ್ಕರ ನಡೆಸಿದ್ದರು. ಇದೀಗ ಮುಷ್ಕರದ ಅವಧಿಯ ವೇತನ ಕಡಿತಕ್ಕೆ ಆದೇಶ ಹೊರಡಿಸಲಾಗಿದೆ. ಇದು ತೀರಾ ಅನ್ಯಾಯ ವಾಗಿದ್ದು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಗಮನ ಹರಿಸಿ ಕಡಿತಗೊಳಿಸಿರುವ ವೇತನ ಕೊಡಿಸುವ ಜೊತೆಗೆ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಕೆಆರ್‍ಎಸ್ ಉದ್ಯಾನವನವನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಸರ್ಕಾರ, ಇದರ ಜೊತೆಗೆ ಬೃಹತ್ ಕಾವೇರಿ ಮಾತೆ ಪ್ರತಿಮೆ ನಿರ್ಮಿಸುವ ಯೋಜನೆ ಹೊಂದಿದೆ. ಇದರ ಜೊತೆಗೆ ಕೆಆರ್‍ಎಸ್ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನೂ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು. ಬಿಎಸ್‍ಪಿ ನಗರಾಧ್ಯಕ್ಷ ಡಾ.ಬಸವರಾಜು, ಪಕ್ಷದ ಮುಖಂಡರಾದ ಶ್ರೀನಿವಾಸ್ ಪ್ರಸಾದ್, ಪ್ರವೀಣ್‍ಕುಮಾರ್, ಕೃಷ್ಣಕುಮಾರ್ ಗೋಷ್ಠಿಯಲ್ಲಿದ್ದರು.

Translate »