ಇಂದಿನಿಂದ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ, ಸಂಗಾಪುರ,ಪುರ ಗ್ರಾಮದ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ
ಮೈಸೂರು

ಇಂದಿನಿಂದ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ, ಸಂಗಾಪುರ,ಪುರ ಗ್ರಾಮದ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ

October 13, 2022

ಮೈಸೂರು, ಅ.12 (ಆರ್‍ಕೆಬಿ)- ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ- ಸಂಗಾಪುರ- ಪುರ ಗ್ರಾಮಗಳ ತ್ರಿವೇಣಿ ಸಂಗಮದಲ್ಲಿ ನಾಲ್ಕು ದಿನಗಳ ಶ್ರೀ ಮಲೆ ಮಹದೇಶ್ವರರ ಮಹಾ ಕುಂಭಮೇಳ-2022 ಗುರುವಾರದಿಂದ ಆರಂಭವಾಗಲಿದೆ. ಅದಕ್ಕಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಲಕ್ಷಾಂತರ ಜನರು ಮೇಳದಲ್ಲಿ ಭಾಗವಹಿಸಲಿದ್ದಾರೆ.

ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಅ.13ರಿಂದ 16ರವರೆಗೆ ನಡೆಯುವ 2ನೇ ಕುಂಭಮೇಳ ಇದಾಗಿದ್ದು, ಇದಕ್ಕೆ ಸಂಬಂಧಿ ಸಿದಂತೆ ಮೂರು ಜ್ಯೋತಿ ರಥಗಳು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದು, ಅವು ಅ.13 ರಂದು ಮಧ್ಯಾಹ್ನ 3 ಗಂಟೆಗೆ ಕೆ.ಆರ್.ಪೇಟೆ ತಲುಪಿ, ಅಲ್ಲಿ ಜಾನಪದ ಕಲಾತಂಡಗಳ ಸಹಿತ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾ ಲಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ಮೆರವಣಿಗೆ ತ್ರಿವೇಣಿ ಸಂಗಮ ತಲುಪಲಿದೆ. ನಂತರ ತ್ರಿವೇಣಿ ಸಂಗಮ ದಲ್ಲಿ ಮಲೆ ಮಹದೇಶ್ವರರ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಪೂಜಾ ಕಾರ್ಯಗಳು, ಹೋಮ ಹವನಗಳು ನಡೆಯಲಿವೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಸುತ್ತೂರು ಶಾಖಾ ಮಠದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

2ನೇ ಕುಂಭಮೇಳ: ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ 2ನೇ ಕುಂಭಮೇಳ ಇದಾಗಿದೆ. ಮೊದಲ ಕುಂಭಮೇಳ 2013ರಲ್ಲಿ ಯಶಸ್ವಿಯಾಗಿ ನಡೆದಿತ್ತು. ಅ.13ರ ಸಂಜೆ 6.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಕುಂಭಮೇಳವನ್ನು ಔಪಚಾರಿಕವಾಗಿ ಉದ್ಘಾಟಿಸ ಲಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಆದ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅಧ್ಯಕ್ಷತೆ ವಹಿಸುವರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರು ಅತಿಥಿಗಳಾಗಿ
ಭಾಗವಹಿಸುವರು ಎಂದು ಹೇಳಿದರು. ವಿರೇಂದ್ರ ಹೆಗ್ಗಡೆ ಅವರಿಂದ ಚಾಲನೆ: ಅ.14ರಂದು ಬೆಳಗ್ಗೆ 11 ಗಂಟೆಗೆ ಮಹಾಕುಂಭ ಮೇಳದ ಕಾರ್ಯಕ್ರಮಗಳನ್ನು ಧರ್ಮ ಸ್ಥಳದ ಧರ್ಮಾಧಿಕಾರಿಗಳು ಆದ ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು, ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಪೀಠಾಧಿಪತಿ ಶ್ರೀ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ಕೆ.ಆರ್.ನಗರದ ಕಾಗಿನೆಲೆ ಮಠಾಧೀಶ ಶ್ರೀ ಶಿವಾನಂದಪುರಿ ಸ್ವಾಮೀಜಿ ಸೇರಿದಂತೆ ಇನ್ನಿತರೆ ಮಠಾಧೀಶರು, ಸಾಧು ಸಂತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಧಾರ್ಮಿಕ ಸಭೆ: ಅ.15ರಂದು ಮಹಾ ಕುಂಭಮೇಳ ಧಾರ್ಮಿಕ ಸಭೆ ನಡೆಯಲಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಮಾವೇಶ ಉದ್ಘಾಟಿಸಲಿದ್ದು, ಸಚಿವ ಕೆ.ಸಿ.ನಾರಾಯಣಗೌಡ ಅಧ್ಯಕ್ಷತೆ ವಹಿಸುವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಅ.14 ಮತ್ತು 15 ರಂದು ಸಂಜೆ 7 ರಿಂದ 7.30 ರವರೆಗೆ ಲೇಸರ್ ಶೋ ಆಯೋಜಿಸಲಾಗಿದೆ ಎಂದರು.

ಮಹಾ ಕುಂಭಮೇಳದ ಪುಣ್ಯಸ್ನಾನ: ಅ.16ರಂದು ಬೆಳಗ್ಗೆ 9.30ಕ್ಕೆ ಮಹಾ ಕುಂಭ ಮೇಳದ ಪುಣ್ಯಸ್ನಾನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಹಲವು ಗಣ್ಯರು ಭಾಗವಹಿಸುವರು. ಬೆಳಗ್ಗೆ 11ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ, ಚಂದ್ರವನ ಆಶ್ರಮದ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಪಾದಂಗಳು, ಚಿತ್ರದುರ್ಗ ಮಾದಾರ ಚೆನ್ನಯ್ಯ ಮಠದ ಶ್ರೀ ಡಾ.ಬಸವಮೂರ್ತಿ ಮಾದಾರ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ ಗುರೂಜಿ, ಗುಜರಾತ್‍ನ ಹಿಂದೂ ಧರ್ಮ ಆಚಾರ್ಯ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರೋಪ ಭಾಷಣ ಮಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ವಜಾ ಅವರೋಹಣ ನೆರವೇರಿಸುವರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ರೇಷ್ಮೆ, ಯುವ ಸಬಲೀಕರಣ, ಕ್ರೀಡಾ ಸಚಿವ ಡಾ.ನಾರಾಯಣಗೌಡ ಅಧ್ಯಕ್ಷತೆ ವಹಿಸುವರು. ಸಂಸದ ಪ್ರತಾಪ್‍ಸಿಂಹ, ಶಾಶಕ ಟಿ.ಸಿ.ರವಿ ಇನ್ನಿತರರು ಭಾಗವಹಿಸುವರು. ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ತ್ರಿವೇಣಿ ಸಂಗಮದಲ್ಲಿ ‘ಭೂಮಿ ಶುದ್ಧಿ ಕಾರ್ಯ’ ಪೂರ್ಣಗೊಂಡಿದೆ ಎಂದು ಸುತ್ತೂರು ಶ್ರೀಗಳು ತಿಳಿಸಿದರು.

Translate »