ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಹೇಳಿಕೆ ಉದ್ಧಟತನದ ಪರಮಾವಧಿ
ಮೈಸೂರು

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಹೇಳಿಕೆ ಉದ್ಧಟತನದ ಪರಮಾವಧಿ

January 19, 2021
  • ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿ ನುಡಿ
  • ಸಿಎಂ ನಿಲುವಿಗೆ ಸಾಥ್ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ

ಬೆಂಗಳೂರು, ಜ.18(ಕೆಎಂಶಿ)- ಮರಾಠಿ ಭಾಷೆ ಮತ್ತು ಸಂಸ್ಕøತಿ ಪ್ರಧಾನ ಪ್ರದೇಶ ಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವುದಾಗಿ ಆ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಉದ್ಧಟತನದ ಪ್ರದರ್ಶನ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ಠಾಕ್ರೆ ಹೇಳಿಕೆ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧದ ನಿಲುವಾಗಿದೆ, ಗಡಿ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕ, ಇದನ್ನು ನಾನು ಖಂಡಿಸುವೆ, ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ. ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ, ಇಂತಹ ಸೌಹಾರ್ದ ವಾತಾವರಣ ಕೆಡಿಸುವ ಯತ್ನ ನಿಮ್ಮಿಂದ ಆಗಿರುವುದು ನೋವಿನ ಸಂಗತಿ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ನಿಲುವಿಗೆ ಬೆಂಬಲವಾಗಿ ನಿಂತಿರುವ ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕುಮಾರಸ್ವಾಮಿ, ಸರಣಿ ಟ್ವೀಟ್ ಮಾಡಿ, ಠಾಕ್ರೆ ಹೇಳಿಕೆ ಚೀನಾದ ವಿಸ್ತೀರ್ಣವಾದವನ್ನು ಪ್ರತಿಧ್ವನಿಸುವುದಾಗಿದೆ, ಬಹುತೇಕ ಕನ್ನಡಿಗ ರಾಜರು, ಮಹಾರಾಷ್ಟ್ರದ ಬಹುಪಾಲನ್ನು ಆಳಿದ್ದಾರೆ.

ಕನ್ನಡಿಗರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಠಾಕ್ರೆ ಈ ಇತಿಹಾಸವನ್ನು ಅವಲೋಕಿಸಿದರೆ, ಈಗ ಯಾರು, ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎಂಬುದು ತಿಳಿಯುತ್ತದೆ. ಸಹಬಾಳ್ವೆ ನಡೆಸುತ್ತಿರುವವರಲ್ಲಿ ವಿಷ ಬೀಜ ಬಿತ್ತುವುದು ದೇಶದ್ರೋಹಿ ಕೃತ್ಯ ಎನ್ನಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ, ಪ್ರತ್ಯೇಕ ಟ್ವೀಟ್ ಮೂಲಕ, ಠಾಕ್ರೆ ಹೇಳಿಕೆ ಅಧಿಕಪ್ರಸಂಗತನ ಎಂದಿದ್ದಾರೆ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ, ಕರ್ನಾಟಕದ ನೆಲ-ಜಲ ಮತ್ತು ಭಾಷೆ ರಕ್ಷಣೆ ನಮ್ಮೆಲ್ಲರ ಕರ್ತವ್ಯ, ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ ಎಂದಿದ್ದಾರೆ.

 

 

Translate »