ಮಹಿಷ ರಾಕ್ಷಸನಲ್ಲ… ಜನರ ರಕ್ಷಕ
ಮೈಸೂರು

ಮಹಿಷ ರಾಕ್ಷಸನಲ್ಲ… ಜನರ ರಕ್ಷಕ

October 8, 2018

ಮೈಸೂರು:  ಮಹಿಷ ರಾಕ್ಷಸನಲ್ಲ… ಆತ ಜನರ ರಕ್ಷಕ. ಬುದ್ಧನ ತತ್ವವನ್ನು ಎತ್ತಿ ಹಿಡಿದ ಆತನನ್ನು ರಾಕ್ಷಸನನ್ನಾಗಿ ಚಿತ್ರಿಸಿದ್ದಾರೆ ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಸಮಿತಿ ಆಯೋಜಿಸಿದ್ದ ಮಹಿಷ ದಸರಾ ಕಾರ್ಯಕ್ರಮದಲ್ಲಿ ವ್ಯಕ್ತವಾದ ಅಭಿಪ್ರಾಯವಿದು.

ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆ ಬಳಿ ಭಾನುವಾರ ನಡೆದ ಸಮಾರಂಭದಲ್ಲಿ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ವಿಚಾರ ವಾದಿಗಳಾದ ಪ್ರೊ.ಕೆ.ಎಸ್.ಭಗವಾನ್, ಪ್ರೊ. ಮಹೇಶ್‍ಚಂದ್ರು, ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಇನ್ನಿತರರು ಮಹಿಷ ರಾಕ್ಷಸನಲ್ಲ. ಆತ ಜನರಕ್ಷಕ ಎಂದು ಪ್ರತಿ ಪಾದಿಸಿದರು. ಮೊದಲಿಗೆ ಸಂವಿಧಾನದ ಪ್ರಸ್ತಾವನೆಯ ವಿಧಿಬೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ಮಹಿಷ ಈ ನಾಡಿದ ದೊರೆ. ಬುದ್ಧನ ಅನುಯಾಯಿ. ಚಾಮುಂಡಿಬೆಟ್ಟದ ಹೆಸರು ಇದ್ದದ್ದು ಮಹಾಬಲಗಿರಿ ಎಂದು. ದಾನವರು, ಅಸುರರು ತಪಸ್ಸನ್ನಾಚರಿಸಿ ಸ್ವಯಂ ಸಿದ್ಧಿ ಪಡೆದವರು. ಅವರು ಯಜ್ಞ, ಯಾಗ, ಹೋಮಗಳನ್ನು ಮಾಡುವುದಿಲ್ಲ. ಹೀಗಾಗಿ ಅವರು ಅತಿ ಬಲರು ಎಂದರು.

ನಾವು ಮೂಲ ನಿವಾಸಿಗಳು ಮಹಿಷ ನಮ್ಮ ದೊರೆ, ಆತನಿಗೆ ಅಸುರ ಎಂಬ ಅವ ಮಾನಕರ ಹೆಸರೇಕೆ? ಎಂದು ಪ್ರಶ್ನಿಸಿದರು. ಪುರಾಣಗಳಲ್ಲಿ ಸ್ವಹಿತಾಸಕ್ತಿ ಇದೆ. ಮಹಿಷ ಈ ರೀತಿ ಬಿಸಿಲಿನಲ್ಲಿ ನಿಂತಿರಬೇಕಾದುದಲ್ಲ. ಮಹಿಷ ಬಿಚ್ಚುಗತ್ತಿ ಎತ್ತಿ ಹಿಡಿದಿರುವುದು ಶೌರ್ಯದ ಸಂಕೇತ. ಸೋಲೊಪ್ಪದೇ ಸ್ವಾಭಿ ಮಾನಿಯಾಗಿ ಬದುಕಿನ ನಮ್ಮ ಪೂರ್ವಿಕರೇ ನಮ್ಮ ಶಕ್ತಿ. ನಮ್ಮ ಹಿರಿಯರ ಪ್ರತಿಮೆಗಳನ್ನು ಗೌರವಿಸುವ ಕಲೆಯನ್ನು ಕಲಿಯೋಣ. ಇಂದು ಸಾಂಸ್ಕøತಿಕ ಜಾಗೃತಿಯ ಆಚರಣೆಗಳು ಹೆಚ್ಚು ನಡೆಯಬೇಕು. ನಮ್ಮ ಸಂಸ್ಕೃತಿ ರಕ್ಷಿಸಬೇಕು ಎಂದು ಅಭಿಪ್ರಾಯಪಟ್ಟರು.

ಮಹಿಷ ದಸರಾ ಆಚರಣೆ ಕುರಿತು ಪ್ರಸ್ತಾಪಿಸಿದ ಅವರು, ಇದೊಂದು ಭಿನ್ನ ವಾದ, ನಮ್ಮತನವನ್ನು, ನಮ್ಮ ಸಂಸ್ಕøತಿ ಯನ್ನು ಮರು ಸ್ಥಾಪನೆ ಮಾಡುವ ಕಾರ್ಯ ಕ್ರಮ. ಸಂವಿಧಾನದ ಆಧಾರದಲ್ಲಿ ಮಹಿಷ ದಸರಾ ಆಚರಿಸುತ್ತಿದ್ದೇವೆ. ಸಮಾನತೆ ಇದ್ದರೆ ಮಾತ್ರ ಭ್ರಾತೃತ್ವ ಬರುತ್ತದೆ. ಅಸಮಾನತೆ ಇದ್ದರೆ ಗುಲಾಮತನ ಬರುತ್ತದೆ. ನಮ್ಮ ಅಸ್ಮಿತೆಯನ್ನು ಪುನರ್ ಗಳಿಸುವಂತಹ ಹಾದಿ ಇದು ಎಂದು ಹೇಳಿದರು.

ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಪುರಾಣಗಳಲ್ಲಿ ರಾಕ್ಷಸರು ಎಂದು ಚಿತ್ರಿಸಿರುವವರೆಲ್ಲರೂ ಬೌದ್ಧರು. ಅವರೆಲ್ಲರೂ ಸಮಾನತಾವಾದಿಗಳು. ಚಾತುರ್ವರ್ಣವನ್ನು ವಿರೋಧಿಸಿದವರು. ಹೀಗಾಗಿ ಮನುವಾದಿಗಳು ಅವರನ್ನು ರಾಕ್ಷಸ ರನ್ನಾಗಿ ಚಿತ್ರಿಸಿದ್ದಾರೆ ಎಂದು ಹೇಳಿದರು.

ರಾಮನ ದೇವಸ್ಥಾನ ಕಟ್ಟಲು ಮುಂದಾಗಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಕೋಟ್ಯಂತರ ರೂ. ಖರ್ಚು ಮಾಡಿ ರಾಮನ ದೇವ ಸ್ಥಾನ ಕಟ್ಟುವ ಬದಲು ಅದೇ ಹಣವನ್ನು ಜಲಾಶಯ, ಶಾಲಾ-ಕಾಲೇಜುಗಳ ನಿರ್ಮಾಣ ಇನ್ನಿತರ ಅಭಿವೃದ್ಧಿಗೆ ಖರ್ಚು ಮಾಡುವ ಲವಲೇಶದ ಜ್ಞಾನವೂ ಅವರಲ್ಲಿಲ್ಲ ಎಂದರು.

`ಯಾವ ದೇವರಿಂದಲೂ ಉದ್ಧಾರ ಸಾಧ್ಯವಿಲ್ಲ. ದೇವರುಗಳನ್ನು ಗಟಾರಕ್ಕೆ ಬಿಸಾಡಿ’ ಎಂದು ಬಿ.ಬಸವಲಿಂಗಪ್ಪ ಅಂದೇ ಸಾರಿದ್ದರು. ಹೀಗಾಗಿ ದೇವರ ಪೂಜೆ ಬಿಡಿ. ಬೌದ್ಧನ ತತ್ವ ಸಿದ್ದಾಂತಗಳಿಂದಲೇ ನಮ್ಮ ದೇಶದ ಅಭಿವೃದ್ಧಿ ಸಾಧ್ಯ. ಸ್ವಾಮಿ ವಿವೇಕಾನಂದರು ಸಹ ಅಮೆರಿಕಾದಲ್ಲಿ ನಾನೊಬ್ಬ ಬೌದ್ಧ ಎಂದೇ ತಮ್ಮ ಭಾಷಣ ಆರಂಭಿಸಿದ್ದರು. ಭಾರತ ದೇಶದಲ್ಲಿ ಶೆ.75ರಷ್ಟು ಭಾಗ ಬೌದ್ಧರಿದ್ದರು ಎಂದು ಹೇಳಿದ್ದರು ಎಂದರು.

ದೇಶದಲ್ಲಿ ಸಂವಿಧಾನ ಮತ್ತು ಸಂಪ್ರದಾ ಯದ ನಡುವೆ ಘರ್ಷನೆ ಉಂಟಾಗಿದೆ. ನಮ್ಮದು ಮೂಲ ಸಂಸ್ಕೃತಿ, ಇನ್ನೊಂದು ವಲಸೆ ಸಂಸ್ಕೃತಿ. ಇವೆರಡಕ್ಕೂ ಘರ್ಷಣೆ ಏರ್ಪಟ್ಟಿದೆ ಎಂದ ಅವರು, ಇಂದಿನ ಜಾತಿ ವ್ಯವಸ್ಥೆ ಅವೈಜ್ಞಾ ನಿಕವಾದದ್ದು. ಯಾವ ದೇಶದಲ್ಲಿಯೂ ಇಂತಹ ಜಾತಿ, ಮೇಲು-ಕೀಳು ವ್ಯವಸ್ಥೆ ಇಲ್ಲ. ಇದನ್ನು ತೊಡೆದು ಹಾಕಲು ಬುದ್ದ, ಅಂಬೇಡ್ಕರ್ ಸಾರಿದ ಸಮಾನತೆ ಬರಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಬೇಕು ಎಂದು ಹೇಳಿದರು.

ನಾನು ಹಿಂದುವಾಗಿ ಬದುಕಲಾರೆ ಎಂಬ ಪ್ರತಿಜ್ಞೆ: ಮತ್ತೊಬ್ಬ ವಿಚಾರವಾದಿ ಪ್ರೊ. ಮಹೇಶ್‍ಚಂದ್ರಗುರು ಮಾತನಾಡಿ, ಮಹಿಷ ಯಾವತ್ತೂ ರಾಕ್ಷಸನಾಗಿರಲಿಲ್ಲ. 3ನೇ ಶತಮಾನದಲ್ಲಿ ಅಶೋಕನ ಸೂಚನೆ ಮೇರೆಗೆ ಮಹಿಷ ಬೌದ್ಧ ಧರ್ಮ ಪ್ರಚಾರಕ್ಕೆ ಬರುತ್ತಾನೆ. ಬೌದ್ಧ ಧಮ್ಮ ಪ್ರಚಾರದ ಮೂಲಕ ಸಮಾನತೆ ಪ್ರತಿಪಾದಿಸುತ್ತಾನೆ. ಆದರೆ ವೈದಿಕ ಶಾಹಿಗಳು ಕುತಂತ್ರ ನಡೆಸಿ ಚಾಮುಂಡಿ ಯನ್ನು ಸೃಷ್ಟಿಸಿ, ಮಹಿಷನನ್ನು ಕೊಲ್ಲಿಸಿ ದ್ದಾರೆ ಎಂದು ಅಭಿಪ್ರಾಯಪಟ್ಟರು.

ಮಹಿಷ ನಮ್ಮ ದೇವರು, ಮಹಾ ದೊರೆ, ಶಾಂತಿ, ಸಮಾನತೆಯ ಸಂಕೇತ. ಸಮಾನತೆ ಬಯಸುವ ಜನರು ನಾವು ಹಿಂದುಗಳಲ್ಲ ಎಂದು ಸಾರಿ ಹೇಳಬೇಕು. ನಾನು ಬೌದ್ಧ, ಹಿಂದುವಾಗಿ ಬದುಕಲಾರೆ ಎಂದು ಪ್ರತಿಜ್ಞೆ ಸ್ವೀಕರಿಸಬೇಕು.

ಇದೇ ಸಂದರ್ಭದಲ್ಲಿ ಸಿದ್ದಸ್ವಾಮಿ ಬರೆದ `ಮಹಿಷ ಮಂಡಲದ ದೊರೆ’ ಪುಸ್ತಕವನ್ನು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಬಿಡು ಗಡೆ ಮಾಡಿದರು. ವಿಚಾರವಾದಿ ಪ್ರೊ.ಕೆ. ಎಸ್.ಭಗವಾನ್, ಪ್ರೊ.ಮಹೇಶ್‍ಚಂದ್ರ ಗುರು, ದಸಂಸ ಮುಖಂಡರಾದ ಹರಿಹರ ಆನಂದಸ್ವಾಮಿ, ಸೋಮಯ್ಯ ಮಲೆಯೂರು, ಕೃಷ್ಣಮೂರ್ತಿ ಚಮರಂ ಅವರಿಗೆ ಮಹಿಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಪ್ರಸನ್ನ, ಬೆಟ್ಟಯ್ಯ ಕೋಟೆ, ಚಂದ್ರಹಾಸ್, ಸಿದ್ದ ಸ್ವಾಮಿ, ಶಾಂತರಾಜು ಅವರಿಗೂ ಮಹಿಷ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬೋಧಿದತ್ತ ಭಂತೇಜಿ, ಬಸವ ನಾಗಿದೇವರು ಸ್ವಾಮೀಜಿ, ಸೂಪಿ ಸಂತ ಅಜೀಮ್ ಆಲಿಷಾ, ಮಾಜಿ ಮೇಯರ್ ಪುರುಷೋತ್ತಮ್, ಮಾಜಿ ಎಂಎಲ್‍ಸಿ ಪುಟ್ಟಸಿದ್ದಶೆಟ್ಟಿ, ಲೇಖದ ಎನ್.ಆರ್. ಶಿವರಾಂ, ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ, ಜಿ.ಎಂ.ಗಾಡ್ಕರ್, ಮುಳ್ಳೂರು ಶಿವಮಲ್ಲು, ಹರಿಹರ ಆನಂದಸ್ವಾಮಿ, ಸೋಮಯ್ಯ ಮಲೆಯೂರು, ದೇವಗಳ್ಳಿ ಸೋಮಶೇಖರ್, ಅಹಿಂದ ಜವರಪ್ಪ, ದ್ಯವಪ್ಪ ನಾಯಕ ಇನ್ನಿತರರು ಭಾಗವಹಿಸಿದ್ದರು.

`ಮಹಿಷ ದಸರಾ’ ಭಾರೀ ಮೆರವಣಿಗೆ

ಮೈಸೂರು: ಮಹಿಷ ದಸರಾ ಆಚರಣಾ ಸಮಿತಿ ಮೈಸೂರಿನಲ್ಲಿ ಆಯೋಜಿಸಿದ್ದ ಮಹಿಷ ದಸರಾ ರ‍್ಯಾಲಿಗೆ ಶಾಸಕ ಸತೀಶ್ ಜಾರಕಿಹೊಳಿ ಮೈಸೂರಿನ ಪುರಭವನ ಆವರಣದಲ್ಲಿ ಚಾಲನೆ ನೀಡಿದರು. ಮಹಿಷಾಸುರನ ದೊಡ್ಡ ಭಾವ ಚಿತ್ರ ಹೊತ್ತ ಅಲಂಕೃತ ರಥಕ್ಕೆ ಉದ್ಘಾ ಟನೆ ನೆರವೇರಿಸಿದವರು. ಅಲ್ಲಿಂದ ಹೊರಟ ಮಹಿಷ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಚಾಮುಂಡಿಬೆಟ್ಟದ ಕಡೆಗೆ ಸಾಗಿತು. ಮೆರವಣಿಗೆ ಉದ್ದಕ್ಕೂ ಪೂಜಾ ಕುಣಿತ ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನ ಪದ ಕಲಾತಂಡಗಳು ಭಾಗವಹಿಸಿದ್ದವು.

ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ವಿಚಾರವಾದಿಗಳಾದ ಪ್ರೊ.ಕೆ.ಎಸ್. ಭಗವಾನ್, ಪ್ರೊ.ಮಹೇಶ್‍ಚಂದ್ರುಗುರು, ಮಾಜಿ ಮೇಯರ್ ಪುರುಷೋತ್ತಮ್, ಬೋಧಿ ದತ್ತ ಭಂತೇಜಿ, ಸೂಪಿ ಸಂತ ಅಜೀಮ್ ಆಲಿಷಾ, ಹಿಂದುಳಿದ ವರ್ಗ ಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಮಾಜಿ ಎಂಎಲ್‍ಸಿ ಪುಟ್ಟಸಿದ್ದಶೆಟ್ಟಿ, ಮುಖಂಡರಾದ ಮಹೇಶ್ ಸೋಸ್ಲೆ, ಸೀಹಳ್ಳಿ ರಾಜೂಗೌಡ, ಮಂಜು ನಾಥಸ್ವಾಮಿ ಸೇರಿದಂತೆ ಮಂಡ್ಯ, ಚಾಮ ರಾಜನಗರ, ಕೋಲಾರ, ಹಾಸನ ಜಿಲ್ಲೆಗಳ ಅನೇಕ ಮುಖಂಡರು ಇದ್ದರು.

Translate »