ಅ.7ರಂದು ಮಹಿಷ ದಸರಾ,  ಬೈಕ್ ರ‍್ಯಾಲಿ, ವಿಚಾರಗೋಷ್ಠಿ
ಮೈಸೂರು

ಅ.7ರಂದು ಮಹಿಷ ದಸರಾ,  ಬೈಕ್ ರ‍್ಯಾಲಿ, ವಿಚಾರಗೋಷ್ಠಿ

October 4, 2018

ಮೈಸೂರು: ಮೈಸೂರು ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಅ.7ರಂದು ಮೈಸೂರಿನಲ್ಲಿ ಮಹಿಷ ದಸರಾ ಸಾಂಸ್ಕೃತಿಕ ಹಬ್ಬ ಆಚರಿಸಲಾಗುವುದು. ಅಂದು ಬೈಕ್ ರ‍್ಯಾಲಿ ಹಾಗೂ ವಿಶೇಷ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಮೈಸೂ ರಿನ ಪುರಭವನದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆವ ರೆಗೆ ಬೈಕ್ ರ‍್ಯಾಲಿ ನಡೆಯಲಿದೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಅಷ್ಟಾಂಗ ಧ್ಯಾನ ಕೇಂದ್ರದ ಭಂತೇ ಬೋಧಿದತ್ತ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬಳಿಕ ಚಾಮುಂಡಿಬೆಟ್ಟದ ಬಿ.ಬಸವ ಲಿಂಗಪ್ಪ ವೇದಿಕೆಯಲ್ಲಿ `ಮಹಿಷ ಮಂಡಲದ ಮಹಾದೊರೆ’ ವಿಚಾರ ಸಂಕಿರಣವನ್ನು ಪ್ರಗತಿ ಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿ, ನಂತರ ಸಿದ್ದಸ್ವಾಮಿ ರಚಿಸಿರುವ `ಬೌದ್ಧರಾಜ ಮಹಿಷಾಸುರ’ ಪುಸ್ತಕ ಬಿಡುಗಡೆ ಮಾಡುವರು. ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಸಿದ್ದಸ್ವಾಮಿ ಅಧ್ಯಕ್ಷತೆ ವಹಿಸುವರು. ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಪ್ರೊ. ಮಹೇಶ್ ಚಂದ್ರಗುರು, ಪ್ರೊ.ಕಾಳೇಗೌಡ ನಾಗವಾರ ಇನ್ನಿತರರು ಅತಿಥಿಗಳಾಗಿ ಭಾಗವಹಿಸು ವರು. ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್, ಪ್ರೊ.ಮಹೇಶ್‍ಚಂದ್ರ ಗುರು ವಿಚಾರ ಮಂಡಿಸುವರು. ಪ್ರೊ.ಕಾಳೇಗೌಡ ನಾಗವಾರ ಇನ್ನಿತರರು ಭಾಗವಹಿಸುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಮಹೇಶ್ ಚಂದ್ರ ಗುರು ಉಪಸ್ಥಿತರಿದ್ದರು.

Translate »