ಸಂಚಾರ ನಿಯಮ ಉಲ್ಲಂಘನೆ 14,456 ಪ್ರಕರಣಗಳಲ್ಲಿ 14,74,500 ದಂಡ ವಸೂಲಿ
ಮೈಸೂರು

ಸಂಚಾರ ನಿಯಮ ಉಲ್ಲಂಘನೆ 14,456 ಪ್ರಕರಣಗಳಲ್ಲಿ 14,74,500 ದಂಡ ವಸೂಲಿ

October 8, 2018

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ಎಫ್‍ಟಿವಿಆರ್ ನೋಟೀಸ್‍ಗಳಿಗೆ ದಂಡ ಪಾವತಿಸದೇ ಇರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 14,456 ಪ್ರಕರಣಗಳಿಂದ ಒಟ್ಟು 14,74,500 ರೂ. ದಂಡ ಸಂಗ್ರಹ ವಾಗಿದೆ. ಮೈಸೂರು ನಗರ ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಪೊಲೀಸ್ ಸಿಬ್ಬಂದಿಗಳು ಮತ್ತು ಸಿಸಿಟಿವಿಗಳಿಂದ ಫೋಟೋ ತೆಗೆದು ಸಂಬಂಧಪಟ್ಟ ವಾಹನ ಮಾಲೀಕರಿಗೆ ದಂಡ ಕಟ್ಟುವಂತೆ ಅಂಚೆ ಮೂಲಕ ನೋಟೀಸ್‍ಗಳನ್ನು ಕಳುಹಿಸಲಾಗಿತ್ತು.

ಈ ನೋಟೀಸ್‍ಗಳಿಗೆ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದವರ ವಿರುದ್ಧ ನಗರ ಸಂಚಾರ ಪೊಲೀಸರು ಕಳೆದೆರಡು ದಿನಗಳಿಂದ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಗರದಲ್ಲಿ ಸಂಚರಿಸುವ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನೋ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಪರಿಶೀಲನೆಗೆ ಒಳಪಡಿಸಿ, ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಂದ 14,74,500 ರೂ. ದಂಡ ಕಟ್ಟಿಸಿ ಬಿಡುಗಡೆಗೊಳಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆ ಮುಂದು ವರೆದಿದ್ದು, ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಕೂಡಲೇ ಹತ್ತಿರದ ಸಂಚಾರ ಠಾಣೆಗಳಲ್ಲಿ ದಂಡ ಪಾವತಿಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

Translate »