ಹುಣಸೂರು: ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ವಿದ್ದರೂ, ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಅವರ ಸರ್ವಾಧಿಕಾರವೇ ಕಾರಣವಾಗಿದೆ ಎಂದು ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ಆ ಸಮುದಾಯಕ್ಕೆ ರಾಜಕೀಯ ಶಕ್ತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಸಮಾಜಗಳಿಗೆ ರಾಜಕೀಯ ಶಕ್ತಿ ನೀಡಿದೆ ಎಂದರು.
ಪಕ್ಷ ಸಮಾಜದ ಅತ್ಯಂತ ಸಣ್ಣಕೋಮಿಗೆ ಸೇರಿದ ಮೋಚಿ ಸಮುದಾಯದ ಎಚ್.ವೈ. ಮಹದೇವು ಅವರನ್ನು ಗುರುತಿಸಿ ಅವರಿಗೆ ನಗರಸಭೆಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮೋಚಿ ಸಮುದಾಯ ಸಮಾಜದಲ್ಲಿ ಧ್ವನಿ ಮಾಡಲು ರಾಜಕೀಯ ಶಕ್ತಿ ನೀಡಿದೆ ಎಂದು ತಿಳಿಸಿದರು.
ಹುಣಸೂರು ನಗರ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದು, ದಶಕಗಳಿಂದ ಸ್ಥಗಿತಗೊಂಡಿರುವ ನಿವೇಶನ ವಿತರಣೆ ಯೋಜನೆಗೆ ಚಾಲನೆ ನೀಡಬೇಕು. ಬಡವರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಕ್ರಮವನ್ನು ನಗರಸಭೆಯಿಂದ ರೂಪಿಸಬೇಕು ಎಂದು ನೂತನ ಅಧ್ಯಕ್ಷ ಎಚ್.ವೈ.ಮಹದೇವು ಅವರಿಗೆ ಸಲಹೆ ನೀಡಿದರು.
ಮಾಜಿ ಶಾಸಕ ದಿ.ಪಾಪಣ್ಣ ಅವರ ಅವಧಿಯಲ್ಲಿ ಬಡವರಿಗೆ ನಿವೇಶನ ವಿತರಿಸಿದ ಬಳಿಕ, ಯಾವುದೇ ಶಾಸಕರು ಬಡವರಿಗೆ ನಿವೇಶನ ವಿತರಿಸುವ ಸಾಹಸಕ್ಕೆ ಕೈ ಹಾಕಿಲ್ಲ. ಈಗ ಜೆಡಿಎಸ್ ಆಡಳಿತದಲ್ಲಿ ನಗರಸಭೆ ವತಿಯಿಂದ ಈಗಾಗಲೆ 8 ಎಕರೆ ಭೂಮಿ ಖರೀದಿಸಿದ್ದು, ಅತಿ ಶೀಘ್ರದಲ್ಲಿಯೇ ಕೊಳಗೇರಿಯ ಬಡವರಿಗೆ ಬಹುಮಹಡಿ ಮನೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ನಗರದಲ್ಲಿ ಪುಟ್‍ಪಾತ್ ಇಲ್ಲದರಿಂದ ಜನರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಎದುರಾಗಿದ್ದು, ಈ ಸಂಬಂಧ ನಗರದ ಪ್ರಮುಖ ರಸ್ತೆಗಳಲ್ಲಿ ಪುಟ್‍ಪಾತ್ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ನಗರಾಭಿವೃದ್ಧಿಗೆ ಜಾಗೃತಿ ಸಮಿತಿ ರಚಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಹಿಂದಿನ ಶಾಸಕರ ಅವಧಿಯಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನ.1 ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡಲು ಬದ್ಧರಾಗಿದ್ದೇವೆ. ಸಾರ್ವಜನಿಕರಿಗೆ ಶುದ್ಧ ನೀರು ಸಿಗುವ ದಿಕ್ಕಿನಲ್ಲಿ ನಗರಸಭೆ ಈ ಘಟಕಗಳಿಗೆ ನೀರು ಸಂಪರ್ಕ ಕಲ್ಪಿಸುವ ಕೆಲಸ ಮಾಡ ಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಾದೇಗೌಡ, ನಗರಸಭೆ ಅಧ್ಯಕ್ಷ ಎಚ್.ವೈ.ಮಹದೇವು, ಸದಸ್ಯರಾದ ಪ್ರೇಮ ನಂಜಪ್ಪ. ಸುನಿತಾ ಜಯರಾಮೆಗೌಡ, ನಸ್ರುಲ್ಲಾ, ಎಚ್.ಪಿ.ಸತೀಶ್, ಯೋಗಾನಂದ, ಜಿ.ಶ್ರೀನಿವಾಸ್, ಶಿವರಾಜ್, ಡಿ.ಕೆ.ಕುನ್ನೇಗೌಡ, ಅಣ್ಣಯ್ಯನಾಯಕ, ತಟ್ಟೆಕೆರೆ ಸುರೇಶ್, ಮಹಮದ್‍ಪೀರ್, ಶಿವಶೇಖರ್, ಎಪಿಎಂಸಿ ಅಧ್ಯಕ್ಷ ಕುಮಾರ್, ಮುಖಂಡರಾದ ಚಿಕ್ಕ ಹುಣಸೂರು ಗೊವಿಂದೇಗೌಡ, ಬಿ.ಕೆ.ಪರ ಮೇಶ್, ಧನಲಕ್ಷ್ಮಿರಾಜಣ್ಣ, ಎಂ.ಶಿವಕುಮಾರ್, ಗಣೇಶ್‍ಗೌಡ, ಹಜರತ್‍ಜಾನ್, ಹಾಜರಿದ್ದರು.