ಸೈಕಲ್ ಅಗರಬತ್ತಿ ಪ್ಯಾಕೇಜಿಂಗ್ ಗೋದಾಮಿನಲ್ಲಿ ಭಾರೀ ಬೆಂಕಿ
ಮೈಸೂರು

ಸೈಕಲ್ ಅಗರಬತ್ತಿ ಪ್ಯಾಕೇಜಿಂಗ್ ಗೋದಾಮಿನಲ್ಲಿ ಭಾರೀ ಬೆಂಕಿ

June 11, 2018
  • ಸುಮಾರು 1 ಕೋಟಿ ರೂ. ಮೌಲ್ಯದ ಪೇಪರ್ ವಸ್ತು ನಾಶ
  • 12 ಅಗ್ನಿಶಾಮಕ ದಳದ ವಾಹನ, 50 ಮಂದಿಯಿಂದ ಸತತ 8 ತಾಸು ಕಾರ್ಯಾಚರಣೆ
  • ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಘಟನೆಗೆ ಕಾರಣ

ಮೈಸೂರು: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಭಾರೀ ಬೆಂಕಿಗೆ ಅಗರಬತ್ತಿ ಪ್ಯಾಕೇಜಿಂಗ್ ಗೋದಾಮಿನ ಸುಮಾರು ಒಂದು ಕೋಟಿ ರೂ. ಮೌಲ್ಯದ ಪೇಪರ್ ವಸ್ತುಗಳು ಭಸ್ಮವಾಗಿರುವ ಘಟನೆ ಮೈಸೂರಿನ ಅಶೋಕಪುರಂ ರೈಲ್ವೆ ಸ್ಟೇಷನ್ ಬಳಿ ಇಂದು ಮುಂಜಾನೆ ಸಂಭವಿಸಿದೆ.

ಹಳೇ ಮಾನಂದವಾಡಿ ರಸ್ತೆಯ ಎನ್‍ಆರ್ ಗ್ರೂಪ್‍ಗೆ ಸೇರಿದ ರಂಗರಾವ್ ಅಂಡ್ ಸನ್ಸ್ ಸೈಕಲ್ ಅಗರಬತ್ತಿ ಪ್ಯಾಕೇಜಿಂಗ್ ಗೋದಾಮಿನಲ್ಲಿ ಇಂದು ಮುಂಜಾನೆ 2.40 ಗಂಟೆ ವೇಳೆ ಭಾರೀ ಸದ್ದು ಕೇಳಿದ ಹಿನ್ನೆಲೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಕೃಷ್ಣ ಎಂಬುವರು ಎದ್ದು ನೋಡುವಷ್ಟರಲ್ಲಿ ಗೋದಾಮಿನ ಹಿಂಬದಿ ಕಟ್ಟಡದ ಅರ್ಧ ಭಾಗದಲ್ಲಿ ಬೆಂಕಿ ಧಗಧಗನೆ ಉರಿಯುತ್ತಿತ್ತು.

ತಕ್ಷಣ ಕೃಷ್ಣ ತಮ್ಮ ಮುಖ್ಯಸ್ಥರು ಹಾಗೂ ಅಗ್ನಿಶಾಮಕ ಠಾಣೆ 101ಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಮಾಹಿತಿ ತಲುಪುತ್ತಿದ್ದಂತೆಯೇ ಸರಸ್ವತಿಪುರಂ, ಬನ್ನಿಮಂಟಪ ಹಾಗೂ ಹೆಬ್ಬಾಳುವಿನಲ್ಲಿರುವ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು.

ಅಷ್ಟರಲ್ಲಾಗಲೇ ಗೋದಾಮಿನ ಪೂರ್ಣ ಭಾಗ ಅಗ್ನಿಯಿಂದ ಆವೃತ್ತವಾಗಿದ್ದರಿಂದ 12 ಅಗ್ನಿಶಾಮಕ ಟ್ಯಾಂಕರ್‍ಗಳ ಮೂಲಕ 50 ಮಂದಿ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರೂ ಸೈಕಲ್ ಪ್ಯೂರ್ ಅಗರಬತ್ತಿ ಪ್ಯಾಕೇಜ್‍ನ ಪೇಪರ್ ಮೆಟೀರಿಯಲ್‍ಗಳು ನೋಡ ನೋಡುತ್ತಿದ್ದಂತೆಯೇ ಸುಟ್ಟು ಬೂದಿಯಾದವು.

ಖಾಸಗಿ ಟ್ಯಾಂಕರ್‍ಗಳೂ ನೀರನ್ನು ತಂದು ಪೂರೈಸಿದವರಾದರೂ, ಮಧ್ಯಾಹ್ನ 12.30 ಗಂಟೆವರೆಗೂ ಬೆಂಕಿ ಆರಿಸಲು ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು. ಮುಖ್ಯ ಅಗ್ನಿಶಾಮಕ ಅಧಿಕಾರಿ ಯು.ಎ.ರೌಸರ್, ಉಪ ಅಗ್ನಿಶಾಮಕ ಅಧಿಕಾರಿಗಳಾದ ಈಶ್ವರನಾಯಕ, ಮಹದೇವ್, ಭರತ್ ಕುಮಾರ್, ಫೈಯರ್ ಸ್ಟೇಷನ್ ಆಫೀಸರ್ ನಾಗರಾಜ ಅರಸ್ ನೇತೃತ್ವದಲ್ಲಿ 50 ಮಂದಿ ಸಿಬ್ಬಂದಿ ಗೋದಾಮಿನ ಬೆಂಕಿ ನಂದಿಸಲು ಶ್ರಮಿಸಿದರು.

ಬೆಂಕಿ ಹೊತ್ತಿಕೊಂಡಿದ್ದರಿಂದ ದಟ್ಟ ಹೊಗೆ ಆವರಿಸಿದ ಪರಿಣಾಮ ಶಾಖಕ್ಕೆ ಗೋದಾಮಿನ ಛಾವಣಿಗಳು ಸ್ಫೋಟಗೊಂಡಿವೆಯಲ್ಲದೆ, ಗೋಡೆಗಳು ಉರುಳು ಬಿದ್ದಿವೆ. ಕಂಪನಿಯ ಜನರಲ್ ಮ್ಯಾನೇಜರ್ ಸುರೇಶ್ ಪ್ರಕಾರ ಮುಂಜಾನೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿರುವುದರಿಂದ ಗೋದಾಮಿಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ.

ಜಯಪ್ರಕಾಶ್ ಕಟ್ಟಡದ ಮಾಲೀಕರಾಗಿದ್ದು, ಎನ್‍ಆರ್ ಗ್ರೂಪ್ ಕಂಪನಿಯು ಬಾಡಿಗೆಗೆ ಪಡೆದು ಅಗರಬತ್ತಿ ಪ್ಯಾಕೇಜಿಂಗ್ ಯುನಿಟ್ ನಡೆಸುತ್ತಿದೆ. ಅಲ್ಲಿ ಪ್ರತಿದಿನ ಸುಮಾರು 150 ಮಂದಿ ಕೆಲಸ ಮಾಡುತ್ತಾರೆ. ಒಂದು ವೇಳೆ ಹಗಲಿನ ವೇಳೆ ಘಟನೆ ಸಂಭವಿಸಿದ್ದರೆ ಭಾರೀ ಪ್ರಾಣಹಾನಿ ಸಂಭವಿಸುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ವ್ಯಾಲ್ಯೂಯರ್ಸ್ ಬಂದು ಮೌಲ್ಯಮಾಪನ ಮಾಡಿದ ನಂತರ ಭಸ್ಮವಾಗಿರುವ ವಸ್ತುಗಳು ಒಟ್ಟು ಮೌಲ್ಯ ಎಷ್ಟು ಎಂಬುದು ತಿಳಿಯುತ್ತದೆ. ಈಗ ಮೇಲ್ನೋಟಕ್ಕೆ ಸುಮಾರು 1 ಕೋಟಿ ರೂ. ಮೌಲ್ಯದಷ್ಟು ನಷ್ಟ ಉಂಟಾಗಿರಬಹುದೆಂದೆನಿಸುತ್ತದೆ ಎಂದು ಸುರೇಶ್ ಸುದ್ದಿಗಾರರಿಗೆ ತಿಳಿಸಿದರು. ಗೋದಾಮಿನಲ್ಲಿ ಧಗಧಗನೆ ಹೊತ್ತಿ ಉರಿಯುತ್ತಿದ್ದ ಬೆಂಕಿ ಜ್ವಾಲೆ ಅಕ್ಕಪಕ್ಕದ ಕಟ್ಟಡಗಳಿಗೆ ತಗಲದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರಮವಹಿಸಿದರು. ಈ ದೃಶ್ಯ ನೋಡಲು ಸಾವಿರಾರು ಮಂದಿ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಹಸ ಸಾಹಸ ಪಡಬೇಕಾಯಿತು.

ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ, ಅಶೋಕಪುರಂ ಠಾಣೆ ಇನ್ಸ್‍ಪೆಕ್ಟರ್ ವಿನಯ್, ಸರಸ್ವತಿಪುರಂನ ಸುರೇಶ್ ಕುಮಾರ್, ವಿದ್ಯಾರಣ್ಯಪುರಂನ ಓಂಕಾರಪ್ಪ ನೇತೃತ್ವದಲ್ಲಿ ಕೆ.ಆರ್. ಉಪವಿಭಾಗದ ಎಲ್ಲಾ ಠಾಣೆಗಳ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಭದ್ರತೆ ಒದಗಿಸಿದರು.

Translate »