ಮೈಸೂರಿನ ಇನ್‍ಫೋಸಿಸ್ ಗೆಸ್ಟ್ ಹೌಸ್‍ನಲ್ಲಿ ಸಿಎಂ ಜೊತೆ ಚರ್ಚಿಸಿದ ಸಿ.ಎಸ್.ಪುಟ್ಟರಾಜು
ಮೈಸೂರು

ಮೈಸೂರಿನ ಇನ್‍ಫೋಸಿಸ್ ಗೆಸ್ಟ್ ಹೌಸ್‍ನಲ್ಲಿ ಸಿಎಂ ಜೊತೆ ಚರ್ಚಿಸಿದ ಸಿ.ಎಸ್.ಪುಟ್ಟರಾಜು

June 11, 2018

ಕೊಡಗಿನ ರೆಸಾರ್ಟ್‍ವೊಂದರಲ್ಲಿ ಅತೃಪ್ತ ಸಚಿವ ಜಿ.ಟಿ.ದೇವೇಗೌಡ ಮನವೊಲಿಕೆಗೂ ಹೆಚ್.ಡಿ.ಕುಮಾರಸ್ವಾಮಿ ಯತ್ನ

ಮೈಸೂರು: ನಿರೀಕ್ಷಿತ ಖಾತೆ ಸಿಗಲಿಲ್ಲವೆಂದು ಅಸಮಾಧಾನಗೊಂಡಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿರಂತರ ಹೆಣಗಾಡುತ್ತಿದ್ದಾರೆ.

ಶನಿವಾರ ಈ ಇಬ್ಬರೂ ಸಚಿವರುಗಳ ಬೆಂಬಲಿಗರು ಮೈಸೂರು ಹಾಗೂ ಮಂಡ್ಯದಲ್ಲಿ ಭಾರೀ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಜಿ.ಟಿ.ದೇವೇಗೌಡ ಮತ್ತು ಸಿ.ಎಸ್.ಪುಟ್ಟರಾಜು ಅವರು ಅಜ್ಞಾತ ಸ್ಥಳಗಳಿಗೆ ತೆರಳಿದ್ದರು.

ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿದ್ದಂತೆಯೇ ತಮ್ಮ ಪುತ್ರ ನಿಖಿಲ್ ನಾಯಕ ನಟನೆಯ ಚಿತ್ರ ನಿರ್ಮಾಣ ನಡೆಯುತ್ತಿರುವುದರಿಂದ ಶನಿವಾರ ರಾತ್ರಿ ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಾವು ವಾಸ್ತವ್ಯ ಹೂಡಿದ್ದ ಹೆಬ್ಬಾಳಿನ ಇನ್‍ಫೋಸಿಸ್ ಟೆಕ್ನಾಲಜೀಸ್ ಆವರಣದ ಅತಿಥಿ ಗೃಹಕ್ಕೆ ಸಿ.ಎಸ್.ಪುಟ್ಟರಾಜು ಅವರನ್ನು ಕರೆಸಿಕೊಂಡು ತಡರಾತ್ರಿವರೆಗೂ ಮಾತುಕತೆ ನಡೆಸಿ ಸಮಾಧಾನ ಪಡಿಸಿದ್ದಾರೆ. ಈ ಕುರಿತು ದೂರವಾಣ ಮೂಲಕ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸಚಿವ ಸಿ.ಎಸ್.ಪುಟ್ಟರಾಜು, ಶನಿವಾರ ತಾವು ಇನ್‍ಫೋಸಿಸ್‍ನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡಿದೆ. ಮುಂದೆ ಒಳ್ಳೆಯದಾಗುತ್ತದೆ. ಸಣ್ಣ ನೀರಾವರಿ ಖಾತೆಯಲ್ಲೂ ರೈತರಿಗೆ, ಬಡವರಿಗೆ ಸಹಾಯ ಮಾಡಲು ಅವಕಾಶವಿದೆ. ಕೆಲಸ ಮಾಡಿ, 5 ವರ್ಷ ಸುಭದ್ರ ಆಡಳಿತ ಕೊಡೋಣ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದರು.

ಜೆಡಿಎಸ್‍ನಲ್ಲಿ ಯಾವುದೇ ಅಸಮಾಧಾನ, ಭಿನ್ನಮತವಿಲ್ಲ. ನಾಳೆ (ಜೂ.11) ಜಿ.ಟಿ.ದೇವೇಗೌಡರನ್ನು ಮುಖ್ಯಮಂತ್ರಿಗಳು ಬರಮಾಡಿಕೊಂಡು ಮಾತನಾಡುತ್ತಾರೆ. ಯಾವುದೇ ಅಸಂಅಧಾನವೂ ಇರುವುದಿಲ್ಲ. ಎಲ್ಲವೂ ಸರಿಯಾಗಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರ 5 ವರ್ಷ ಉತ್ತಮ ಆಡಳಿತ ನೀಡಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪುಟ್ಟರಾಜು ನುಡಿದರು.

Translate »