ಹಾಸ್ಟೆಲ್ ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿ ಮಾಡಿ
ಮೈಸೂರು

ಹಾಸ್ಟೆಲ್ ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿ ಮಾಡಿ

March 28, 2022

ಮೈಸೂರು,ಮಾ.೨೭(ಎಂಟಿವೈ)- ನಿಲಯ ಪಾಲಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಂಗೀತವನ್ನು ಹೇಳಿಕೊಟ್ಟು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದರೊಂದಿಗೆ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಜಿ.ಪಂ ಉಪ ಕಾರ್ಯದರ್ಶಿ ಡಾ. ಪ್ರೇಮ್‌ಕುಮಾರ್ ಸಲಹೆ ನೀಡಿದರು.

ಮೈಸೂರು ತಾಲೂಕಿನ ಎಸ್.ಕಲ್ಲಹಳ್ಳಿಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆ ಹಾಗೂ ನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಒಳಿತಿಗೆ ಹಾಗೂ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಿದÀವರನ್ನು ಪೂರ್ವಾಗ್ರಹ ಪೀಡಿತರಾಗಿ ನೋಡಬಾರದು. ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್, ಸಾವಿತ್ರಿ ಬಾಪುಲೆ, ನಾರಾಯಣ ಗುರು, ಕನಕದಾಸರು, ಪೆರಿಯಾರ್, ಕಬೀರ್‌ದಾಸ್, ಅಕ್ಕಮಹಾದೇವಿ, ಅಲ್ಲಮಪ್ರಭು ಅವರುಗಳನ್ನು ನಾವು ದಾರ್ಶನಿಕರಾಗಿ ನೋಡಬೇಕೇ ಹೊರತು, ಯಾವುದೇ ಒಂದು ಜಾತಿಗೆ ಸೀಮಿತವಾಗಿ ನೋಡಬಾರದು ಎಂದರು.

ರಾಷ್ಟçಕವಿ ಕುವೆಂಪು ಹೇಳಿರುವಂತೆ ಪ್ರತಿಯೊಂದು ಮಗುವು ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತವೆ. ಪ್ರತಿಯೊಬ್ಬರೂ ಸಮಾಜಕ್ಕೆ ಗೌರವ ತರುವ ರೀತಿ ನಡೆದುಕೊಳ್ಳಬೇಕು. ೧೦ ರಿಂದ ೧೮ ವಯಸ್ಸಿನಲ್ಲಿ ಹಲವು ಆಸೆ ಮೂಡುವುದು ಸಹಜ. ಅದರಲ್ಲಿ ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ೧೦ ವರ್ಷ ಕಷ್ಟ ಪಟ್ಟರೆ, ೫೦ ವರ್ಷ ಸುಖವಾಗಿರಬಹುದು. ವಾರ್ಡನ್‌ಗಳು ವಿಶೇಷ ಆಸಕ್ತಿ ವಹಿಸಿ ಉತ್ತಮ ಫಲಿತಾಂಶ ಬರುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಿ ಜಿಲ್ಲೆಗೆ ಮಾದರಿಯಾಗಬೇಕು. ತಂದೆ-ತಾಯಿಗೆ, ಹಾಸ್ಟೆಲ್‌ಗೆ, ವಾರ್ಡನ್‌ಗೆ ಒಳ್ಳೆಯ ಹೆಸರು ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಮಾಲತಿ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮಾತ್ರ ಸೀಮಿತವಾಗಿಲ್ಲ. ಅಸ್ಪೃಶ್ಯತೆ ಜೀವಂತವಾಗಿದ್ದ ಕಾಲದಲ್ಲಿ ಅದನ್ನು ಸ್ವತಃ ಅನುಭವಿಸಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಎಲ್ಲಾ ತಳ ಸಮುದಾಯಗಳು, ಹಿಂದುಳಿದವರು, ಕಾರ್ಮಿಕರು, ಮಹಿಳೆಯರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಮಾನತೆಯ ಹಕ್ಕನ್ನು ಕೊಟ್ಟಂತಹ ಡಾ.ಅಂಬೇಡ್ಕರ್ ಮಹಾನ್ ಮಾನವತಾವಾದಿಯಾಗಿ ಶಿಕ್ಷಣದಿಂದ ಆಕಾಶದೆತ್ತರಕ್ಕೆ ಬೆಳೆದರು. ಮಕ್ಕಳು ಡಾ.ಅಂಬೇಡ್ಕರ್ ಅವರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಚೆನ್ನಾಗಿ ಓದಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೆ ನಮ್ಮ ಇಲಾಖೆಗೆ ಹೆಮ್ಮೆಯಾಗುತ್ತದೆ. ಆದ್ದರಿಂದ ಎಲ್ಲರು ಶೇ.೧೦೦%ರಷ್ಟು ಫಲಿತಾಂಶ ತರಬೇಕು. ಹಾಸ್ಟೆಲ್‌ಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಸಿದ್ದಲಿಂಗು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ರಮೇಶ್.ಡಿ, ಕೆಂಪಮ್ಮ, ಶಿವಣ್ಣ ವಾರ್ಡನ್ ಸಂಘದ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷ ಮಹಾಂತೇಶ್ ಮಾಟೋಳಿ, ಪಿಡಿಓ ಗಿರೀಶ್, ವಾರ್ಡನ್ ಚಿಕ್ಕೀರಯ್ಯ ಹಾಗೂ ತಾಲೂಕಿನ ಎಲ್ಲಾ ನಿಲಯ ಪಾಲಕರು ಪಾಲ್ಗೊಂಡಿದ್ದರು.

 

Translate »