ಟಿಎಂಸಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಮಮತಾ ಅವಿರೋಧ ಆಯ್ಕೆ; ನಾಳೆ ಸಿಎಂ ಆಗಿ ಪ್ರಮಾಣವಚನ
News

ಟಿಎಂಸಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಮಮತಾ ಅವಿರೋಧ ಆಯ್ಕೆ; ನಾಳೆ ಸಿಎಂ ಆಗಿ ಪ್ರಮಾಣವಚನ

May 4, 2021

ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯ ಮಂತ್ರಿಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಮೇ 5ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇಂದು ನಡೆದ ಟಿಎಂಸಿ ಶಾಸಕಾಂಗ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಅಧಿಕೃತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಮಮತಾ ಬ್ಯಾನರ್ಜಿ ಅವರು ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಮೇ 5ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಮಮತಾ ಬ್ಯಾನರ್ಜಿ ಅವರೊಂದಿಗೆ ಯಾರೆಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ರಾಜ್ಯಪಾಲರ ಭೇಟಿ: ಇನ್ನು ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ ಅವರು ನೂತನ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿದರು.

ಚುನಾವಣಾ ಆಯೋಗದ ವಿರುದ್ಧ ಕೋರ್ಟ್‍ಗೆ ಅರ್ಜಿ: ಇದೇ ವೇಳೆ ನಂದಿಗ್ರಾಮ ಕ್ಷೇತ್ರದ ಫಲಿತಾಂಶದ ಕುರಿತು ಚುನಾವಣಾ ಆಯೋಗದ ಕ್ರಮದ ವಿರುದ್ಧ ಕೋರ್ಟ್‍ಗೆ ಅರ್ಜಿ ಸಲ್ಲಿಸುವುದಾಗಿ ಮಮತಾ ಘೋಷಣೆ ಮಾಡಿದ್ದು, ಫಲಿತಾಂಶ ಘೋಷಣೆಯೇ ಗೊಂದಲದಿಂದ ಕೂಡಿದೆ. ಸಾಕಷ್ಟು ಮತಗಳ ಮತ ಎಣಿಕೆ ಬಾಕಿ ಇರುವಾಗಲೇ ಆಯೋಗ ಫಲಿತಾಂಶ ಘೋಷಣೆ ಮಾಡಿದ್ದು ಅನುಮಾನ ಮೂಡಿಸುತ್ತಿದೆ. ಹೀಗಾಗಿ ಮರು ಮತ ಎಣಿಕೆ ಕುರಿತು ಕೋರ್ಟ್‍ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಟಿಎಂಸಿ ಹೇಳಿದೆ. ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ನಾನು ಜನರ ತೀರ್ಪನ್ನು ಸ್ವೀಕರಿಸುತ್ತೇನೆ. ಫಲಿತಾಂಶ ಘೋಷಣೆಯ ನಂತರ ಕೆಲವು ಕಾಣದ ಕೈಗಳ ಕೈವಾಡ ನಡೆದಿವೆ. ನಾನು ಅದೇನು ಎಂದು ಶೀಘ್ರ ಬಹಿರಂಗಪಡಿಸುತ್ತೇನೆ. ಈ ಸಂಬಂಧ ಮರು ಮತಎಣಿಕೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ.

Translate »