ಅನಧಿಕೃತವಾಗಿ ರೈಲ್ವೆ ಟಿಕೆಟ್ ಮಾರುತ್ತಿದ್ದ ವ್ಯಕ್ತಿ ಸೆರೆ
ಮೈಸೂರು

ಅನಧಿಕೃತವಾಗಿ ರೈಲ್ವೆ ಟಿಕೆಟ್ ಮಾರುತ್ತಿದ್ದ ವ್ಯಕ್ತಿ ಸೆರೆ

July 17, 2020

ಮೈಸೂರು, ಜು.16(ಆರ್‍ಕೆ)- ಐಆರ್‍ಟಿಸಿ ವೆಬ್‍ಸೈಟ್‍ನಲ್ಲಿ ರೈಲ್ವೆ ಟಿಕೆಟ್‍ಗಳನ್ನು ಬುಕ್ ಮಾಡಿ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲೆತ್ನಿಸುತ್ತಿದ್ದ ವ್ಯಕ್ತಿಯನ್ನು ಆರ್‍ಪಿಎಫ್ ಅಧಿಕಾರಿಗಳು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ, ಕಡೂರಿನ ಪುಟ್ಟಸ್ವಾಮಿ ಎಂಬಾತನೇ ಅನಧಿಕೃತವಾಗಿ ರೈಲ್ವೆ ಟಿಕೆಟ್ ಮಾರಾಟ ಮಾಡಿ ಸಿಕ್ಕಿಬಿದ್ದವನಾಗಿದ್ದು, ಆತನಿಂದ 17,054 ರೂ. ಮೌಲ್ಯದ ರೈಲ್ವೆ ಇ-ಟಿಕೆಟ್‍ಗಳು ಹಾಗೂ ಒಂದು ಮೊಬೈಲ್ ಫೋನ್ ಅನ್ನು ಬೀರೂರು ವ್ಯಾಪ್ತಿಯ ಆರ್‍ಪಿಎಫ್ ಔಟ್‍ಪೋಸ್ಟ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೊರೊನಾ ವೈರಸ್‍ನಿಂದಾಗಿ ರೈಲ್ವೆ ಸ್ಟೇಷನ್ ಕೌಂಟರ್‍ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡುವುದನ್ನು ಸ್ಥಗಿತಗೊಳಿಸಿ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಯಲ್ಲಿರುವುದನ್ನೇ ಬಂಡವಾಳ ಮಾಡಿಕೊಂಡಿದ್ದ ಪುಟ್ಟಸ್ವಾಮಿ, ಬೆಂಗಳೂರು-ಮೈಸೂರು ಹಾಗೂ ಇನ್ನಿತರ ಸ್ಥಳಗಳಿಗೆ ಸಂಚರಿಸುತ್ತಿರುವ ರೈಲುಗಳ ಇ-ಟಿಕೆಟ್ ಬುಕ್ ಮಾಡಿ ಪ್ರಯಾಣಿಕರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದನು ಎಂದು ಹೇಳಲಾಗಿದೆ. ಆ ಬಗ್ಗೆ ಆರ್‍ಪಿಎಫ್ ಇಂಟೆಲಿಜೆನ್ಸ್ ವಿಭಾಗದ ಸಿಬ್ಬಂದಿ ತನಿಖೆ ನಡೆಸಿ ಒಬ್ಬನೇ ವ್ಯಕ್ತಿ ಹೆಚ್ಚು ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ವೆಬ್‍ಸೈಟ್ ಜಾಲದ ಬೆನ್ನತ್ತಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Translate »