ಮೈಸೂರು, ಜು.2(ಆರ್ಕೆ)- ಹಣಕಾಸು ವಿಷಯದಲ್ಲಿ ವ್ಯಕ್ತಿಯೋರ್ವ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಲಕ್ಷ್ಮೀಪುರಂ ಠಾಣಾ ಸರಹದ್ದಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮೈಸೂರಿನ ಕುವೆಂಪುನಗರ ನಿವಾಸಿ ರಮೇಶ (52) ನೇಣಿಗೆ ಶರಣಾಗಿರುವ ವ್ಯಕ್ತಿ. ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಅವರು, ವೃತ್ತಿಯಲ್ಲಿ ಭಾರೀ ನಷ್ಟ ಅನುಭವಿ ಸಿದ್ದರು ಎಂದು ತಿಳಿದು ಬಂದಿದೆ. ಹಣ ಹೊಂದಿಸಲು ಸಾಧ್ಯ ವಾಗದೆ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ ಎಂದು ಲಕ್ಷ್ಮೀಪುರಂ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ನ್ಯಾಯಾಲಯದ ಎದುರು ಹೋಟೆಲೊಂದರಲ್ಲಿ ಕೊಠಡಿ ಯನ್ನು ಬಾಡಿಗೆಗೆ ಪಡೆದಿದ್ದ ರಮೇಶ, ಬುಧವಾರ ಹೊರಗೆ ಹೋಗಿ ಸ್ನೇಹಿತರನ್ನು ಭೇಟಿ ಮಾಡಿ ಬಂದಿದ್ದರು. ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ವಿಷಯ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ ಬರೆದಿರುವ ರಮೇಶ, ಕೆಲವರ ಹೆಸರು ನಮೂದಿಸಿ ಅವರಿಂದ ಬರಬೇಕಿದ್ದ ಹಣ ಸೂಕ್ತ ಕಾಲಕ್ಕೆ ಬಾರದ ಕಾರಣ ತಾನು ತೊಂದರೆಗೆ ಸಿಲುಕಿದ್ದುದಾಗಿ ತಿಳಿಸಿ ದ್ದಾರೆ. ಸಂಬಂಧಿಕರು ರಮೇಶ ಡೆತ್ನೋಟ್ನಲ್ಲಿ ಹೆಸರಿಸಿರುವ ವ್ಯಕ್ತಿಗಳೊಂದಿಗೆ ಸಮಾಲೋಚಿಸುತ್ತಿದ್ದಾರೆಯೇ ಹೊರತು, ಲಿಖಿತ ದೂರು ನೀಡದಿರುವ ಕಾರಣ ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ನಾಳೆ (ಜು.3) ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸ ಲಾಗುವುದು ಎಂದು ವೆಂಕಟೇಶ್ ತಿಳಿಸಿದ್ದಾರೆ.