ಮೈಸೂರಿನ ಯುವ ವಿಜ್ಞಾನಿ ಮನೋಜ್‍ಕುಮಾರ್ ಸಾವು
ಮೈಸೂರು

ಮೈಸೂರಿನ ಯುವ ವಿಜ್ಞಾನಿ ಮನೋಜ್‍ಕುಮಾರ್ ಸಾವು

December 6, 2018

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯ ಪ್ರಯೋಗಾಲಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮೈಸೂರಿನ ಯುವ ವಿಜ್ಞಾನಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬುಧವಾರ ನಡೆದಿದೆ.

ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ, ಏರೋಸ್ಪೇಸ್ ವಿಭಾಗದ ಮನೋಜ್‍ಕುಮಾರ್ ದುರಂತ ಸಾವಿಗೀಡಾಗಿದ್ದು, ಇವರು ಮೈಸೂರು ಕಲ್ಯಾಣಗಿರಿ ಸಮೀಪದ ರಾಜ್‍ಕುಮಾರ್ ರಸ್ತೆಯ ಜೆಎಸ್‍ಎಸ್ ಬಡಾವಣೆ ನಿವಾಸಿಯಾಗಿದ್ದಾರೆ. 28 ವರ್ಷದ ಮನೋಜ್‍ಕುಮಾರ್, ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಕೆ. ಪ್ರಕಾಶ್ ಅವರ ಪುತ್ರ.

ಒಂದರಿಂದ 10ನೇ ತರಗತಿಯವರೆಗೆ ಮೈಸೂರಿನ ಸಿದ್ಧಾರ್ಥನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆ, ಪಿಯುಸಿ ಮರಿ ಮಲ್ಲಪ್ಪ ಹಾಗೂ ಬಿಇ ಮತ್ತು ಎಂಟೆಕ್ ಅನ್ನು ಜಯಚಾಮ ರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಗಿಸಿದ್ದರು. ಕೆಲ ವರ್ಷದ ಹಿಂದೆ ಐಐಎಸ್‍ಸಿಯಲ್ಲಿ ಉದ್ಯೋಗಕ್ಕೆ ಸೇರಿದ್ದ ಇವರು 2017ರಲ್ಲಿ ಅನುಷಾ ಅವರನ್ನು ಪ್ರೇಮ ವಿವಾಹವಾಗಿದ್ದು, ಅವರೂ ಸಹ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದಾರೆ. ಕಳೆದ ತಿಂಗಳಷ್ಟೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು ಎನ್ನಲಾಗಿದೆ.

ಮನೋಜ್‍ಕುಮಾರ್ ಅವರ ಪಾರ್ಥಿವ ಶರೀರವನ್ನು ಬುಧವಾರ ರಾತ್ರಿ ಮೈಸೂರಿಗೆ ತರಲಾಗಿದ್ದು, ಗುರುವಾರ ಮಧ್ಯಾಹ್ನ 1.30ಕ್ಕೆ ಮೈಸೂರಿನ ಹೊರವಲಯದ ಲಲಿತಾದ್ರಿಪುರ ವೀರಶೈವ ರುದ್ರಭೂಮಿ ಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಓದಿನಲ್ಲಿ ಸದಾ ಮುಂದಿದ್ದ ಮನೋಜ್‍ಕುಮಾರ್, ಕ್ರೀಡೆಯಲ್ಲೂ ಸಕ್ರಿಯವಾಗಿದ್ದರು. 19 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು, ಬಹುಮಾನಗಳನ್ನು ಗಳಿಸಿದ್ದರು. ಸಂಶೋಧನೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದ ಮನೋಜ್‍ಕುಮಾರ್, ಬಿಇ ವ್ಯಾಸಂಗ ವೇಳೆ ಹಲವಾರು ಪ್ರಾಜೆಕ್ಟ್‍ಗಳನ್ನು ಕೈಗೆತ್ತಿಕೊಂಡಿದ್ದರು. ಇವರ ಹಿರಿಯ ಸಹೋದರ ಮಧುಮಲ್ಲೇಶ್ ಸಹ ಇಂಜಿನಿಯರ್, ತಾಯಿ ಶ್ರೀಮತಿ ಸುಧಾ ಬಸವ ಬಳಗದಲ್ಲಿ ಸಕ್ರಿಯರಾಗಿದ್ದಾರೆ.

ಮೂವರಿಗೆ ಗಂಭೀರ ಗಾಯ: ಇಂದು ಹೈಡ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೋಜ್‍ಕುಮಾರ್ ಸ್ಥಳದಲ್ಲೇ ಸಾವಿಗೀಡಾದರೆ, ಕಾರ್ತಿಕ್, ನರೇಶ್ ಮತ್ತು ಅತುಲ್ಯಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »