ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ
ಮೈಸೂರು

ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ

December 6, 2018

ಬೆಂಗಳೂರು: ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಯನ್ನು ಡಿ. 22ಕ್ಕೆ ಮಾಡಲಾ ಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ರಾತ್ರಿ ನಡೆದ ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 9 ರಂದು ಸಂಪುಟ ವಿಸ್ತರಣೆ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಮಾರನೇ ದಿನವೇ ಅಂದರೆ ಡಿ. 10 ರಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತರಾತುರಿ ಬೇಡವೆಂಬ ಕಾರಣಕ್ಕೆ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿದೆ ಎಂದರು.

ಅಂದೇ 30 ನಿಗಮ-ಮಂಡಳಿ ಹಾಗೂ ಆರು ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೂ ನೇಮಕ ಮಾಡಲಾಗುವುದು. ನಿಗಮ-ಮಂಡಳಿಗಳಲ್ಲಿ 20 ಕಾಂಗ್ರೆಸ್ ಹಾಗೂ 10 ಜೆಡಿಎಸ್, ಹಾಗೆಯೇ 6 ಸಂಸದೀಯ ಕಾರ್ಯದರ್ಶಿ ಸ್ಥಾನಗಳಲ್ಲಿ 4 ಕಾಂಗ್ರೆಸ್‍ಗೆ ಹಾಗೂ 2 ಜೆಡಿಎಸ್‍ಗೆ ಸೇರುತ್ತವೆ ಎಂದರು. ಮೊದಲ ಹಂತದಲ್ಲಿ 30 ನಿಗಮ-ಮಂಡಳಿಗೂ ಶಾಸಕರನ್ನೇ ನೇಮಕ ಮಾಡಲಾಗುವುದು.
ಅಧಿವೇಶನ ಮುಗಿದ ಮಾರನೇ ದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಅವರ ಅನುಮತಿ ಪಡೆಯಲಾಗುವುದು. ಖಾಲಿ ಇರುವ 8 ಸಚಿವ ಸ್ಥಾನವನ್ನೂ ಭರ್ತಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ಮೈತ್ರಿ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗಲು, ಈಗ ಉಂಟಾಗಿರುವ ಕೆಲ ಅಸಮಾಧಾನಗಳನ್ನು ನಿವಾರಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಯಾರೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಏನೇ ಸಮಸ್ಯೆ ಇದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

Translate »