ವಾಯುಸೇನೆ ಸೇರಲು ಬಂದ `ಯುವಕರು’ 800ಮೀ.  ಓಟಕ್ಕೆ ಸುಸ್ತಾದರು!
ಮೈಸೂರು

ವಾಯುಸೇನೆ ಸೇರಲು ಬಂದ `ಯುವಕರು’ 800ಮೀ. ಓಟಕ್ಕೆ ಸುಸ್ತಾದರು!

December 6, 2018

ಮೈಸೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಭಾರತೀಯ ವಾಯುಸೇನೆಯ ನೇಮಕಾತಿ ರ್ಯಾಲಿಯಲ್ಲಿ ಉತ್ತರ ಕರ್ನಾಟಕದ 9 ಜಿಲ್ಲೆಗಳ 1500ಕ್ಕೂ ಹೆಚ್ಚು ಯುವಕರು ಸಂದರ್ಶನದಲ್ಲಿ ಪಾಲ್ಗೊಂಡು ವಿವಿಧ ಪರೀಕ್ಷೆ ಎದುರಿಸಿದರು. ಅರ್ಧದಷ್ಟು ಮಂದಿ 800 ಮೀ. ಓಡುವಷ್ಟರಲ್ಲೇ ಸುಸ್ತು ಹೊಡೆದರು!

ಬೆಂಗಳೂರಿನಲ್ಲಿರುವ 7ನೇ ಏರ್‍ಮನ್ ಸೆಲೆಕ್ಷನ್ ಸೆಂಟರ್ ವತಿಯಿಂದ ಇಂದು ಮುಂಜಾನೆ 5.30ರಿಂದಲೇ ಭಾರತೀಯ ವಾಯುಸೇನೆಯ ಗ್ರೂಪ್ `ವೈ’ ಟ್ರೇಡ್ ನಲ್ಲಿ ಖಾಲಿಯಿರುವ `ಏರ್‍ಮನ್’ ಹುದ್ದೆಗಳಿಗೆ ನೇಮಕಾತಿ ಮಾಡಲು ಅಭ್ಯರ್ಥಿಗಳ ಸಂದರ್ಶನ ಆರಂಭಿಸಲಾಯಿತು. ಬೆಳಿಗ್ಗೆ 9.05ರವರೆಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿ ಗಳಿಗೆ ಅವಕಾಶ ನೀಡಲಾಯಿತು. ಬಳಿಕ ಬಂದ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಯಿತು. ಮುಂಜಾನೆಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣ ಪ್ರವೇಶಿಸಿದ್ದ ಅರ್ಹ ಯುವಕರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಸಂಜೆ 5 ಗಂಟೆಯವರೆಗೂ ವಿವಿಧ ಪರೀಕ್ಷೆಗೆ ಒಳಪಡಿಸಲಾಯಿತು.

ವಯಸ್ಸಿನ ದೃಢೀಕರಣ : ಏರ್‍ಮನ್ ನೇಮಕಾತಿ ರ್ಯಾಲಿಯಲ್ಲಿ 17ರಿಂದ 20 ವರ್ಷದೊಳಗಿನ ಯುವಕರು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. 1998ರ ಜುಲೈ 14ರಿಂದ 2002ರ ಜೂನ್ 26ರವರೆಗೆ ಜನಿಸಿದವರು ಮಾತ್ರ ಸಂದರ್ಶ ನಕ್ಕೆ ಹಾಜರಾಗಬೇಕಾಗಿತ್ತು. ಈ ಹಿನ್ನೆಲೆ ಯಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದ ಮುಖ್ಯ ದ್ವಾರದ ಬಳಿಯೇ ವಾಯುಸೇನೆಯ ಅಧಿಕಾರಿಗಳು ಅಭ್ಯರ್ಥಿಗಳ ಎಸ್‍ಎಸ್‍ಎಲ್‍ಸಿ, ಪಿಯುಸಿ ಅಂಕಪಟ್ಟಿಯಲ್ಲಿ ನಮೂದಾ ಗಿರುವ ಜನ್ಮ ದಿನಾಂಕವನ್ನು ನೋಡಿ ಮುಂದಿನ ಸುತ್ತಿನ ಪರೀಕ್ಷೆಯಲ್ಲಿ ಪಾಲ್ಗೊ ಳ್ಳಲು ಅವಕಾಶ ನೀಡಿದರು.

ಅರ್ಹತೆ: ಏರ್‍ಮನ್ ಹುದ್ದೆಗಳಿಗೆ ಕನಿಷ್ಠ 152.5 ಸೆಂ.ಮೀಟರ್ ಎತ್ತರವುಳ್ಳ, ಪಿಯುಸಿಯಲ್ಲಿ ಇಂಗ್ಲೀಷ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಶೇ.50ರಷ್ಟು ಅಂಕ ಪಡೆದ ಯುವಕರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿತ್ತು.

ಎಲ್ಲೆಲ್ಲಿಂದ: ಇಂದು ನಡೆದ ನೇಮಕಾತಿ ರ್ಯಾಲಿಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ, ಉತ್ತರ ಕನ್ನಡ, ಕಾರವಾರ, ಉಡುಪಿ ಜಿಲ್ಲೆಗಳ 1500ಕ್ಕೂ ಹೆಚ್ಚು ಯುವಕರು ಸಂದರ್ಶನ ಎದುರಿಸಿದರು. 800ಕ್ಕೂ ಹೆಚ್ಚು ಮಂದಿ ಅಂತಿಮ ಸುತ್ತಿಗೆ ಆಯ್ಕೆ ಯಾಗಿದ್ದಾರೆ. ನಾಳೆ(ಡಿ.6) ದೇಹದಾಢÀ್ರ್ಯ ಹಾಗೂ ಲಿಖಿತ ಪರೀಕ್ಷೆ ನಡೆಯಲಿದೆ.

ಡಿ.7ರಂದು ಮೈಸೂರು, ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕ ಬಳ್ಳಾಪುರ, ಚಾಮರಾಜನಗರ, ಮಡಿ ಕೇರಿ, ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು,ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣ ಗೆರೆ, ಶಿವಮೊಗ್ಗ ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರಿಗೆ ಡಿ.8ರಂದು ದೇಹದಾಢ್ರ್ಯ ಹಾಗೂ ಲಿಖಿತ ಪರೀಕ್ಷೆ ನಡೆಯಲಿದೆ.

ಓಟದಲ್ಲಿ ಸುಸ್ತಾದರು: ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರಾದವರು ಮೊದಲಿಗೆ 5.40 ನಿಮಿಷದಲ್ಲಿ 1.6 ಕಿ.ಮೀ ದೂರ ಓಡಬೇಕಾಗಿತ್ತು. ಆದರೆ ಕೆಲವರು 800 ಮೀಟರ್ ಓಟವನ್ನು ಪೂರೈಸುತ್ತಿದ್ದಂತೆಯೇ ಸುಸ್ತಾಗಿ ನಿರ್ಗಮಿಸಿದರು. 1.6 ಕಿ.ಮೀ ದೂರ ಯಶಸ್ವಿಯಾಗಿ ಓಡಿದವರಿಗೆ 8 ಪುಲ್‍ಅಪ್ಸ್, 20 ಪುಶ್ ಹಾಗೂ 20 ಸೆಟಪ್ ಕಸರತ್ತನ್ನು ನಿಗದಿತ ಸಮಯದೊಳಗೆ ಮಾಡುವಂತೆ ಸೂಚಿಸಲಾಯಿತು. ನಂತರ ಅಂಕಪಟ್ಟಿ, ವಾಸ ದೃಢೀಕರಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಿ, ಲಿಖಿತ ಪರೀಕ್ಷೆ ಸುತ್ತಿಗೆ ಆಯ್ಕೆ ಮಾಡಲಾಯಿತು. 50 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.

Translate »