ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಹಾರಾಟ `ಏರ್ ಶೋ’ಗೆ ಚಾಲನೆ!
ಮೈಸೂರು

ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಹಾರಾಟ `ಏರ್ ಶೋ’ಗೆ ಚಾಲನೆ!

February 21, 2019

ಬೆಂಗಳೂರು: ಸೂರ್ಯಕಿರಣ್ ಆಗಸದಿಂದ ಧರೆಗುರುಳಿದ ಕಹಿ ನೆನಪಿನ ನಡುವೆ ಇಂದು ಏರ್ ಶೋ-2019ಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಯಲಹಂಕ ವಾಯು ನೆಲೆಯಲ್ಲಿ ದೇಶ-ವಿದೇಶದ ಯುದ್ಧ ವಿಮಾನಗಳ ಸಾಹಸದ ನಡುವೆಯೇ ನಭೋ ಮಂಡಲದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯ ಕಿರಣ್ ಇಲ್ಲದೆಯೇ ಈ ಬಾರಿಯ ಏರ್ ಶೋ ಆರಂಭಗೊಂಡಿದೆ.

ಆಗಸದಲ್ಲಿ ಯುದ್ಧ ವಿಮಾನಗಳ ಘರ್ಜನೆ ಕಿವಿಗಡಚಿಕ್ಕುವಂತಿತ್ತು. ಗ್ಲೋಬ್ ಮಾಸ್ಟರ್ ದೈತ್ಯ ವಿಮಾನ, ಎಚ್‍ಎಎಲ್‍ನ ಅತ್ಯಂತ ಪುಟ್ಟ ವಿಮಾನಗಳು ಸ್ವೀಡನ್ ಗ್ರೈಪೇನ್ ಯುದ್ಧ ವಿಮಾನಗಳು ವಿವಿಧ ಸಾಹಸ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದವು. ರಫೇಲ್ ಯುದ್ಧ ವಿಮಾನ ಕೂಡ ಇಂದಿನ ಶೋನಲ್ಲಿ ಭಾಗವಹಿಸಿರುವುದು ವಿಶೇಷ.

ಸಾರಂಗ, ಧ್ರುವ, ತೇಜಸ್, ಸುಖೋಯ್ ಸೇರಿದಂತೆ ದೇಶ-ವಿದೇಶದ ಸುಮಾರು 55 ವಿವಿಧ ಯುದ್ಧ ವಿಮಾನಗಳು ನೀಲಾಕಾಶ ದಲ್ಲಿ ಚಿತ್ತಾರ ಮೂಡಿಸಿದವು. ಯುದ್ಧ ವಿಮಾನದಲ್ಲಿ ಬ್ಯಾಟಿಕ್ಸ್ ಲಲನೆ ಯರ ನರ್ತನ ಎಲ್ಲರ ಕಣ್ಮನ ಸೆಳೆಯಿತು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವೈಮಾಂತರಿಕ್ಷ ಮತ್ತು ಅದಕ್ಕೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಅಧಿಕ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಕರೆ ನೀಡಿದರು. ರಕ್ಷಣಾ ಕ್ಷೇತ್ರದಲ್ಲಿ ಅಗತ್ಯ ಪರಿಕರಗಳ ತಯಾರಿಕೆಗಾಗಿ ಕೇಂದ್ರ ಸರ್ಕಾರ ಶೇ.100ರಷ್ಟು ವಿದೇಶ ನೇರ ಬಂಡವಾಳ ಹೂಡಿಕೆಗೆ ಅವಕಾಶ ಸೇರಿದಂತೆ ಅನೇಕ ಉತ್ತೇಜನಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದರು.

ಭಾರತವು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಮರ ವಿಮಾನಗಳು ಮತ್ತು ಯುದ್ಧೋಪಕರಣಗಳ ತಯಾರಿಕೆಗೆ ಖಾಸಗಿ ಕ್ಷೇತ್ರಕ್ಕೆ ವಿಫುಲ ಅವಕಾಶ ನೀಡಿದೆ. ಅದನ್ನು ಬಳಸಿಕೊಳ್ಳಲು ಹೂಡಿಕೆದಾರರು ಮುಂದೆ ಬರಬೇಕೆಂದು ಸಲಹೆ ನೀಡಿದರು.

12ನೇ ಏರ್ ಶೋ ಈ ಬಾರಿಯೂ ಬೆಂಗಳೂರಿನಲ್ಲೇ ನಡೆಯುತ್ತಿರುವುದು ಸಂತಸದ ಸಂಗತಿ. 600 ಭಾರತೀಯ ಮತ್ತು 400 ವಿದೇಶಿ ಸಂಸ್ಥೆಗಳು ಈ ವಾಯು ಪ್ರದರ್ಶನದಲ್ಲಿ ಭಾಗವಹಿಸಿವೆ. ಇದೇ ಮೊದಲ ಬಾರಿಗೆ ನಾಗರಿಕ ವಿಮಾನಗಳು ಕೂಡ ಏರೋ ಇಂಡಿಯಾದಲ್ಲಿ ಪಾಲ್ಗೊಂಡಿವೆ ಎಂದು ತಿಳಿಸಿದರು.

Translate »