ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ: ಪೈಲಟ್ ಸಾವು
ಮೈಸೂರು

ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ: ಪೈಲಟ್ ಸಾವು

February 20, 2019

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು, ಒಬ್ಬ ಪೈಲಟ್ ಸ್ಥಳ ದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

ನಾಳೆಯಿಂದ ಆರಂಭಗೊಳ್ಳಲಿರುವ ಏರ್ ಶೋಗೆ ವಾಯು ಸೇನೆಗೆ ಸೇರಿದ ಸೂರ್ಯ ಕಿರಣ್ ಲಘು ಯುದ್ಧ ವಿಮಾನಗಳು ಯಲಹಂಕ ಸಮೀಪದ ಘಂಟಿ ಗಾನಹಳ್ಳಿ ಬಳಿ ತಾಲೀಮಿನಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಏಕಾಏಕಿ ಪರಸ್ಪರ ಡಿಕ್ಕಿ ಹೊಡೆದುಕೊಂಡವು. ತಕ್ಷಣವೇ ವಿಮಾನಗಳು ಭೂಮಿಗೆ ಅಪ್ಪಳಿಸಿದವು. ಆದರೆ ಈ ಸಂದರ್ಭದಲ್ಲಿ ಎರಡೂ ವಿಮಾನಗಳ ಪೈಲಟ್‍ಗಳು ತುರ್ತುನಿರ್ಗಮನ ದ್ವಾರದ ಮೂಲಕ ಹೊರಜಿಗಿದ ಕಾರಣ ಅವರಿಗೆ ಯಾವುದೇ ಅಪಾಯ ಉಂಟಾಗಲಿಲ್ಲ. ಜನನಿಬಿಡ ವಸತಿ ಪ್ರದೇಶದ ಸಮೀಪ ಡಿಕ್ಕಿಯಾದ ವಿಮಾನಗಳು ಉರುಳಿದ್ದರಿಂದ, ಒಂದು ಮನೆಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಡಿಕ್ಕಿ ಬಳಿಕ ಯುದ್ಧ ವಿಮಾನಗಳು ಹೊತ್ತಿ ಉರಿದ ಕಾರಣ ಆ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಏರ್ ಶೋಗೆ ಒಂದು ದಿನ ಬಾಕಿಯಿರುವಾಗಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಯುದ್ಧ ವಿಮಾನಗಳ ತಾಲೀಮನ್ನು ವೀಕ್ಷಿಸಲು ನೆರೆದಿದ್ದ ಜನಕ್ಕೆ ಮೊದಲು ಅಪಘಾತ ಸಂಭವಿಸಿದೆ ಎಂಬುದನ್ನು ನಂಬಲು ಸಾಧ್ಯವಾಗಲಿಲ್ಲ. ಯಾವಾಗ ಬೆಂಕಿ ಕಾಣಿಸಿಕೊಂಡಿತೋ ಆಗ ಸ್ಥಳೀಯರು ದಿಗ್ಭ್ರಾಂತಿಗೊಳ ಗಾಗಿ ವಿಮಾನ ಪತನಗೊಂಡಿರುವ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರು.

ಪೈಲಟ್‍ಗಳು ವಿಮಾನ ಧರೆಗುರುಳುತ್ತಿದ್ದಂತೆ ತುರ್ತು ನಿರ್ಗಮನದ ಮೂಲಕ ಪ್ಯಾರಾಚೂಟ್ ಸಹಾಯದಿಂದ ಹೊರ ಜಿಗಿದಿದ್ದಾರೆ. ಈ ವೇಳೆ ಓರ್ವ ಪೈಲಟ್ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಸ್ಪರೂಪದ ಗಾಯಗಳಾಗಿವೆ.

ಒಂದು ವೇಳೆ ಎರಡೂ ವಿಮಾನಗಳು ಜನವಸತಿ ಪ್ರದೇಶದಲ್ಲಿ ಬಿದ್ದಿದ್ದರೆ ಭಾರೀ ಪ್ರಮಾಣದ ಪ್ರಾಣ ಹಾನಿ ಸಂಭವಿಸುತ್ತಿತ್ತು. ಆದರೆ ಜನವಸತಿ ಇಲ್ಲದ ಪ್ರದೇಶದಲ್ಲಿ ವಿಮಾನಗಳು ಬಿದ್ದಿರುವುದು ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ ನಾವು ತಾಲೀಮು ನೋಡುತ್ತಿದ್ದೆವು. ಸುಮಾರು 10 ನಿಮಿಷಗಳ ಕಾಲ ಯುದ್ಧ ವಿಮಾನಗಳು ಸರ್ಕಸ್ ಮಾಡುತ್ತಿದ್ದವು. ಇದ್ದಕ್ಕಿದ್ದಂತೆ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿ ಜೋರಾದ ಶಬ್ದ ಕೇಳಿತು. ಮೊದಲು ಇದನ್ನು ನಾವು ಸಾಹಸ ಪ್ರದರ್ಶನ ಎಂದುಕೊಂಡಿದ್ದೆವು. ಆದರೆ ಬೆಂಕಿ ಯಾವಾಗ ಕಾಣಿಸಿಕೊಂಡಿತೋ ಆಗ ಅಪಘಾತವಾಗಿದೆ ಎಂಬುದು ದೃಢವಾಯಿತು. ಅಲ್ಲದೇ ನೆಲಕ್ಕುರುಳಿದಾಗ ಜೋರಾದ ಶಬ್ದ ಕೇಳಿ ಎದೆ ನಡುಗಿತು.

ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪೈಲಟ್‍ಗಳನ್ನು ರಕ್ಷಿಸಿದೆವು ಎಂದು ಸ್ಥಳೀಯರಾಗಿರುವ ಉನ್ನಿಕೃಷ್ಣನ್ ತಿಳಿಸಿದರು. ಎರಡು ವಿಮಾನಗಳು ನೆಲಕ್ಕಪ್ಪಳಿಸುತ್ತಿದ್ದಂತೆ ಅವುಗಳ ವಿವಿಧ ಭಾಗಗಳು ಚೆಲ್ಲಾಪಿಲ್ಲಿಯಾದವು. ಭುಗ್ಗನೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ನಿರತವಾಯಿತು. ಯುದ್ಧ ವಿಮಾನ ಪತನಗೊಂಡಿರುವುದು ಈ ತಿಂಗಳಿನಲ್ಲಿ ಇದು 2ನೇ ಘಟನೆಯಾಗಿದೆ. ಕಳೆದ ಫೆ.2ರಂದು ಬೆಂಗಳೂರಿನ ಎಚ್‍ಎಎಲ್ ಸಮೀಪದ ಯಮಲೂರು ಬಳಿ ಮಿರಾಜ್-2000 ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‍ಗಳು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಪುನಃ ಮತ್ತೊಂದು ಘಟನೆ ನಡೆದಿರುವುದು ಆಘಾತವನ್ನುಂಟು ಮಾಡಿದೆ. ಸಾಮಾನ್ಯವಾಗಿ ಎಚ್‍ಎಎಲ್‍ನಿಂದ ನಿರ್ಮಿತವಾಗುವ ಸೂರ್ಯ ಕಿರಣ್, ತೇಜಸ್, ಮಿರಾಜ್ ಸೇರಿದಂತೆ ಲಘು ಯುದ್ಧ ವಿಮಾನಗಳು ಈವರೆಗೂ ಅಪಘಾತಕ್ಕೀಡಾದ ನಿದರ್ಶನಗಳಿಲ್ಲ. ಹೀಗಾಗಿಯೇ ಈ ವಿಮಾನಗಳಿಗೆ ವಿದೇಶದಿಂದಲೂ ಬೇಡಿಕೆ ಇದೆ. ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ರಷ್ಯಾ ಸೇರಿದಂತೆ ಅನೇಕ ಮುಂದುವರೆದ ರಾಷ್ಟ್ರಗಳು ಕೂಡ ರಾಷ್ಟ್ರಗಳು ಸೂರ್ಯ ಕಿರಣ್, ತೇಜಸ್‍ನಂತಹ ಯುದ್ಧ ವಿಮಾನಗಳನ್ನು ನೀಡುವಂತೆ ಎಚ್‍ಎಎಲ್‍ಗೆ ಬೇಡಿಕೆ ಸಲ್ಲಿಸಿವೆ.

Translate »