ಕುಂಭಮೇಳಕ್ಕೆ ತೆರೆ
ಮೈಸೂರು

ಕುಂಭಮೇಳಕ್ಕೆ ತೆರೆ

February 20, 2019

ತಿ.ನರಸೀಪುರ: ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರವನ್ನು ಸಮ್ಮಿಳಿತಗೊಳಿಸಿದ 11ನೇ ಮಹಾ ಕುಂಭಮೇಳಕ್ಕೆ ಹುಣ್ಣಿಮೆ ದಿನವಾದ ಮಂಗಳ ವಾರ ಸಂಭ್ರಮದ ತೆರೆ ಬಿದ್ದಿತು.

ಮಹಾಕುಂಭಮೇಳದ ಅಂತಿಮ ದಿನವಾದ ಇಂದು ಲಕ್ಷಾಂತರ ಭಕ್ತರು, ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮಿ ಸುವ ಸ್ಥಳದಲ್ಲಿ ಪವಿತ್ರ ಪುಣ್ಯ ಸ್ನಾನ ಮಾಡಿ, ಪುನೀತರಾದರು. ಮಾಘ ಮಾಸದ ಹುಣ್ಣಿಮೆ ದಿನ ದಲ್ಲಿ ಪುಣ್ಯ ಸ್ನಾನ ಮಾಡಿದರೆ, ಪಾಪಕರ್ಮಗಳೆಲ್ಲಾ ಕಳೆದು, ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಯುಳ್ಳ ಭಕ್ತರು ಮುಂಜಾನೆಯಿಂದಲೇ ಭಕ್ತಾದಿ ಗಳು ತ್ರಿವೇಣಿ ಸಂಗಮದತ್ತ ಹರಿದು ಬಂದರು. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಇನ್ನಿತರ ರಾಜ್ಯಗಳ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಭಕ್ತಿ ಪರಾಕಾಷ್ಠೆ ಮೆರೆದರು. ಪವಿತ್ರ ಪುಣ್ಯ ಸ್ನಾನದ ಬಳಿಕ ತ್ರಿವೇಣಿ ಸಂಗಮದ ತೀರದಲ್ಲಿರುವ ಅಗಸ್ತ್ಯೇಶ್ವರ, ಗುಂಜಾ ನರಸಿಂಹಸ್ವಾಮಿ, ಆನಂದೇ ಶ್ವರ ದೇವಾಲಯ ಸೇರಿದಂತೆ ತಿರುಮಕೂಡಲಿನ ಐತಿಹಾಸಿಕ ದೇವಾಲಯಗಳಿಗೆ ಪೂಜೆ ಸಲ್ಲಿಸಿದರು.

ಮುಂಜಾನೆ 5.30ರಿಂದಲೇ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನದಿ ಮಧ್ಯದ ಯಾಗಮಂಟಪದಲ್ಲಿ ಮಾಘಶುಧ್ಧ ವ್ಯಾಸ ಪೂರ್ಣಿಮಾ, ಪುಷ್ಯನಕ್ಷತ್ರ, ಪುಣ್ಯಾಹ, ಕಲಶಪೂಜೆ, ಹೋಮ, ಕುಂಭ ಲಗ್ನದಲ್ಲಿ ಪೂರ್ಣಾಹುತಿ ಪೂರೈಸಲಾಯಿತು. ಇದೇ ವೇಳೆ ಸಪ್ತ ನದಿಗಳಿಂದ ತರಲಾಗಿದ್ದ ಕಲಶತೀರ್ಥವನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ ಮಾಡಿ, ಮುಕ್ಕೋಟಿ ದೇವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುಣ್ಯಸ್ನಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ನಡುರಾತ್ರಿಯಾದರೂ ನಿಲ್ಲದ ಭಕ್ತಸಾಗರ: ಮಾಘಮಾಸ ಹುಣ್ಣಿಮೆಯ ದಿನವಾದ ಇಂದು ಸೂರ್ಯಾಗಮನದ ಮುನ್ನವೇ ಭಕ್ತರ ತ್ರಿವೇಣಿ ಸಂಗಮಕ್ಕೆ ಬಂದಿದ್ದರು. ಬೆಳಿಗ್ಗೆ 9.35ರಿಂದ 9.50ರಲ್ಲಿ ಸಲ್ಲುವ ಮೀನ ಲಗ್ನ ಸಾಧು-ಸಂತರು ಹಾಗೂ ಬೆ.11.30ರಿಂದ ಮಧ್ಯಾಹ್ನ 12ಗಂಟೆವರೆಗೆ ಸಲ್ಲುವ ವೃಷಭ ಲಗ್ನದಲ್ಲಿ ಭಕ್ತರ ಪುಣ್ಯಸ್ನಾನಕ್ಕೆ ಪ್ರಶಸ್ತ ಕಾಲವೆಂದು ಹೇಳಲಾಗಿದ್ದರಿಂದ ಆ ಸಮಯದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ಮದ್ಯಾಹ್ನ 1.30ರ ವೇಳೆಗೆ ಎಲ್ಲಾ ಧಾರ್ಮಿಕ ಕಾರ್ಯಗಳು ಪೂರ್ಣಗೊಂಡು ಕುಂಭಮೇಳಕ್ಕೆ ತೆರೆ ಬಿತ್ತಾದರೂ ಭಕ್ತರ ಸಂಖ್ಯೆ ಕ್ಷೀಣಿಸಲಿಲ್ಲ. ಅಗಸ್ತ್ಯೇಶ್ವರ ಹಾಗೂ ಗುಂಜಾನರಸಿಂಹಸ್ವಾಮಿ ದೇವಾಲಯದಿಂದ ನದಿ ಮಧ್ಯದ ಧಾರ್ಮಿಕ ವೇದಿಕೆಗೆ ಸಂಪರ್ಕಿಸುವ ಸೇತುವೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಎತ್ತ ನೋಡಿದರೂ ಭಕ್ತ ಸಾಗರವೇ ಕಾಣುವಂತಿತ್ತು. ಸೂಕ್ತ ಕ್ರಮ ಕೈಗೊಳ್ಳಲಾಗಿತ್ತಾದರೂ ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹೆಣಗಾಡಬೇಕಾಯಿತು. ವಿದೇಶಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಡುರಾತ್ರಿಯಾದರೂ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಪುನೀತ ಭಾವದಿಂದ ವಾಪಸ್ಸಾದರು.

ಉತ್ತರ ಭಾರತದಲ್ಲಿ ಪ್ರಸಿದ್ಧಿಯಾಗಿರುವ ಈ ಕುಂಭಮೇಳ ಧಾರ್ಮಿಕ ಉತ್ಸವ, ಮೂರು ದಶಕಗಳಿಂದ ದಕ್ಷಿಣದ ತಿರುಮಕೂಡಲಿನಲ್ಲಿ ಜರುಗುತ್ತಿದೆ. ಪ್ರತಿ 3 ವರ್ಷಕ್ಕೊಮ್ಮೆ ಮಾಘಮಾಸದ ಹುಣ್ಣಿಮೆ ಸೇರಿದಂತೆ 3 ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಹಾಗೆಯೇ ಫೆ.17ರಂದು ಆರಂಭವಾದ 11ನೇ ಕುಂಭಮೇಳ ಇಂದು ಯಶಸ್ವಿಯಾಗಿ ತೆರೆ ಕಂಡಿದೆ. ಮೊದಲ ದಿನ ತ್ರಿವೇಣಿ ಸಂಗಮದ ತೀರದಲ್ಲಿರುವ ಅಗಸ್ತೇಶ್ವರ ದೇವಾಲಯದಲ್ಲಿ ಗಣಪತಿ ಹೋಮ ಇನ್ನಿತರ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಕುಂಭಮೇಳದ ಧಾರ್ಮಿಕ ಸೇವೆ ಆರಂಭವಾಗಿತ್ತು. ಕುಂಭಮೇಳ ನಿರ್ವಿಘ್ನವಾಗಿ ನೆರವೇರಲೆಂದು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಹಲವು ರೀತಿಯ ಹೋಮ ಹವನಗಳನ್ನು ನಡೆಸಲಾಗಿತ್ತು. ತಿರುಮಕೂಡಲು ವೃತ್ತದಿಂದ ಪೂರ್ಣಕುಂಭ ಮೆರವಣಿಗೆಯೊಂದಿಗೆ ಸಾಧು ಸಂತರು, ಗಣ್ಯರನ್ನು ನದಿ ಮಧ್ಯದ ಧಾರ್ಮಿಕ ವೇದಿಕೆಗೆ ಕರೆತರಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ನೀಡಿದ್ದರು.

ಎರಡನೇ ದಿನ ವಿವಿಧ ಮಠಾಧೀಶರ ಪುರಪ್ರವೇಶ ಮೆರವಣಿಗೆ ವೈಭವಯುತವಾಗಿ ಜರುಗಿತು. ಸೂರ್ಯಾಸ್ತದ ನಂತರ ತ್ರಿವೇಣಿ ಸಂಗಮದಲ್ಲಿ ಮೊದಲ ಬಾರಿಗೆ ಗಂಗಾರತಿ ನೆರವೇರಿತು. ಸುತ್ತೂರುಶ್ರೀಗಳು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಅನೇಕ ಶ್ರೀಗಳು, ಗಣ್ಯರು ಈ ಪುಣ್ಯ ಗಳಿಗೆಗೆ ಸಾಕ್ಷಿಯಾಗಿದ್ದರು. ಮೂರೂ ದಿನ ನದಿ ಮಧ್ಯದ ತ್ರಿವೇಣೀ ಸಂಗಮ ವೇದಿಕೆಯಲ್ಲಿ ಧಾರ್ಮಿಕ ಸಭೆ, ಕಾವೇರಿ ಹಾಗೂ ಕಪಿಲೆ ವೇದಿಕೆಗಳಲ್ಲಿ ಸಾಂಸ್ಕøತಿಕ ಸಡಗರ ಕಳೆಗಟ್ಟಿತ್ತು. ಪುಣ್ಯಸ್ನಾನ ಮಾಡಿ, ದೇವರ ದರ್ಶನ ಮಾಡಿದ ಲಕ್ಷಾಂತರ ಭಕ್ತರು, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಸಂಭ್ರಮಿಸಿದರು. ಕುಂಭಮೇಳಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿವಿಧ ಸ್ಥಳಗಳಿಂದ ವಿಶೇಷ ಸಾರಿಗೆ ಸಂಪರ್ಕ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋಬಸ್ತ್ ಮಾಡಲಾಗಿತ್ತು. ದ್ವಾದಶಿ ಶಿವಲಿಂಗ ದರ್ಶನ ವಿಶೇಷವಾಗಿತ್ತು. ಕಡೇ ದಿನವಾದ ಇಂದು ಅನೇಕ ಮಠಾಧೀಶರು, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಲಕ್ಷಾಂತರ ಭಕ್ತರು ಕುಂಭಮೇಳ ಧಾರ್ಮಿಕ ಉತ್ಸವದಲ್ಲಿ ಭಾಗಿಯಾಗಿದ್ದರು.

ಪುಣ್ಯ ಸ್ನಾನ ಮಾಡಿ ಮಿಂದೆದ್ದ ಸಾಧು-ಸಂತರು, ಮಠಾಧೀಶರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಆದಿಚುಂಚನಗಿರಿ ಸ್ವಾಮೀಜಿ ಸೇರಿದಂತೆ ಅನೇಕ ಪೂಜ್ಯ ಶ್ರೀಗಳು, ಯಾಗ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿ, ತೀರ್ಥ ಪ್ರೋಕ್ಷಣೆ ಸ್ವೀಕರಿಸಿದರು. ಬಳಿಕ ಇವರನ್ನು ಛತ್ರಿ ಚಾಮರಗಳು, ಕುಂಭದೊಂದಿಗೆ ಸ್ವಾಗತಿಸಿ, ಸಂಗಮಕ್ಕೆ ಕರೆತರಲಾಯಿತು. ಸ್ನಾನಕ್ಕೆ ನಿಯೋಜಿಸಿದ್ದ ಸ್ಥಳಕ್ಕೆ ತೆರಳಿದ ಅವರು ನೀರಿನ ಪ್ರೋಕ್ಷಣೆ ಮಾಡಿಕೊಂಡು, ವಾಪಸ್ಸಾದರು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಕೈಲಾಸಾಶ್ರಮ ಮಠದ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಕನಕಗುರುಪೀಠ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಬೆನಕನಹಳ್ಳಿ ಭಕ್ತಕನಕದಾಸ ಮಠದ ಶ್ರೀ ದೊರೆಸ್ವಾಮಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ವಾಟಾಳ್ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಅಶ್ವಿನ್ ಕುಮಾರ್, ಚಾಮುಂಡಿಬೆಟ್ಟದ ದೇವಾಲಯದ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ಮತ್ತಿತರರು ಕುಂಭಮೇಳದ ಪುಣ್ಯಸ್ನಾನ ಮಾಡಿದರು.

ಪ್ರವಾಸೋದ್ಯಮ ಸಚಿವ ಸಾ. ರಾ. ಮಹೇಶ್, ಸಂಸದ ಎಲ್. ಆರ್. ಶಿವರಾಮೇಗೌಡ, ಮಾಜಿ ಸಂಸದ ಜಿ. ಮಾದೇಗೌಡ, ಶಾಸಕರಾದ ಆರ್. ಧರ್ಮಸೇನಾ, ಕೆ. ಮಹದೇವ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಐಜಿಪಿ ಶರತ್‍ಚಂದ್ರ, ಎಸ್‍ಪಿ ಅಮಿತ್ ಸಿಂಗ್, ಎಎಸ್‍ಪಿ ಪಿ.ವಿ.ಸ್ನೇಹ, ಎಸಿ ಶಿವೇಗೌಡ ಸೇರಿದಂತೆ ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.

Translate »