ಗ್ರಾಪಂ ಸದಸ್ಯನ ಬರ್ಬರ ಹತ್ಯೆ
ಮಂಡ್ಯ, ಮೈಸೂರು

ಗ್ರಾಪಂ ಸದಸ್ಯನ ಬರ್ಬರ ಹತ್ಯೆ

February 20, 2019

ಪಾಂಡವಪುರ: ಹಳೇ ದ್ವೇಷದ ಹಿನ್ನೆಲೆ ಯಲ್ಲಿ ಗ್ರಾಪಂ ಸದಸ್ಯನೋರ್ವನನ್ನು ಸಾವಿರಾರು ಜನರೆ ದುರೇ ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ದೇವಿರಮ್ಮನ ಜಾತ್ರೆ ವೇಳೆ ನಡೆದಿದೆ.

ಚಿಕ್ಕಾಡೆ ಗ್ರಾಪಂ ಸದಸ್ಯ ತಿಮ್ಮೇಗೌಡ (50) ಹತ್ಯೆಗೊಳಗಾಗಿದ್ದು, ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮಿಗೌಡ, ಹತ್ಯೆ ಗೀಡಾದ ತಿಮ್ಮೇಗೌಡರ ಪುತ್ರ ವಿನಾಯಕ್, ಸಂಬಂಧಿಗಳಾದ ಗೌತಮ್, ಮಹೇಶ್ ಅವರಿಗೆ ಗಂಭೀರ ಗಾಯವಾಗಿದೆ. ಅದೇ ಗ್ರಾಮದ ನಿವಾಸಿಗಳಾದ ಯೋಗೇಗೌಡ, ಪುತ್ರ ಮದನ್, ಸೋದರ ಆನಂದ್ ಆಲಿ ಯಾಸ್ ದೇವೇಗೌಡ, ಸ್ನೇಹಿತರಾದ ಕುಮಾರ್, ಚಂದು ಎಂಬುವರೇ ಮಾರ ಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ವಿವರ: ಹತ್ಯೆಗೀಡಾದ ತಿಮ್ಮೇಗೌಡರ ಸೋದರನ ಪುತ್ರಿ ಸಹನಾ ಹಾಗೂ ಯೋಗೇಗೌಡನ ಪುತ್ರ ಮದನ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನಂತರದ ದಿನಗಳಲ್ಲಿ ಮದನ್ ಮನೆಯವರು ಯುವತಿಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದರು. ಇದರಿಂದ ಬೇಸತ್ತ ಯುವತಿ ಗಂಡನ ಮನೆ ತೊರೆದು ತವರಿಗೆ ಆಗಮಿಸಿದ್ದಳು. ಬಳಿಕ ಗ್ರಾಮದ ಮುಖಂಡರ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿ ಮೂಲಕ 3 ಲಕ್ಷ ವರದಕ್ಷಿಣೆ ನೀಡಿದ್ದರು ಎನ್ನಲಾಗಿದೆ. ಅದಾದ ಬಳಿಕವೂ ಮತ್ತೆ ವರದಕ್ಷಿಣೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಯುವತಿ ಮನೆಯವರು ಮದನ್ ಮತ್ತು ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಬಳಿಕ ಮದನ್ ಹಾಗೂ ಮನೆಯವರು ನಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದರು. ತಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಲು ತಿಮ್ಮೇಗೌಡ ಕಾರಣ ಎಂಬ ದ್ವೇಷದ ಹಿನ್ನೆಲೆಯಲ್ಲಿ ನಿನ್ನೆ ನಡೆದ ದೇವಿರಮ್ಮನ ಜಾತ್ರೆ ಸಂದರ್ಭದಲ್ಲಿ ಮದನ್ ಹಾಗೂ ಮನೆಯವರು, ಸಂಬಂಧಿಕರು ಮಾರಕಾಸ್ತ್ರಗಳಿಂದ ತಿಮ್ಮೇಗೌಡನನ್ನು ಕೊಲೆಗೈದಿದ್ದಾರೆ. ಘಟನೆ ವೇಳೆ ಬಿಡಿಸಲು ಹೋದ ಎಪಿಎಂಸಿ ಸದಸ್ಯ ಸ್ವಾಮೀಗೌಡ, ತಿಮ್ಮೇಗೌಡನ ಪುತ್ರ ವಿನಾಯಕ್, ಸಂಬಂಧಿಗಳಾದ ಗೌತಮ್ ಹಾಗೂ ಮಹೇಶ್‍ಗೂ ಲಾಂಗ್‍ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ತಿಮ್ಮೇಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ತಿಮ್ಮೇಗೌಡರ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಪೊಲೀಸರ ವೈಫಲ್ಯ: ಚಿಕ್ಕಾಡೆ ಗ್ರಾಮದ ದೇವಿರಮ್ಮನ ಉತ್ಸವದಲ್ಲಿ ಈ ಹಿಂದೆ ಎರಡು ಕೋಮುಗಳ ನಡುವೆ ಗಲಾಟೆ ಸಂಭವಿಸಿತ್ತು. ಹೀಗಾಗಿ ಪ್ರತಿ ವರ್ಷವೂ ಉತ್ಸವಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತಿತ್ತು. ಆದರೆ, ಈ ವರ್ಷ ಜಾತ್ರೆಗೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಕೇವಲ ಮೂರ್ನಾಲ್ಕು ಪೊಲೀಸರನ್ನು ಮಾತ್ರ ಉತ್ಸವದ ಭದ್ರತೆಗೆ ನಿಯೋಜಿಸಲಾಗಿತ್ತು ಎನ್ನಲಾಗಿದೆ. ಜತೆಗೆ ಗಲಾಟೆ ನಡೆಯುವ ಸಂದರ್ಭ ಪೊಲೀಸರು ಪಕ್ಕದಲ್ಲಿಯೇ ಇದ್ದರೂ ಘಟನಾ ಸ್ಥಳಕ್ಕೆ ಬರಲಿಲ್ಲ. ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಾಗಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಭೇಟಿ, ಸಾಂತ್ವನ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಮೃತ ತಿಮ್ಮೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.

Translate »