ಮಂಡ್ಯ, ನ.21- ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಳವಳ್ಳಿ ತಾಲೂಕು ನಂಜೇಗೌಡನ ದೊಡ್ಡಿ ಗ್ರಾಮದ ಮೇಘಶ್ರೀ ಕೊಲೆ ಪ್ರಕರಣವನ್ನು ಭೇದಿಸು ವಲ್ಲಿ ಪಾಂಡವಪುರ ಪೊಲೀಸರು ಯಶಸ್ವಿ ಯಾಗಿದ್ದು, 5 ವರ್ಷಗಳ ಬಳಿಕ ಮೇಘಶ್ರೀ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಆಕೆಯ ಪತಿ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ (28)ಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರಿ ಮೇಘಶ್ರೀ 2013ರಲ್ಲಿ ಬೆಂಗಳೂರಿನ ಕೋಡಿ ಚಿಕ್ಕನಹಳ್ಳಿಯಲ್ಲಿ ವಾಸವಾಗಿದ್ದು, ಬೊಮ್ಮನ ಹಳ್ಳಿಯ ಬೇಗೂರು ಬಳಿ ಇರುವ ಎಂಇಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆ ಸಮಯದಲ್ಲಿ ಆಕೆಯ ಗೆಳತಿಯರಾದ ಉಷಾ ಮತ್ತು ರಮ್ಯಾ ಅವರ ಅತ್ತೆಯ ಮಗ ನಾಗಿದ್ದ ಟಿ.ಕೆ.ಸ್ವಾಮಿಯೊಂದಿಗೆ ಮೇಘಶ್ರೀಗೆ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರು ಗಿದೆ. ಇಬ್ಬರು ಪರಸ್ಪರ ಪ್ರೀತಿಸುವಾಗ ಸ್ವಾಮಿ ಡಾಬಾವೊಂದರಲ್ಲಿ ಕೆಲಸ ನಿರ್ವಹಿಸುತ್ತಿ ದ್ದರೆ, ಮೇಘಶ್ರೀ ಗಾರ್ಮೆಂಟ್ಸ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. 2014ರಲ್ಲಿ ಬೆಂಗಳೂ ರಿನ ರಾಜರಾಜೇಶ್ವರಿನಗರದ ದೇವಾಲಯ ವೊಂದರಲ್ಲಿ ಮೇಘಶ್ರೀ ಮತ್ತು ಸ್ವಾಮಿ ವಿವಾಹವಾದರು. ನಂತರ ಆರೇಳು ತಿಂಗಳು ಗಳ ಕಾಲ ಬೆಂಗಳೂರಿನ ಬ್ಯಾಡರಹಳ್ಳಿ, ಆರ್.ಆರ್.ನಗರದ ಜವರೇಗೌಡನದೊಡ್ಡಿ ಯಲ್ಲಿ ವಾಸವಾಗಿದ್ದರು. ಬೆಂಗಳೂರಿನಲ್ಲಿ ಜೀವನ ಕಷ್ಟ ಎನಿಸಿದಾಗ ಮೈಸೂರಿನ ಕಳಸ್ತ ವಾಡಿಗೆ ಬಂದು ಜೀವನ ನಿರ್ವಹಣೆ ಮಾಡು ತ್ತಿದ್ದಾಗ ಇಬ್ಬರಿಗೂ ಸಣ್ಣ-ಪುಟ್ಟ ಜಗಳ ಶುರುವಾಗಿದೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಸಹ ಏರಿ ಇಬ್ಬರೂ ದೂರವಾಗಲು ನಿರ್ಧರಿಸಿ, ಮೇಘಶ್ರೀ ತವರು ಮನೆಗೆ ತೆರಳಿದ್ದಳು.
ಮೇಘಶ್ರೀ ಕೊಲೆಗೆ ಸ್ಕೆಚ್: 2015 ಮಾರ್ಚ್ 22ರಂದು ಟಿ.ಕೆ.ಸ್ವಾಮಿ ಪತ್ನಿ ಮೇಘಶ್ರೀಗೆ ದೂರವಾಣಿ ಕರೆ ಮಾಡಿ ನಾವಿಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸೋಣ ಎಂದು ಹೇಳಿ ಶ್ರೀರಂಗಪಟ್ಟಣದ ಲಾಡ್ಜ್‍ವೊಂದಕ್ಕೆ ಕರೆಸಿಕೊಂಡಿದ್ದಾನೆ. ರಾತ್ರಿ ಇಬ್ಬರೂ ಅಲ್ಲೇ ಕಳೆದು ಮರುದಿನ ಮಾರ್ಚ್ 23ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಜೊತೆಯಲ್ಲೇ ಸುತ್ತಾಡಿ, ಸಂಜೆಗೆ ಊರಿಗೆ ಹೋಗೋಣವೆಂದು ಪಾಂಡವಪುರ ತಾಲೂಕಿನ ತಿರುಮಲಾಪುರಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಬನಘಟ್ಟ ಗೇಟ್ ಬಳಿ ಮೇಘಶ್ರೀಯನ್ನು ಕತ್ತು ಹಿಸುಕಿ ಹತ್ಯೆ ಮಾಡಿ ಮೃತದೇಹವನ್ನು ವಿ.ಸಿ.ನಾಲೆಗೆ ಎಸೆದಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಆರೋಪಿ ಟಿ.ಕೆ.ಸ್ವಾಮಿ ಒಪ್ಪಿಕೊಂಡಿದ್ದಾ ನೆಂದು ಪೊಲೀಸರು ತಿಳಿಸಿದ್ದು, ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ವೋಟರ್ ಐಡಿ ಕೊಟ್ಟ ಸುಳಿವು: ಬೆಂಗಳೂರಿನಿಂದ ವಾಪಸ್ಸಾದ ಬಳಿಕ ಮಗಳು ಎಲ್ಲಿದ್ದಾಳೆ ಎನ್ನುವುದನ್ನು ತಿಳಿಯದ ಮೇಘಶ್ರೀ ತಾಯಿ ಮಹದೇವಮ್ಮ ಎಲ್ಲೆಡೆ ಹುಡುಕಿದ್ದಾರೆ. ಗಾರ್ಮೆಂಟ್ಸ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹದೇವಮ್ಮ ರಜಾದಿನಗಳಲ್ಲಿ ಮಗಳ ಫೋಟೋ ಹಿಡಿದುಕೊಂಡು ಊರೂರಲ್ಲಿ ಹುಡುಕುತ್ತಿದ್ದರು.
ಇತ್ತೀಚೆಗೆ ಮಹದೇವಮ್ಮ ಮನೆಯ ಬೀರುವಿನಲ್ಲಿ ಎಲೆಕ್ಷನ್ ವೋಟರ್ ಐಡಿ ಪತ್ತೆಯಾದಾಗ ಟಿ.ಕೆ.ಸ್ವಾಮಿ ವಿಳಾಸ ಮೇಘಶ್ರೀ ಪೋಷಕರಿಗೆ ಸಿಕ್ಕಿದೆ. ಅಕ್ಟೋಬರ್ 14, 2020ರಂದು ಟಿ.ಕೆ.ಸ್ವಾಮಿ ಗ್ರಾಮವಾದ ತಿರುಮಲಾಪುರಕ್ಕೆ ತೆರಳಿ ಮಗಳ ಬಗ್ಗೆ ವಿಚಾರಿಸಿದಾಗ ಗ್ರಾಮದ ಕೆಲ ವ್ಯಕ್ತಿಗಳು ನಿಮ್ಮ ಮಗಳು ಬದುಕಿಲ್ಲ. ಅವಳನ್ನು ಕೊಲೆ ಮಾಡಿ ಮುಚ್ಚಿಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಮರ್ಯಾದಾ ಹತ್ಯೆಯಲ್ಲ: ಅಕ್ಟೋಬರ್ 15ರಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮೇಘಶ್ರೀ ತಾಯಿ ಮಹದೇವಮ್ಮ ಮಗಳ ಕೊಲೆ ಬಗ್ಗೆ ದೂರು ನೀಡಿದ್ದರು. ಜೊತೆಗೆ ಮಹಿಳಾ ಆಯೋಗಕ್ಕೂ ದೂರು ನೀಡಿ, ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದರು. ಮೇಘಶ್ರೀ ಪೋಷಕರ ಜೊತೆಗೆ ದಲಿತ ಸಂಘಟನೆಗಳು ಕಳೆದೊಂದು ತಿಂಗಳಿಂದ ಇದೊಂದು ಮರ್ಯಾದಾ ಹತ್ಯೆ ಎಂದು ಆರೋಪಿಸಿ ನಿರಂತರ ಪ್ರತಿಭಟನೆ ನಡೆಸಿದ್ದವು. ಜೊತೆಗೆ ಪೊಲೀಸರು ಕೊಲೆಗಾರನನ್ನು ಬಂಧಿಸಬೇಕೆಂದು ಒತ್ತಡ ಹೇರಿದ್ದರು. ಕೊನೆಗೂ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಇದು ಮರ್ಯಾದಾ ಹತ್ಯೆಯಲ್ಲ ಕೌಟುಂಬಿಕ ಕಲಹದಿಂದ ಉಂಟಾದ ಹತ್ಯೆ ಎಂಬುದನ್ನು ಬಯಲಿಗೆಳೆದು ಆರೋಪಿ ಸ್ವಾಮಿಯನ್ನು ಬಂಧಿಸಲಾಗಿದ್ದು, ಈಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇನ್ನೂ ಮೇಘಶ್ರೀ ಶವದ ಮಾಹಿತಿ ಇಲ್ಲ: ಮೇಘಶ್ರೀಯನ್ನು ಕತ್ತು ಹಿಸುಕಿ 2015 ಮಾರ್ಚ್ 23ರಂದು ಕೊಲೆ ಮಾಡಿದ ಬಳಿಕ ನಾಲೆಗೆ ಶವವನ್ನು ಎಸೆದಿದ್ದಾಗಿ ಟಿ.ಕೆ.ಸ್ವಾಮಿ ತಿಳಿಸಿದ್ದರೂ ಆಕೆಯ ಶವದ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಮೇಘಶ್ರೀ ಪೋಷಕರು ದೂರು ನೀಡಿದ ಸಂದರ್ಭದಲ್ಲಿ ಪೊಲೀಸರು ತೋರಿಸಿದ್ದ ಅಪರಿಚಿತ ಮಹಿಳೆಯ ಶವದ ಫೋಟೋ 2015ರ ಅಕ್ಟೋಬರ್ ತಿಂಗಳಲ್ಲಿ ಪತ್ತೆಯಾಗಿದ್ದ ಶವದ್ದಾಗಿತ್ತು. ಇದೇ ಶವವನ್ನು ಪೋಷಕರು ಮೇಘಶ್ರೀ ಶವವೆಂದು ಖಚಿತಪಡಿಸಿದ್ದರು. ಆದರೆ ಶವದ ಎತ್ತರ, ಮೈಮೇಲಿನ ಚಹರೆಗಳಿಂದ ಪೊಲೀಸರು ಅದನ್ನು ನಂಬದೆ ಡಿಎನ್‍ಎ ಪರೀಕ್ಷೆಗೆ ಕಳುಹಿಸಿದ್ದು, ಆ ವರದಿ ಇನ್ನು ಪೊಲೀಸರ ಕೈಸೇರಿಲ್ಲ.