ಇದೇ ಮೊದಲ ಬಾರಿ ವಾರಣಾಸಿ ಮಾದರಿ ಗಂಗಾರತಿ
ಮೈಸೂರು

ಇದೇ ಮೊದಲ ಬಾರಿ ವಾರಣಾಸಿ ಮಾದರಿ ಗಂಗಾರತಿ

February 19, 2019

ತಿ.ನರಸೀಪುರ: ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವ 11ನೇ ಕುಂಭಮೇಳದ ಅಂಗವಾಗಿ ಸೋಮವಾರ ಸಂಜೆ ಇದೇ ಮೊದಲ ಬಾರಿ ಗಂಗಾರತಿ ಧಾರ್ಮಿಕ ಕೈಂಕರ್ಯ ಭಕ್ತಿಭಾವದಿಂದ ನೆರವೇರಿತು.

ಉತ್ತರದ ವಾರಣಾಸಿ ಮಾದರಿಯಲ್ಲಿ ದಕ್ಷಿಣದ ತಿರುಮಕೂಡಲು ಕುಂಭಮೇಳದಲ್ಲಿ ನಡೆದ ಗಂಗಾಪೂಜೆ ಹಾಗೂ ದೀಪಾರತಿ ವಿಶಿಷ್ಟ ಕೈಂಕರ್ಯಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ನಾಡಿನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಅನಿತಾ ಕುಮಾರ ಸ್ವಾಮಿ, ಹೆಚ್.ವಿಶ್ವನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಅಶ್ವಿನ್‍ಕುಮಾರ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದರು.

ಗಂಗಾರತಿ ಪೂಜೆಯನ್ನು ಕಣ್ತುಂಬಿ ಕೊಳ್ಳಲು ಭಕ್ತರು ವಾರಣಾಸಿಗೆ ಹೋಗಬೇಕಾಗಿತ್ತು. ಆದರೆ ಇದೇ ಮೊದಲ ಬಾರಿಗೆ ತಿರುಮಕೂಡಲುವಿನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನೆರವೇರಿತು. ನದಿಯ ಮಧ್ಯದಲ್ಲಿ ನಿರ್ಮಿಸಲಾಗಿರುವ ಭವ್ಯ ವೇದಿಕೆಯಲ್ಲಿ ಭಕ್ತಿ ಗೀತೆಗಳ ಝೇಂಕಾರ, ಸಾಂಪ್ರದಾಯಿಕ ನೃತ್ಯ ಪ್ರದರ್ಶನದ ಜೊತೆಗೆ ಕಲಾವಿದರು ದೀಪಗಳನ್ನು ಬೆಳಗಿಸಿದರು. ಇದೇ ವೇಳೆ ಆಗಸದಲ್ಲಿ ಸಿಡಿ ಮದ್ದುಗಳ ವರ್ಣರಂಜಿತ ಚಿತ್ತಾರ ಸೃಷ್ಟಿಯಾಗಿತ್ತು. ಭಕ್ತಿ ಪರವಶರಾಗಿದ್ದ ಭಕ್ತ ಸಾಗರದಿಂದ ಉದ್ಘೋಷ ಕೇಳಿಬಂದಿತು.

ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನಿತರ ಗಣ್ಯರು ಗಂಗಾಪೂಜೆ ನೆರವೇರಿಸಿದ ಬಳಿಕ ಪುಣ್ಯ ನದಿಗೆ ದೀಪಗಳನ್ನು ತೇಲಿ ಬಿಡಲಾಯಿತು. ಅಂದಕಾರ ಅಳಿಸಿ, ಬೆಳಕು ಚೆಲ್ಲುವಂತೆ ನದಿಯಲ್ಲಿ ತೇಲುತ್ತಿದ್ದ ದೀಪಗಳನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡು ಪುನೀತರಾದರು. ಒಟ್ಟಾರೆ ಕಾವೇರಿ, ಕಪಿಲೆ, ಗುಪ್ತಗಾಮಿನಿ ಸ್ಫಟಿಕ ಸರೋವರ ಸಂಗಮದಲ್ಲಿ ಸ್ವರ್ಗವೇ ಸೃಷ್ಟಿಯಾದಂತಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಉತ್ತರ ಭಾರತದ ಪ್ರಯಾಗದ ಮಾದರಿಯಲ್ಲಿ ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಈ ಬಾರಿ ವಿಶೇಷವಾಗಿ ಗಂಗಾರತಿ ಕೈಂಕರ್ಯವನ್ನು ಆರಂಭಿಸಿದ್ದು, ಇದರಲ್ಲಿ ಭಾಗಿಯಾಗಿದ್ದು ಸಂತೋಷ ತಂದಿದೆ. ಮುಂದಿನ ವರ್ಷ ಗಳಲ್ಲಿ ಇಡೀ ದಕ್ಷಿಣ ಭಾರತದಿಂದ ಭಕ್ತರು ಆಗಮಿಸುವಂತೆ ಪ್ರಸಿದ್ಧವಾಗಬೇಕೆಂಬುದು ನಮ್ಮ ಆಶಯ. ಈ ಕುಂಭಮೇಳ ನಾಡಿನ ಜನತೆಗೆ ಒಳಿತು ತರಲಿ. ಉತ್ತಮ ಮಳೆ, ಬೆಳೆ, ಸಮೃದ್ಧಿ ತರಲಿ. ಕಳೆದ ಬಾರಿ ಉತ್ತಮವಾಗಿ ಬತ್ತ ಬೆಳೆಯಲಾಗಿತ್ತು. ಈ ಬಾರಿ 2 ಬೆಳೆಯನ್ನು ಕರುಣಿಸಲಿ. ಕಾವೇರಿ ತಾಯಿ ತುಂಬಿ ಹರಿದರೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇಲ್ಲದಂತಾಗುತ್ತದೆ. ಈ ಪುಣ್ಯ ಕಾರ್ಯದಿಂದ ಎಲ್ಲರ ಮನಸ್ಸುಗಳು ಪರಿಶುದ್ಧವಾಗಿ, ಸಹೋದರ ಭಾವದಿಂದ ಬದುಕಬೇಕೆಂಬ ಪರಿವರ್ತನೆ ತರಲೆಂದು ಆಶಿಸಿದರು.

ಭಕ್ತ ಸಾಗರ: ಕಾವೇರಿ, ಕಪಿಲೆ, ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮದಲ್ಲಿ ವೈಭವಯುತವಾಗಿ ನಡೆಯುತ್ತಿರುವ ಕುಂಭ ಮೇಳಕ್ಕೆ ಸೋಮವಾರ ಸಂಜೆ ಭಕ್ತ ಸಾಗರವೇ ಹರಿದು ಬಂದಿತ್ತು. ನದಿಯ ಮಧ್ಯೆ ನಡುಗಡ್ಡೆಯಲ್ಲಿ ನಿರ್ಮಿ ಸಲಾಗಿರುವ ಭವ್ಯ ವೇದಿಕೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಜೊತೆಗೆ ಇಂದು ಗಂಗಾಪೂಜೆ ಹಾಗೂ ದೀಪಾರತಿ ಧಾರ್ಮಿಕ ಉತ್ಸವವೂ ನಡೆಯಿತು. ಈ ವಿಶಿಷ್ಟ ಕೈಂಕರ್ಯವನ್ನು ತುಂಬಿಕೊಳ್ಳಲು ಸಾಧು ಸಂತರು, ಅಪಾರ ಗಣ್ಯರು ಸೇರಿದ್ದರು. ಅಗಸ್ತೇಶ್ವರಸ್ವಾಮಿ ದೇವಾಲಯ ಹಾಗೂ ಗುಂಜಾಂ ನರಸಿಂಹಸ್ವಾಮಿ ದೇವಾಲಯದ ಕಡೆಯಿಂದ ನಡುಗಡ್ಡೆಗೆ ನಿರ್ಮಿಸಿದ್ದ ಸೇತುವೆಯಲ್ಲಿ ಸಹಸ್ರಾರು ಭಕ್ತರೂ ಬಂದು ಸೇರಿದ್ದರು. ನಿಸರ್ಗದ ಮಡಿಲಿನಲ್ಲಿ ನಿಂತು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದ ನದಿ ಸುತ್ತಲಿರುವ ದೇವಾಲಯಗಳು, ಸೇತುವೆಗಳನ್ನು ಕಣ್ತುಂಬಿಕೊಂಡರು. ಕಾವೇರಿ, ಕಪಿಲೆ ಹಾಗೂ ತ್ರಿವೇಣಿ ಸಂಗಮ ವೇದಿಕೆಯಲ್ಲಿ ಪ್ರಸ್ತುತಗೊಂಡ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ತಿರುಮಕೂಡಲು ವೃತ್ತದಿಂದ ನದಿ ಕಡೆಗೆ ಭಕ್ತರು ಸರತಿಯಲ್ಲಿ ಸಾಗಿದರು. ದೇವಾಲಯಗಳು, ಸರ್ಕಾರಿ ಕಟ್ಟಡಗಳು, ವೃತ್ತಗಳು, ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ನಾಳೆ(ಮಂಗಳವಾರ) ಕುಂಭಮೇಳದ ಕಡೇ ದಿನ ಹಾಗೂ ಹುಣ್ಣಿಮೆ ಇರುವುದರಿಂದ ಪುಣ್ಯ ಸ್ನಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ತಿರುಮಕೂಡಲಿನಲ್ಲಿ ಜನ ಸಂಗಮವೂ ಮೇಳೈಸಲಿದೆ.

Translate »