ನಾವು ಆಪರೇಷನ್‍ಗೆ ಕೈ ಹಾಕಲ್ಲ…!  ನೀವು ಎಸ್‍ಐಟಿಗೆ ಸಿಲುಕಿಸಬೇಡಿ…!!
ಮೈಸೂರು

ನಾವು ಆಪರೇಷನ್‍ಗೆ ಕೈ ಹಾಕಲ್ಲ…! ನೀವು ಎಸ್‍ಐಟಿಗೆ ಸಿಲುಕಿಸಬೇಡಿ…!!

February 19, 2019

ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕುವುದಿಲ್ಲ. ನೀವು, ಎಸ್‍ಐಟಿ ತನಿಖೆ ಮೂಲಕ ನಮ್ಮವರನ್ನು ಸಂದಿಗ್ಧತೆಗೆ ಸಿಲುಕಿಸಬೇಡಿ ಎಂದು ಬಿಜೆಪಿಯ ಕೆಲವು ರಾಜ್ಯ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ.

ರಹಸ್ಯ ಸಂಧಾನಕ್ಕೆ ಮುಖ್ಯ ಮಂತ್ರಿಯವರು ಸಮ್ಮತಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಮತ್ತಿತರರ ವಿರುದ್ಧ ನಡೆಯಬೇಕಿದ್ದ ಎಸ್‍ಐಟಿ ತನಿಖೆ ಸದ್ಯಕ್ಕೆ ಸ್ಥಗಿತವಾಗಿದೆ.

ಯಡಿಯೂರಪ್ಪ ಅವರ ಆಡಿಯೋ ಪ್ರಕರಣದಿಂದ ಅಸಮಾಧಾನಗೊಂಡ ಬಿಜೆಪಿ ವರಿಷ್ಠರು, ಏನಾದರೂ ಮಾಡಿ ಪ್ರಕರಣಕ್ಕೆ ಜೀವ ಬರದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶಾದ್ಯಂತ ಲೋಕಸಭಾ ಚುನಾವಣೆಯನ್ನು ಎದುರಿಸಲು ಪಕ್ಷ ಮುಜು ಗರ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಘಟಕದ ನಾಯಕರಿಗೆ ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲೇ ಕುಮಾರಸ್ವಾಮಿ ಅವರಿಗೆ ಆಪ್ತರಾಗಿರುವ ಕೆಲವು ಬಿಜೆಪಿ ಮುಖಂಡರು ಅವರನ್ನು ರಹಸ್ಯ ಸ್ಥಳದಲ್ಲಿ ಭೇಟಿ ಮಾಡಿ, ಕೊಟ್ಟು ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಧ್ವನಿ ಸುರುಳಿ ಪ್ರಕರಣವನ್ನು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ರಾಜ ಕೀಯವಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ಇದರಿಂದ ನೀವು ಮತ್ತು ಯಡಿಯೂರಪ್ಪ ರಸ್ತೆಯಲ್ಲಿ ಗುದ್ದಾಡು ವಂತೆ ಮಾಡಿ, ತಾವು ರಾಜಕೀಯ ಲಾಭ ಪಡೆಯುವ ಹುನ್ನಾರ ಇದಾಗಿದೆ. ಮುಂದೊಂದು ದಿನ ನಾವು, ನೀವು ಒಂದಾಗುತ್ತೇವೆ. ನಿಮಗೆ ಕಾಂಗ್ರೆಸ್‍ನವರು ಕೈಕೊಡು ತ್ತಾರೆ. ಈಗಾಗಲೇ ನಿಮಗೆ ಅನುಭವವಾಗಿದೆ. ಮುಖ್ಯಮಂತ್ರಿ ಯಾಗಿದ್ದರೂ, ಅದನ್ನು ಅನುಭವಿಸುವ ಸ್ಥಿತಿಯಲ್ಲಿ ನೀವಿಲ್ಲ. ದಿನನಿತ್ಯ ಕಿರುಕುಳ ನೀಡುತ್ತಿರುವವರೇ ಸಿದ್ದ ರಾಮಯ್ಯ ಮತ್ತು ಅವರ ಬೆಂಬಲಿಗರು. ಅವರಿಂದಲೇ ಈ ಆಪರೇಷನ್ ಕಮಲ ಸೃಷ್ಟಿಯಾಗಿದೆ. ಇದೀಗ ಅದರ ರಾಜಕೀಯ ಲಾಭ ಪಡೆಯಲು ಅವರು ಹೊರಟಿದ್ದಾರೆ ಎಂದು ಎಳೆ ಎಳೆಯಾಗಿ ಬಿಜೆಪಿ ಮುಖಂಡರು ಕುಮಾರ ಸ್ವಾಮಿ ಅವರ ಬಳಿ ಬಿಡಿಸಿಟ್ಟಿದ್ದಾರೆ.

ಇದಕ್ಕೆ ತಲೆಬಾಗಿರುವ ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕಾಟಾಚಾರದ ತನಿಖೆ ನಡೆಸೋಣ. ಒಂದು ವೇಳೆ ಯಡಿ ಯೂರಪ್ಪನವರು ಮತ್ತೆ ಬಾಲ ಬಿಚ್ಚಿದರೆ ನಾನು ನನ್ನ ಅಸ್ತ್ರಗಳನ್ನು ಬಳಸಬೇಕಾಗುತ್ತದೆ.

ನೀವು ಭರವಸೆ ನೀಡಿದರೆ, ನಿಮ್ಮ ಮಾತಿಗೆ ಮನ್ನಣೆ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ. ಮುಂದುವರಿದ ಬಿಜೆಪಿ ನಾಯಕರು ನಾವು ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಮುಖ್ಯವಲ್ಲ.ಲೋಕಸಭಾ ಚುನಾವಣೆಯ ನಂತರ ಯಾವ್ಯಾವ ಸನ್ನಿವೇಶಗಳು ಎದುರಾಗುತ್ತವೋ ನೋಡೋಣ. ಅಲ್ಲಿಯವರೆಗೆ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿಬಿಡಿ ಎಂದು ವರಿಷ್ಠರು ರಾಜ್ಯಘಟಕದ ನಾಯಕರಿಗೆ ಹೇಳಿದ್ದಾರೆ.

ಎಸ್‍ಐಟಿ ತನಿಖೆಗೆ ತರಾತುರಿ ಮಾಡಬೇಡಿ.ಮುಂದಿನ ದಿನಗಳಲ್ಲಿ ನಡೆಸಿದರೂ ಅದೊಂದು ಶಾಸ್ತ್ರದಂತೆ ಮುಗಿದು ಹೋಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಾವು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುವುದಿಲ್ಲ.ಹೀಗಾಗಿ ನೀವೂ ಎಸ್.ಐ.ಟಿ ತನಿಖೆಯ ವಿಷಯದಲ್ಲಿ ಪ್ರತಿಷ್ಠೆಗಿಳಿಯುವುದು ಬೇಡ ಎಂದು ಬಿಜೆಪಿಯ ರಾಜ್ಯ ನಾಯಕರು ಕುಮಾರಸ್ವಾಮಿ ಅವರಿಗೆ ವಿವರಿಸಿದ್ದಾರೆ. ಪಕ್ಷದಲ್ಲಿನ ಈ ವಿದ್ಯಮಾನಗಳ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‍ನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರಿಬ್ಬರೂ ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ವೈಯಕ್ತಿಕ ನೋವನ್ನು ತೋಡಿಕೊಂಡಿದ್ದಲ್ಲದೆ, ಯಾವ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದರು.

Translate »