ಲೋಕಸಭಾ ಸಮರದತ್ತ ಬಿಜೆಪಿ, ಕಾಂಗ್ರೆಸ್ ಚಿತ್ತ
ಮೈಸೂರು

ಲೋಕಸಭಾ ಸಮರದತ್ತ ಬಿಜೆಪಿ, ಕಾಂಗ್ರೆಸ್ ಚಿತ್ತ

February 19, 2019

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಳಗಿಳಿಸುವ ಕಾರ್ಯ ಕೈಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ, ಲೋಕಸಭಾ ಚುನಾವಣೆಯತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ ಆಪರೇಷನ್ ಕಮಲ ವಿಫಲಗೊಂಡ ಸಂತಸ ದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಕೇಂದ್ರ ದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ತರಲು ಇಂದು ಇಡೀ ದಿನ ಸಭೆಗಳನ್ನು ನಡೆಸಿದರು.

ಏಪ್ರಿಲ್ 2ನೇ ಇಲ್ಲವೇ 3ನೇ ವಾರದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ ಎಂಬ ಮಾಹಿ ತಿಯ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷದ ರಾಜ್ಯ ನಾಯಕರು ಹೆಚ್ಚು ಸ್ಥಾನ ಗಳನ್ನು ಗೆಲ್ಲಲು ಕಸರತ್ತು ಆರಂಭಿಸಿದ್ದಾರೆ. ಬಹು ದಿನಗಳ ನಂತರ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲು ರಾಜ್ಯದಿಂದ 22 ಲೋಕಸಭಾ ಕ್ಷೇತ್ರಗಳನ್ನು ಪಕ್ಷಕ್ಕೆ ಗೆಲ್ಲಿಸಿಕೊಡುವ ಘೋಷಣೆ ಮಾಡಿದರು. ಸಲುವಾಗಿ ಇಂದಿನಿಂದಲೇ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಬೈಕ್ ರ್ಯಾಲಿ, ಕಾರ್ಯಕರ್ತರ ಮನೆಯ ಮುಂದೆ ಬಿಜೆಪಿ ದೀಪ ಬೆಳಗಿಸುವುದರ ಜೊತೆಗೆ ಅವರ ಮನೆಯ ಮೇಲೆ ಪಕ್ಷದ ಧ್ವಜ ಹಾರಿಸುವುದು ಪ್ರಮುಖವಾಗಿದೆ. ಚುನಾವಣೆಯ ದಿನದವರೆಗೂ ಮುಖಂಡರು ಮತ್ತು ಕಾರ್ಯಕರ್ತರು ವಿಶ್ರಮಿಸದೇ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ ಕಾರ್ಯಕರ್ತರು, ಸಂಘಟನೆ ಜೊತೆಗೆ ಪ್ರಧಾನಿಯವರು ಕೈಗೊಂಡಿರುವ ಅಭಿವೃದ್ಧಿ ಕೆಲಸ ತಿಳಿ ಹೇಳುವುದಲ್ಲದೆ, ಜೊತೆ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮತದಾರರ ಮುಂದಿಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಘಟಕದ ಅಮಿತ್ ಷಾ ಮತ್ತು ರಾಷ್ಟ್ರೀಯ ಮುಖಂಡರು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಇಂತಹ ರ್ಯಾಲಿಗಳನ್ನು ಏರ್ಪಡಿಸುವುದಾಗಿ ತಿಳಿಸಿದ ಯಡಿಯೂರಪ್ಪ, ನಾವು ರಾಜ್ಯದ ಮುಖಂಡರುಗಳು ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಿಕೊಂಡು ಚುನಾವಣಾ ಪ್ರಚಾರಕ್ಕೆ ಧುಮುಕುತ್ತೇವೆ.

ನಮ್ಮ ಪರಿವಾರ, ಬಿಜೆಪಿ ಪರಿವಾರ, ಮೋದಿ ವಿಜಯ ಸಂಕಲ್ಪ ಯಾತ್ರೆ, ಕಾರ್ಯ ಕರ್ತರೊಂದಿಗೆ ಸಮಾವೇಶ, ಸಂವಾದ ಸೇರಿದಂತೆ ನಾನಾ ರೀತಿಯ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಇದೇ 22ರಿಂದ ಮಾ19ರವರೆಗೆ ಮೊದಲ ಸುತ್ತಿನ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಯನ್ನು ಪೂರ್ಣಗೊಳಿಸಲಿದ್ದಾರೆ.

ಇದೇ 21ರಂದು ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರಗಳ ಬೃಹತ್ ಕಾರ್ಯಕ್ರಮ ದೇವನಹಳ್ಳಿಯಲ್ಲಿ ನಡೆಯಲಿದ್ದು, ಅಂದಿನ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳುವರು.

ಫೆ.22ರಂದು ಬೀದರ್ ಜಿಲ್ಲೆಯ ಹುಮನಾಬಾದ್‍ನಲ್ಲಿ ಬೆಳಿಗ್ಗೆ 11 ಗಂಟೆಗೆ ಕಲಬುರ್ಗಿ ಮತ್ತು ಬೀದರ್ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಯಲಿದ್ದು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ್ ಭಾಗವಹಿಸುವರು. ಸಂಜೆ 4 ಗಂಟೆಗೆ ಯಾದಗಿರಿಯಲ್ಲಿ ಮೋದಿ ವಿಜಯ ಸಂಕಲ್ಪಯಾತ್ರೆ ನಡೆಯಲಿದೆ ಎಂದು ತಿಳಿಸಿದರು. ಫೆ. 23ರಂದು ವಿಜಯಪುರ, ಬಾಗಲಕೋಟೆ ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆದರೆ, 25ರಂದು ಗದಗದಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ, 28ರಂದು ರಾಯಚೂರಿನಲ್ಲಿ ಸಂಕಲ್ಪ ಯಾತ್ರೆ ಹಾಗೂ ಮಾ.1ರಂದು ಕಲಬುರ್ಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ.

Translate »