ಮೈಸೂರು: ವಿಮರ್ಶಕರಲ್ಲಿ ಇಂದು ಬಹುತೇಕರು ಸಹೃದಯತೆ ಮರೆತು ಪಕ್ಷಪಾತಿಗಳಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ವಿಷಾದಿಸಿದರು.
ಮೈಸೂರಿನ ಜೆಎಲ್‍ಬಿ ರಸ್ತೆಯ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಹೇಮಗಂಗಾ ಕಾವ್ಯ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಗೀತೆ ರಚಿಸಿದ್ದ `ಪರಸಂಗದ ಗೆಂಡೆತಿಮ್ಮ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಹಾಡುಗಳಿಗೆ ಸಂಬಂಧಿಸಿದಂತೆ ವಿಮರ್ಶೆಗಳು ಪ್ರಕಟಗೊಂಡಿದ್ದವು. ಆ ವಿಮರ್ಶೆಗಳನ್ನು ಓದಿದವರು ಸಿನಿಮಾ ನೋಡುವ ನಿರ್ಧಾರವನ್ನೇ ಕೈಬಿಡುತ್ತಿದ್ದರು. ಆ ರೀತಿಯ ವಿಮರ್ಶೆ ಮಾಡಲಾಗಿತ್ತು. ಆದರೆ ವಿಮರ್ಶೆ ಹುಸಿಯಾಗಿ ಜನತೆ ಹಾಡನ್ನು ಗುನುಗುವಂತಾಯಿತು ಎಂದು ಹೇಳಿದರು.
ಇಂದು ಅನೇಕ ವಿಮರ್ಶಕರು ಜಾತಿ ನೋಡಿ ಯಾವ ರೀತಿ ವಿಮರ್ಶೆ ಮಾಡಬೇಕೆಂದು ತೀರ್ಮಾನಿಸುತ್ತಾರೆ. ಇಂತಹ ವಿಮರ್ಶಕರಿಂದ ಸಮಾಜದಲ್ಲಿ ಕಂದಕ ಮೂಡುತ್ತಿದ್ದು, ವ್ಯಕ್ತಿ ವ್ಯಕ್ತಿಗಳ ನಡುವೆ ಕಂಬಿಗಳ ಹಾಗೂ ಗಾಜಿನ ಮನೆ ನಿರ್ಮಿಸುತ್ತಿದ್ದಾರೆ. ಭಾವನೆಗಳೇ ಇಲ್ಲದ ಕೇವಲ ಹಣಕ್ಕೆ ಪ್ರಾಧಾನ್ಯತೆ ನೀಡುತ್ತಿರುವ ಸಮಾಜದಲ್ಲಿ ಸಂಬಂಧಗಳು, ಮೌಲ್ಯಗಳು ಹಾಗೂ ಮಾನವೀಯತೆ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಹೃದಯಿಗಳನ್ನು ಹುಡುಕಾಡುವಂತೆ ಆಗಿದೆ ಎಂದು ವಿಷಾದಿಸಿದರು.
ಹಾಡು ಬರೆಯುವವನು ಸಾಂಸ್ಕೃತಿಕ ರಾಯಭಾರಿಯಂತೆ ಕೆಲಸ ಮಾಡಬೇಕಾಗುತ್ತದೆ. ಸಾಹಿತ್ಯ ಪರೋಕ್ಷವಾಗಿ ನಮ್ಮ ಸಂಸ್ಕೃತಿ ಕುರಿತು ಮಾತನಾಡುತ್ತದೆ. ಒಂದು ಸಿನಿಮಾಕ್ಕೆ ಹಾಡು ಬರೆಯಬೇಕೆಂದರೆ, ಬಗೆಬಗೆಯ ಕಾರ್ಯವಿಧಾನದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಆ ಮೂಲಕ ಸಾಹಿತ್ಯ ಉನ್ನತೀಕರಣಗೊಳಿಸುವುದು ಮುಖ್ಯ. ಚಿತ್ರಗೀತೆ ರಚನೆ ಸುಲಭಸಾಧ್ಯವೇನಲ್ಲ. ಸಿನಿಮಾ ಹಾಡಿನ ಸಾಹಿತ್ಯ ತಾನೆಂದು ಮೂಗು ಮುರಿಯುವವರು ಅದನ್ನು ಮಾಡಿ ತೋರಿಸುವ ಸವಾಲು ಸ್ವೀಕರಿಸಬೇಕು. ಪದಗಳನ್ನು ಹುಡುಕಿ, ಅದಕ್ಕೆ ಅರ್ಥ ಜೋಡಿಸಿ ಬಳಿಕ ಸನ್ನಿವೇಶಕ್ಕೆ ಒಗ್ಗಿಸಿ ಗಾಯಕರು ಕಂಠಸಿರಿ ನೀಡುವವರೆಗೂ ಅನೇಕ ಬಗೆಯ ಕೆಲಸಗಳಿರುತ್ತವೆ ಎಂದು ವಿವರಿಸಿದರು.
ಗೀತೆಗಳಲ್ಲಿರಲಿ ಸಂಸ್ಕೃತಿಯ ಅಭಿರುಚಿ: ಗೀತ ರಚನಾ ಸಾಹಿತ್ಯ ಕೃಷಿಯಲ್ಲಿ ಎಷ್ಟೇ ದೊಡ್ಡ ಅನುಭವ ಇದ್ದರೂ ಹಾಡೊಂದನ್ನು ಬರೆಯಲು ಶುರು ಮಾಡುವಾಗ ಅದೊಂದು ಸವಾಲೇ ಆಗಿರುತ್ತದೆ. ಚಿತ್ರಗೀತೆ ಬರೆಯುವ ಆಕಾಂಕ್ಷೆ ಹೊಂದಿರುವವರಿಗೆ ಮೂಲ ಸಂಸ್ಕೃತಿಯ ಕಡೆಗೆ ನಮ್ಮ ಅಭಿರುಚಿ ಇರಲೆಂದು ಸಲಹೆ ನೀಡುತ್ತೇನೆ. ಬರೆಯುವ ಮೊದಲು ಕನ್ನಡ, ಭಾರತಾಂಬೆ, ಮಣ್ಣಿನ ಸೊಗಡಿಗೆ ಅನುಗುಣವಾಗಿ ಬರೆಯಬೇಕು. ಇಂತಹ ಗ್ರಾಮೀಣ ಸೊಗಡಿನಲ್ಲಿ ಗೀತೆ ರಚನೆಗೆ ಪಂಪ, ರನ್ನ, ಕುಮಾರವ್ಯಾಸನ ಸಾಹಿತ್ಯ ಹಾಗೂ ವಚನ ಸಾಹಿತ್ಯ ಓದಿಕೊಳ್ಳುವುದು ಮುಖ್ಯ. ನಾನೂ ಕೂಡ ಯಶಸ್ಸು ಗಳಿಸಲು ಈ ಸಾಹಿತ್ಯಗಳ ಅಧ್ಯಯನವೇ ಕಾರಣ ಎಂದು ನುಡಿದರು.
ನಂತರ ಕವಿ ಸಮ್ಮೇಳನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾಜ ಸೇವಕ ಡಾ.ಕೆ.ರಘುರಾಮ ವಾಜಪೇಯಿ ಸಮಾರಂಭ ಉದ್ಘಾಟಿಸಿದರು. ಸಂಸ್ಕೃತಿ ಪೋಷಕಿ ಎ.ಹೇಮಗಂಗಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಡಾ.ಜಯಪ್ಪ ಹೊನ್ನಾಳಿ, ಮಹದೇವ ನಾಯಕ ಕೂಡ್ಲಾಪುರ, ಸಮಾಜ ಸೇವಕ ಡಾ.ಭೇರ್ಯ ರಾಮಕುಮಾರ್, ಜ್ಞಾನೋದಯ ಪಪೂ ಕಾಲೇಜಿನ ಪ್ರಾಂಶುಪಾಲ ಶ್ರೀಕಂಠಶರ್ಮಾ ಮತ್ತಿತರರು ಹಾಜರಿದ್ದರು.