ವಿಶ್ವ ಯೋಗದ ದಿನದ ಅಂತಿಮ ತಾಲೀಮಿನಲ್ಲಿ 10 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಭಾಗಿ
ಮೈಸೂರು

ವಿಶ್ವ ಯೋಗದ ದಿನದ ಅಂತಿಮ ತಾಲೀಮಿನಲ್ಲಿ 10 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಭಾಗಿ

June 18, 2018
  •  ಜೂ.21ರಂದು ಒಂದು ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನ
  • ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಸಚಿವರು, ಶಾಸಕರು ಭಾಗಿ

ಮೈಸೂರು: ವಿಶ್ವ ಯೋಗದ ದಿನದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ಅಂತಿಮ ತಾಲೀಮಿನಲ್ಲಿ ವಿವಿಧ ಯೋಗ ಸಂಸ್ಥೆಗಳು ಹಾಗು ಶಾಲಾ-ಕಾಲೇಜುಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡಿದ್ದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎಸ್‍ಪಿವೈಎಸ್‍ಎಸ್, ಜಿಎಸ್‍ಎಸ್ ಯೋಗಿಕ್ ಫೌಂಡೇಶನ್, ಪತಂಜಲಿ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ ಫೌಂಡೇಷನ್ ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ತಾಲೀಮಿನಲ್ಲಿ ಸುಮಾರು 10 ಸಾವಿರಕ್ಕಿಂತಲೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಗಮನ ಸೆಳೆದರು.

ಯೋಗ ತಾಲೀಮಿನಲ್ಲಿ ಭಾಗವಹಿಸಲು ಮುಂಜಾನೆ 5.10ರಿಂದಲೇ ಮೈಸೂರಿನ ವಿವಿಧೆಡೆಯಿಂದ ಯೋಗಪಟುಗಳು ರೇಸ್‍ಕೋರ್ಸ್‍ಗೆ ಆಗಮಿಸಿದರು. ಬೆಳಗ್ಗೆ 6.10ರ ವೇಳೆಗೆ 10 ಸಾವಿರದ ಗಡಿ ದಾಟಿದರು. ಇದರಿಂದ ಬೆಳಗ್ಗೆ 6.15ರಿಂದ ತಾಲೀಮು ಆರಂಭಿಸಲಾಯಿತು. ಆರಂಭದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಬೆಳಗ್ಗೆ 7ರವರೆಗೆ ಯೋಗಾಸನಕ್ಕೆ ಅಗತ್ಯವಾದ ವ್ಯಾಯಾಮ ಮಾಡಲಾಯಿತು. ನಂತರ 7ಕ್ಕೆ ಸಚಿವ ಸಾ.ರಾ.ಮಹೇಶ್ ಅವರು ಆಗಮಿಸಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಪ್ರವಾಸೋಧ್ಯಮ ಸಚಿವರಾಗಿರುವ ಸಾ.ರಾ.ಮಹೇಶ್ ಅವರು ಮೈಸೂರಿನಲ್ಲಿ ವಿಶ್ವ ಯೋಗದಿನದ ಯಶಸ್ವಿಗೆ ಆಸ್ಥೆ ವಹಿಸಿದ್ದು, ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವ ವಾಗ್ಧಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗ ಸಂಸ್ಥೆಗಳು ಮೈಸೂರಿನಲ್ಲಿ ಯೋಗ ಪ್ರದರ್ಶನ ಮಾಡುವ ತವಕದಲ್ಲಿವೆ.

ಇಂದು ಪ್ರಾರ್ಥನೆ ನೆರವೇರಿದ ನಂತರ ನಾಲ್ಕು ನಿಮಿಷಗಳ ಕಾಲ ಯೋಗಾಸನಕ್ಕೆ ಪೂರಕವಾದ 17 ಬಗೆಯ ವ್ಯಾಯಾಮ ಮಾಡಿದರು. ಬಳಿಕ 25 ನಿಮಿಷಗಳ ಕಾಲ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಖಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಸೇರಿದಂತೆ ಇನ್ನಿತರ 19 ಆಸನಗಳನ್ನು ಪ್ರದರ್ಶಿಸಿದರು. ನಂತರ 14 ನಿಮಿಷಗಳ ಕಾಲ ಕಪಾಲಭಾತಿ, ನಾಡಿಶೋಧನ ಪ್ರಾಣಯಾಮ, ಶೀಥಲೀ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಮೂಲಕ ಮೊದಲ ತಾಲೀಮನ್ನು ಪೂರ್ಣಗೊಳಿಸಿದರು.

ಇದೇ ವೇಳೆ ಮಾಜಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ಜೂನ್ 21 ರಂದು ಮೈಸೂರಿನ ರೇಸ್‍ಕೋರ್ಸ್‍ನಲ್ಲಿ ನಡೆಯುವ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಒಂದು ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನದ ಏರ್ಪಡಿಸುವ ಉದ್ದೇಶ ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ತಾಲೀಮು ನಡೆಸಲಾಗಿದೆ. ಎಲ್ಲಾ ಯೋಗ ಶಾಲೆಗಳು ಹಾಗೂ ಸಂಸ್ಥೆಗಳಿಗೆ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಇಂದು ನಡೆದ ಯೋಗ ತಾಲೀಮಿನಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಯೋಗಪಟುಗಳು ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದೆ. ಐದು ದೊಡ್ಡ ಯೋಗ ಸಂಸ್ಥೆಗಳ ಸಹಯೋಗದಿಂದ ಜೂ.21ರಂದು ಬೃಹತ್ ಯೋಗ ಪ್ರದರ್ಶನ ನಡೆಯುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬೃಹತ್ ಯೋಗ ಪ್ರದರ್ಶಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯೋಗ ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿಯೂ ಪಸರಿಸುತ್ತಿದೆ. ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಸುವ ಮೂಲಕ ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸ ನಡೆಯುತ್ತಿದೆ. ಯೋಗಾಭ್ಯಾಸ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗೆ ನಿವಾರಣೆಯಾಗುತ್ತದೆ. ಖಾಯಿಲೆಗಳು ಬಂದಾಗ ಮರುಗದೆ, ರೋಗ ಬರದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಜೂ. 21 ರಂದು ಯೋಗ ದಿನಾಚರಣೆ ಅಂಗವಾಗಿ ನಡೆಯುವ ಬೃಹತ್ ಯೋಗ ಪ್ರದರ್ಶನದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಆಯಷ್ ಇಲಾಖೆಯ ನಿರ್ದೇಶಕಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು, ನೆಹರು ಯುವ ಕೇಂದ್ರದ ಸಂಯೋಜಕ ಎಂ.ಎನ್.ನಟರಾಜ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹೆಚ್.ಪಿ.ಮಂಜುನಾಥ್, ಕಾಡಾ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್, ಹೊಟೇಲ್ ಮಾಲೀಕರ ಸಂಘದ ಕಾರ್ಯದರ್ಶಿ ಎ.ಸಿ.ರವಿ, ಎಸ್‍ಪಿವೈಎಸ್ ಮುಖ್ಯಸ್ಥ ಡಾ.ಮಾರುತಿ, ಜಿಎಸ್‍ಎಸ್ ಯೋಗಿಕ್ ಶ್ರೀಹರಿ, ರಂಗನಾಥ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಶಾಂತರಾಮು, ಮೈಸೂರು ಯೋಗ ಸ್ಪೋಟ್ರ್ಸ್ ಕ್ಲಬ್‍ನ ಮುಖ್ಯಸ್ಥರು ಡಾ.ಗಣೇಶ್ ಕುಮಾರ್, ಪತಂಜಲಿಯ ಸಂಸ್ಥೆಯ ರತ್ನರಾವ್, ಮಾಜಿ ಮೇಯರ್ ಆರ್.ಲಿಂಗಪ್ಪ, ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಮುಖಂಡರುಗಳಾದ ರಾಮು, ಪ್ರಿಯದರ್ಶಿನಿ ಪ್ರಕಾಶ್, ರಾಜಣ್ಣ, ಮಾಜಿ ಉಪಮೇಯರ್ ವಿ.ಶೈಲೇಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನೆರವು ನೀಡುವ ಭರವಸೆ

ಜೂ.21ರಂದು ಮೈಸೂರಿನ ರೇಸ್‍ಕೋರ್ಸ್‍ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ 50 ಲಕ್ಷ ರೂ. ವೆಚ್ಚವಾಲಿದ್ದು, 40 ಲಕ್ಷ ರೂ ನೀಡುವಂತೆ ಪ್ರವಾಸೋಧ್ಯಮ ಇಲಾಖೆ ಸಚಿವ ಸಾ.ರಾ.ಮಹೇಶ್ ಅವರಿಗೆ ಯೋಗ ಸಮಿತಿ ಮನವಿ ಮಾಡಿದೆ. ಇದಕ್ಕೆ ಸಚಿವ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಕೆಲವು ವ್ಯಕ್ತಿಗಳು ಆರ್ಥಿಕ ನೆರವು ನೀಡುವುದಕ್ಕೆ ಮುಂದೆ ಬಂದಿದ್ದಾರೆ. ಅಲ್ಲದೆ ಜೂ.21ರಂದು ಮುಂಜಾನೆಯೇ ಮೈಸೂರಿನ ವಿವಿಧೆಡೆಯಿಂದ ರೇಸ್‍ಕೋರ್ಸ್ ಬಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಪ್ರದರ್ಶನಕ್ಕೆ ಬರುವ ಯೋಗಪಟುಗಳಿಗೆ ಟಿಕೆಟ್(ಉಚಿತ) ನೀಡಬೇಕೋ, ಬೇಡವೋ ಎನ್ನುವುದನ್ನು ಸೋಮವಾರ ನಿರ್ಧರಿಸಲಾಗುತ್ತದೆ. ಟಿಕೆಟ್ ನೀಡಿದರೆ ಪಾಲ್ಗೊಂಡ ಯೋಗ ಪಟುಗಳ ಸಂಖ್ಯೆ ನಿಖರವಾಗಿ ದಾಖಲಿಸುವುದಕ್ಕೆ ನೆರವಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Translate »