ಸಾಮೂಹಿಕ ಯೋಗ ಮೂಲಕ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಜಾಗೃತಿ
ಮೈಸೂರು

ಸಾಮೂಹಿಕ ಯೋಗ ಮೂಲಕ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಜಾಗೃತಿ

March 22, 2021

ಮೈಸೂರು,ಮಾ.21(ಎಂಟಿವೈ)-ಮಾನವ ಕಳ್ಳ ಸಾಗಾಣಿಕೆ, ಮಕ್ಕಳು ಮತ್ತು ಮಹಿಳಾ ದೌರ್ಜನ್ಯ ವಿರುದ್ಧ ಜನ ಜಾಗೃತಿ ಮೂಡಿಸಲು ಮೈಸೂರು ಅರಮನೆ ಮುಂಭಾ ಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಭಾನುವಾರ ಒಡನಾಡಿ ಸಂಸ್ಥೆ ಆಯೋಜಿಸಿದ್ದ ಸಾಮೂ ಹಿಕ ಯೋಗ ಪ್ರದರ್ಶನದಲ್ಲಿ 120ಕ್ಕೂ ಹೆಚ್ಚು ಮಂದಿ ಯೋಗಪಟುಗಳು ಪಾಲ್ಗೊಂಡು ಗಮನ ಸೆಳೆದರು.

11ನೇ ವರ್ಷದ `ಯೋಗ ಸ್ಟಾಪ್ಸ್ ಟ್ರಾಫಿಕಿಂಗ್’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ ಯೋಗಪಟುಗಳು ಪಾಲ್ಗೊಂಡು ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಇನ್ನಿತರ ಯೋಗಾಸನದ ಭಂಗಿ ಪ್ರದರ್ಶಿಸಿದರು. ಸಂಸ್ಥೆಯ ಯೋಗಪಟುಗಳಾದ ನೇತ್ರಾವತಿ, ಪ್ರದೀಪ್ ಸೃಜನ್, ಪವಿತ್ರ, ಶೃತಿ, ಸ್ಮಷ್ನಾ, ವಿನೂತನ, ಅನುಷಾ ಸೇರಿದಂತೆ ಇನ್ನಿತರರು ಯೋಗ ಪಟುಗಳಿಗೆ ಆಸನದ ಬಗ್ಗೆ ಮಾಹಿತಿ ನೀಡಿದರೆ, ಕೆ.ಆರ್.ನಗರದ ಹಿರಿಯ ಯೋಗಪಟು ಮುದ್ದುಕೃಷ್ಣ ಕ್ಲಿಷ್ಟಕರ ಯೋಗಾಸನ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾದರು.

ಇದಕ್ಕೂ ಮುನ್ನ ಮೇಯರ್ ರುಕ್ಮೀಣಿ ಮಾದೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಪಿಡುಗಗಳಲ್ಲಿ ಒಂದಾಗಿರುವ ಮಾನವ ಕಳ್ಳ ಸಾಗಾಣಿಕೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಯೋಗ ವನ್ನು ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ. ಮೈಸೂರು ನಗರ ಈ ಬಾರಿಯೂ ದೇಶದ ನಂಬರ್ 1 ಸ್ವಚ್ಛ ನಗರಿ ಎಂಬ ಬಿರುದು ಪಡೆಯಲು, ಫೀಡ್‍ಬ್ಯಾಕ್ ನೀಡುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿ ದರು. ಮೈಸೂರು ಯೋಗ ಒಕ್ಕೂಟ ಅಧ್ಯಕ್ಷ ಬಿ.ಪಿ. ಮೂರ್ತಿ, ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ-ಪರಶು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »