ಎಲ್-ಜೆ v/s ಆಪ್ ಸರ್ಕಾರ: ತಕ್ಷಣ ಬಿಕ್ಕಟ್ಟು ಪರಿಹರಿಸಿ;  ಪ್ರಧಾನಿಗೆ ಬಿಜೆಪಿಯೇತರ ನಾಲ್ವರು ಸಿಎಂಗಳ ಒತ್ತಾಯ
ದೇಶ-ವಿದೇಶ

ಎಲ್-ಜೆ v/s ಆಪ್ ಸರ್ಕಾರ: ತಕ್ಷಣ ಬಿಕ್ಕಟ್ಟು ಪರಿಹರಿಸಿ;  ಪ್ರಧಾನಿಗೆ ಬಿಜೆಪಿಯೇತರ ನಾಲ್ವರು ಸಿಎಂಗಳ ಒತ್ತಾಯ

June 18, 2018

ನವದೆಹಲಿ:  ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಎಎಪಿ ಸರ್ಕಾರದ ನಡುವಿನ ಗುದ್ದಾಟ ಸರಿಪಡಿಸುವಂತೆ ಬಿಜೆಪಿಯೇತರ ನಾಲ್ವರು ಮುಖ್ಯಮಂತ್ರಿಗಳು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.

ಇದೊಂದು ಸಂವಿಧಾನಿಕ ಬಿಕ್ಕಟ್ಟು ಎಂದಿರುವ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು, ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಬಿಕ್ಕಟ್ಟು ಪರಿಹರಿಸುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಬೇಕು ಎಂದು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ.

ಆಂಧ್ರ, ಕರ್ನಾಟಕ, ಕೇರಳ ಸಿಎಂಗಳ ಜತೆ ನಾನು ಪ್ರಧಾನಿ ಭೇಟಿ ಮಾಡಿ, ತಕ್ಷಣವೇ ದೆಹಲಿ ಸರ್ಕಾರದ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿರುವುದಾಗಿ ಪ್ರಧಾನಿ ಭೇಟಿಯ ಬಳಿಕ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವ ಈ ನಾಲ್ವರು ಮುಖ್ಯಮಂತ್ರಿಗಳು ಲೆಫ್ಟಿನೆಂಟ್ ಗವರ್ನರ್ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಹೋರಾಟಕ್ಕೆ ಮತ್ತಷ್ಟು ಬಲ ದೊರೆತಂತಾಗಿದೆ.

ಕೇಜ್ರಿವಾಲ್ ನಿವಾಸಕ್ಕೆ ತೆರಳಿದ ನಾಲ್ವರು ಮುಖ್ಯಮಂತ್ರಿಗಳು ಕೇಜ್ರಿವಾಲ್ ಅವರ ಪತ್ನಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರಿಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ.

Translate »