ಮೈಸೂರಲ್ಲಿ ಪ್ರೊ.ಕೆ.ರಾಮದಾಸ್ ಸ್ಮರಣೆ ರಾಮರಾಜ್ಯ ಪರಿಕಲ್ಪನೆಯಿಂದ ದೇಶ ಕಟ್ಟಲು ಸಾಧ್ಯ ಹಿರಿಯ ರಂಗಕರ್ಮಿ ಪ್ರಸನ್ನ ಅಭಿಮತ
ಮೈಸೂರು

ಮೈಸೂರಲ್ಲಿ ಪ್ರೊ.ಕೆ.ರಾಮದಾಸ್ ಸ್ಮರಣೆ ರಾಮರಾಜ್ಯ ಪರಿಕಲ್ಪನೆಯಿಂದ ದೇಶ ಕಟ್ಟಲು ಸಾಧ್ಯ ಹಿರಿಯ ರಂಗಕರ್ಮಿ ಪ್ರಸನ್ನ ಅಭಿಮತ

June 18, 2018

ಮೈಸೂರು:  `ರಾಮರಾಜ್ಯ ಪರಿಕಲ್ಪನೆ’ಯಿಂದ ದೇಶದಲ್ಲಿ ಕೋಮು ಸೌಹಾರ್ದತೆ ನೆಲೆಸಲು ಹಾಗೂ ದೇಶ ಕಟ್ಟಲು ಸಾಧ್ಯವಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಸಂವಾದ, ಪುಸ್ತಕ ಬಿಡುಗಡೆ ಸಮಾರಂಭವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವಾದ, ಅಂಬೇಡ್ಕರ್ ವಾದ ಎಲ್ಲವನ್ನೂ ರಾಮಾಯಣದಲ್ಲಿ ನೋಡಲು ಸಾಧ್ಯವಿದೆ. ರಾಮಾಯಣ ಮಹಾಕಾವ್ಯ ರೂಪಕವಾಗಿದ್ದು ಈ ಹಿನ್ನೆಲೆಯಲ್ಲಿ ನಾವು ಅರ್ಥೈಸಿಕೊಳ್ಳುವುದರ ಆಧಾರದಲ್ಲಿ ಅದರ ಅರ್ಥ ಅಡಗಿರುತ್ತದೆ. ನಾವು ರಾಮಾಯಣವನ್ನು ತಪ್ಪಾಗಿ ನೋಡುತ್ತಿರುವಂತೆ ಅದನ್ನು ಸರಿಯಾಗಿಯೂ ನೋಡಲು ಸಾಧ್ಯವಿದೆ ಎಂದು ತಿಳಿಸಿದರು.

ವಾಲ್ಮೀಕಿ ರಾಮಾಯಣ ಒಬ್ಬ ಬೇಡ ಇನ್ನೊಬ್ಬ ಬೇಡನಿಗೆ ಬುದ್ಧಿವಾದ ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ಆ ಬಳಿಕ ವಿಶ್ವಾಮಿತ್ರ ಹಾಗೂ ರಾಮನ ಅಸಾಧಾರಣವಾದ ಭೂಮಿಕೆ ತೆರೆದುಕೊಳ್ಳುತ್ತದೆ. ಸಭ್ಯತೆಯ ನಿರ್ವಚನೆ ರಾಮಾಯಣದಲ್ಲಿದೆ. ಇದೇ ರಾಮಾಯಣದ ವಿಶೇಷ. ರಾಮ ಒಬ್ಬ ಆಡಳಿತಗಾರ, ರಾಜ-ರಾಜಕಾರಣಿ . ಒಬ್ಬ ರಾಜಕಾರಣಿ ಯಾವ ರೀತಿ ರಾಜಕಾರಣ ಮಾಡಬೇಕು. ನೈತಿಕ ರಾಜಕಾರಣ ಎಂದರೆ ಯಾವುದು ಎಂಬ ಅಂಶಗಳನ್ನು ಹೇಳುವ ಕೃತಿ ರಾಮಾಯಣ ಎಂದು ನುಡಿದರು.
ಯಂತ್ರವಾದಿ, ಮಂತ್ರವಾದಿಯಾದ ರಾವಣನ ಮೂಲಕ ರಾಮಾಯಣದಲ್ಲಿ ಯಂತ್ರ ನಾಗರಿಕತೆಯನ್ನು ಕಾಣಬಹುದಾಗಿದ್ದು, ಬೇರೆ ಮಹಾ ಗ್ರಂಥಗಳಲ್ಲಿ ಇದನ್ನು ಕಾಣಲಾಗದು. ಇಂತಹ ವಿಶಿಷ್ಟ ಮಹಾಕಾವ್ಯವನ್ನು ನಮ್ಮದಲ್ಲವೆಂದು ಹಿಂದುತ್ವ ವಾದಿಗಳ ಕೈಗೆ ಕೊಟ್ಟು ನಾವು ಕೂತಿದ್ದೇವೆ. ಅದೇ ರೀತಿ ಗಾಂಧೀಯವರನ್ನು ಸಹ ಯಾವ ರೀತಿ ನೋಡಬೇಕೊ ಆ ರೀತಿ ನೋಡುತ್ತಿಲ್ಲ. ಅವರ ಕೇಂದ್ರ ಪ್ರಜ್ಞೆ ಗ್ರಾಮಸ್ವರಾಜ್ಯವಾಗಿದ್ದು, ರಾಜಕಾರಣ ಮತ್ತು ರಚನಾತ್ಮಕ ಕಾರ್ಯಕ್ರಮ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋದವರು ಗಾಂಧಿ. ಆದರೆ ನಾವು ರಚನಾತ್ಮಕ ಕಾರ್ಯಕ್ರಮಗಳಿಗೆ ಒತ್ತು ನೀಡಿಲ್ಲ. ಎಲ್ಲವನ್ನೂ ಕಾನೂನು ಮಾಡುತ್ತದೆ ಎಂದು ಕೈಕಟ್ಟಿ ಕುಳಿತಿದ್ದೇವೆ. ಆದರೆ ಆರ್‍ಎಸ್‍ಎಸ್‍ನವರು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಜಕೀಯ ಶಕ್ತಿ ಪಡೆದುಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ತಿಳಿಸಿದರು.

ಮೋದಿ ಹಾದಿಯಾಗಿ ಉಗ್ರ ಹಿಂದುತ್ವ: ದೇಶದಲ್ಲಿರುವ ಕೋಮುವಾದದ ಹಿಂದೆ ದೊಡ್ಡ ಸಂಖ್ಯೆಯ ಪ್ರಜೆಗಳಿದ್ದಾರೆ. ಅನೇಕರು ಹಲವು ಕಾರಣಗಳಿಗೆ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಉಗ್ರ ಹಿಂದುತ್ವ ಹಾಗೂ ಮೃದು ಹಿಂದುತ್ವ ಎಂಬ ಎರಡು ವಿಧದಲ್ಲಿ ಇದನ್ನು ನೋಡುವ ಅಗತ್ಯವಿದ್ದು, ಉಗ್ರ ಹಿಂದುತ್ವವಾದ ನರೇಂದ್ರಮೋದಿ ಹಾದಿಯಾಗಿ ಸಂಘಟನೆಯಾಗುತ್ತಿದ್ದರೆ, ಮೃದು ಹಿಂದುತ್ವವು ಆರ್‍ಎಸ್‍ಎಸ್ ಮತ್ತು ಬಿಜೆಪಿಯೊಳಗೆ ಚದುರಿದಂತೆ ಗೊಂದಲದಲ್ಲಿ ನೆಲೆಸಿದೆ ಎಂದು ವಿಶ್ಲೇಷಿಸಿದರು.

ಮೃದು ಹಿಂದುತ್ವ ವಾದಿಗಳೊಂದಿಗೆ ಸಂವಾದ: ಹಿಂದುತ್ವ ವಿರೋಧಿಸಬೇಕು ಎಂದು ವಾದಿಸುವವರಲ್ಲಿ ಏಕೆ ವಿರೋಧಿಸಬೇಕೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ನಾವು ನಿಜಕ್ಕೂ ವಿರೋಧಿಸಬೇಕಿರುವುದು ಉಗ್ರ ಹಿಂದುತ್ವ ವಾದವನ್ನೇ ಹೊರತು ಮೃದು ಹಿಂದುತ್ವ ವಾದವನ್ನಲ್ಲ. ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ಮೃದು ಹಿಂದುತ್ವ ವಾದ ಉದಯಿಸಿದೆ. ನಮ್ಮ ಹಾಗೂ ಮೃದು ಹಿಂದುತ್ವ ವಾದಿಗಳ ನಡುವೆ ಸಂವಾದ ಏರ್ಪಡುವ ಅಗತ್ಯವಿದ್ದು, ಇದರಿಂದ ಇಬ್ಬರೂ ತಿದ್ದುಕೊಳ್ಳಬೇಕಾದ ಅಂಶಗಳು ಮನದಟ್ಟು ಆಗಲಿವೆ ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯ ಜನರಲ್ಲಿ ನಾವು ಧರ್ಮ ಹಾಗೂ ರಾಮನ ವಿರೋಧಿಗಳು ಎಂಬ ಭಾವನೆ ಮೂಡಿದ್ದು, ಇದಕ್ಕೆ ನಾವೇ ಕಾರಣಕರ್ತರೂ ಆಗಿದ್ದೇವೆ. ಹೀಗಾಗಿ ಇದನ್ನು ಸರಿಪಡಿಸಿಕೊಳ್ಳುವ ಅಗತ್ಯವಿದ್ದು, ಪ್ರಗತಿಪರರಲ್ಲಿ ಹಿಂದು ಧರ್ಮದ ಬಗೆಗೆ ಇರುವ ಭಾವನೆಯನ್ನು ಸರಿಪಡಿಸಿಕೊಳ್ಳುವ ಅಗತ್ಯತೆಯನ್ನು ಪ್ರೊ.ಕೆ.ರಾಮದಾಸ್ ಅವರಲ್ಲಿ ಪ್ರಸ್ತಾಪಿಸಿದ್ದೆ. ಆಗ ನನ್ನ ಪ್ರಸ್ತಾಪ ಸರಿಯಾಗಿದೆಂದು ಅವರು ಪ್ರತಿಕ್ರಿಯಿಸಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ಕೃಷ್ಣ ಜನಮನ ಅವರ `ಮತೀಯವಾದದ ನೆರಳಲ್ಲಿ ಪ್ರಜಾಪ್ರಭುತ್ವ’ ಕೃತಿಯನ್ನು ವನ್ಯಜೀವಿ ಛಾಯಾ ಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಬಿಡುಗಡೆಗೊಳಿಸಿದರು. `ಕೋಮುಸೌಹಾರ್ದತೆ ಇಂದು ಅತ್ಯಗತ್ಯ-ಹೇಗೆ? ಮತ್ತು ಯಾಕೆ?’ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ಚಿಂತಕಿ ವನಜ, ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಕಾರ್ಯದರ್ಶಿ ಕೃಷ್ಣ ಜನಮನ ಮತ್ತಿತರರು ಹಾಜರಿದ್ದರು.

ರಾಮರಾಜ್ಯ ಎಂದರೆ ಗ್ರಾಮ ಸ್ವರಾಜ್ಯ. ಉಗ್ರ ಹಿಂದುತ್ವ ವಾದಿಗಳು ರಾಮರಾಜ್ಯದ ಹೆಸರು ಹೇಳಿಕೊಂಡು ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಇನ್ನು ದೇಹದ ತಲೆಯನ್ನಷ್ಟೇ ಬಳಸುವ ಬುದ್ಧಿಜೀವಿಗಳು ಜೀವನದುದ್ದಕ್ಕೂ ಕೇವಲ ಮಾತನಾಡುತ್ತ ಕಾಲ ಕಳೆದರೆ ಇವರನ್ನು ಶ್ರಮಜೀವಿಗಳು ಹೇಗೆ ತಾನೆ ನಂಬುತ್ತಾರೆ. – ಪ್ರಸನ್ನ, ಹಿರಿಯ ರಂಗಕರ್ಮಿ.

Translate »