ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಮೈಸೂರು

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

June 18, 2018

ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂ ಸರ್ಕಾರಿ ಮಿಶ್ರಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು.

ಕಲಾವಿದ ಹೆಚ್.ವಿ.ಮುರಳೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಡತನದಿಂದಾಗಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಗುರುತಿಸಿ ಶಿಕ್ಷಣ ಕೊಡಿಸಿ ಮುಖ್ಯವಾಹಿನಿಗೆ ತರುವ ಅಗತ್ಯವಿದೆ ಎಂದು ಹೇಳಿದರು.
ಬಾಲಕಾರ್ಮಿಕರು ಎಂದರೆ ಯಾರು? ಇವರ ಶೋಷಣೆ ತಡೆಯುವುದು ಹೇಗೆ? ಎಲ್ಲಿಗೆ ದೂರು ನೀಡಬೇಕು? ಬಾಲಕಾರ್ಮಿಕ ನಿಷೇಧ ಕಾಯಿದೆ ಏನು ಹೇಳುತ್ತದೆ ಇತ್ಯಾದಿ ಕುರಿತು ವಿವರಿಸಿದ ಅವರು, ಬಾಲಕಾರ್ಮಿಕ ಪದ್ಧತಿಯಂತಹ ಅನಿಷ್ಟ ಪದ್ಧತಿಗೆ ಸಿಲುಕಿ ಮಕ್ಕಳು ತಮ್ಮ ಸುಂದರ ಬಾಲ್ಯವನ್ನು ಕಳೆದು ಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಓದಿ ವಿದ್ಯಾವಂತರಾಗಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ದೇಶಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕಾದ ಮಕ್ಕಳು ಇಂದು ಬಾಲ್ಯದಲ್ಲೇ ಬಾಲಕಾರ್ಮಿಕರಾಗಿ ದಾರಿ ತಪ್ಪುತ್ತಿದ್ದಾರೆ. ಹಾಗಾಗಿ ಪ್ರತಿವರ್ಷ ಸರ್ಕಾರ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸುವ ಮೂಲಕ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಬಾಲಕಾರ್ಮಿಕ ಪದ್ಧತಿ ಬಗ್ಗೆ ಮಕ್ಕಳು ಹಾಗೂ ಪೋಷಕರಲ್ಲಿ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಟಿ.ಎಸ್.ಮೋಹನ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಸಾಹಿತಿ ಬನ್ನೂರು ಕೆ.ರಾಜು, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಶಿಕ್ಷಕಿಯರಾದ ಹೆಚ್.ವಿ.ಚಂಪಶ್ರೀ, ಜೆ.ಡೈನಾ ಲೋಬೊ, ದೈಹಿಕ ಶಿಕ್ಷಕ ವೈ.ಕೆ.ನಾಗರಾಜು, ನಿವೃತ್ತ ಶಿಕ್ಷಕಿ ಕಾವೇರಿಯಮ್ಮ ಉಪಸ್ಥಿತರಿದ್ದರು.

Translate »