ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮ ಕುರಿತು ಮಕ್ಕಳಿಗೆ ಅರಿವು
ಮೈಸೂರು

ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮ ಕುರಿತು ಮಕ್ಕಳಿಗೆ ಅರಿವು

June 29, 2018

ಮೈಸೂರು: ಮೈಸೂರಿನ ಕೊಳಚೆ ಪ್ರದೇಶದ ಬೀದಿ ಬದಿ ಮಕ್ಕಳು, ಶಾಲೆ ಬಿಟ್ಟ ಮಕ್ಕಳು, ವಲಸೆ ಮಕ್ಕಳು ಹಾಗೂ ಬಾಲ ಕಾರ್ಮಿಕ ಮಕ್ಕಳು ಇಂದು ಮೈಸೂರಿನ ಬಾಲಭವನದಲ್ಲಿ ಒಟ್ಟಾಗಿ ಕೂಡಿ ತಮ್ಮದೇ ಲೋಕದಲ್ಲಿ ವಿಹರಿಸಿದರು. ಕೆಲವರು ಡ್ರಾಯಿಂಗ್ ಹಾಳೆಯಲ್ಲಿ ಚಿತ್ರಗಳನ್ನು ಬಿಡಿಸಿದರೆ, ಇನ್ನಷ್ಟು ಮಕ್ಕಳು ಆಟ, ಪಾಠ, ಹಾಡು, ನೃತ್ಯದಲ್ಲಿ ತನ್ಮಯತೆಯಿಂದ ಭಾಗವಹಿಸಿ ಸಂಭ್ರಮಿಸಿದರು.

ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‍ಎಲ್‍ಹೆಚ್‍ಪಿ) ಗುರುವಾರ ಮೈಸೂರಿನ ಬನ್ನಿಮಂಟಪದ ಬಾಲಭವನದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಮೈಸೂರಿನ ಬನ್ನಿಮಂಟಪ ಯಲ್ಲಮ್ಮ ಕಾಲೋನಿ, ಶಾಹೀನಗರದ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನೂ ನಡೆಸಲಾಯಿತು.

ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವ ಜೊತೆಗೆ ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಕ್ಕಳು ಬಣ್ಣದ ಪೆನ್ಸಿಲ್‍ಗಳಿಂದ ತಮಗಿಷ್ಟವಾದ ಚಿತ್ರಗಳನ್ನು ಬಿಡಿಸಿದರು. ವಿವಿಧ ಜಾನಪದ ಆಟಗಳನ್ನು ಆಡಿದರು. ತಮ್ಮದೇ ಧಾಟಿಯಲ್ಲಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಮಕ್ಕಳಿಗೆ ಶಾಲಾ ಬ್ಯಾಗ್‍ಗಳನ್ನು ವಿತರಿಸಿ ಶಾಲೆಗೆ ಕಡ್ಡಾಯವಾಗಿ ಹೋಗುವಂತೆ ತಿಳವಳಿಕೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಡಾ.ಕ್ರಿಸ್ಟಿಡಾ ಪೈಸ್ ಅವರು ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಔಷಧಿ, ಗುಳಿಗೆಗಳನ್ನು ನೀಡಿದರು.

ಇದಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರಾಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಉಂಟಾಗುವ ಯಾವುದೇ ಸಮಸ್ಯೆ, ತೊಂದರೆಗಳಿಗೆ ಮಕ್ಕಳ ಹಕ್ಕುಗಳ ಸಂರಕ್ಷಣೆ, ಮಕ್ಕಳ ಕಲ್ಯಾಣ ಸಮಿತಿ ಇನ್ನಿತರ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅಂತಹ ತೊಂದರೆಗಳ ಬಗ್ಗೆ ಸಹಾಯವಾಣ ಸಂಖ್ಯೆ 1098ಕ್ಕೆ ಉಚಿತ ಕರೆ ಮಾಡುವ ಮೂಲಕ ಮಕ್ಕಳನ್ನು ಸಂರಕ್ಷಿಸಬಹುದಾಗಿದೆ ಎಂದರು.

ಇದೇ ಸಂದಭದಲ್ಲಿ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಧನಂಜಯ, ದೇಶದ ಬಹುಮುಖ್ಯ ಪಿಡುಗಾಗಿರುವ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಬೇಕಾಗಿದೆ. ಅದಕ್ಕಾಗಿ ಮಕ್ಕಳು ಶಾಲೆಗೆ ತೆರಳಿ ಶಿಕ್ಷಣ ಪಡೆದುಕೊಳ್ಳಬೇಕು. ಇದರಿಂದ ಅನಕ್ಷರತೆ ದೂರವಾಗುವ ಜೊತೆಗೆ, ನಿರುದ್ಯೋಗ ಸಮಸ್ಯೆ, ಜನಸಂಖ್ಯಾ ಸ್ಫೋಟ, ಬಡತನ ನಿವಾರಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕುಡಿತ ಮತ್ತಿತರ ಚಟಗಳಿಗೆ ಹಣ ಹೊಂದಿಸುವ ಪೋಷಕರು ಮಕ್ಕಳ ಶಿಕ್ಷಣಕ್ಕೆ ಬಡತನದ ನೆಪವೊಡ್ಡಿ, ಮಕ್ಕಳನ್ನು ದುಡಿಯಲು ಕಳಿಸುತ್ತಿದ್ದಾರೆ. ಇದರಿಂದಾಗಿ ಇನ್ನೂ ಬಾಲಕಾರ್ಮಿಕ ಪದ್ಧತಿ ದೂರವಾಗಿಲ್ಲ. ಇದನ್ನು ಹೋಗಲಾಡಿಸಲು ಪೋಷಕರು, ಮಕ್ಕಳು, ಸಾರ್ವಜನಿಕರು ಮತ್ತು ಇಡೀ ಸಮಾಜ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಹೋರಾಡಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರ್‍ಎಲ್‍ಹೆಚ್‍ಪಿ ನಿರ್ದೇಶಕಿ ಸರಸ್ವತಿ ಮತ್ತು ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.

Translate »