ಪ್ಯಾನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್‍ಗೆ ಮಾರ್ಚ್ 31 ಡೆಡ್‍ಲೈನ್: ತಪ್ಪಿದರೆ 10 ಸಾವಿರ ರೂ. ದಂಡ..!
ಮೈಸೂರು

ಪ್ಯಾನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್‍ಗೆ ಮಾರ್ಚ್ 31 ಡೆಡ್‍ಲೈನ್: ತಪ್ಪಿದರೆ 10 ಸಾವಿರ ರೂ. ದಂಡ..!

March 3, 2020

ಹೊಸದಿಲ್ಲಿ, ಮಾ.2- ಮಾರ್ಚ್ 31ರ ಗಡುವಿನೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜತೆ ಜೋಡಣೆ ಮಾಡದೇ ಹೋದರೆ, ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಒಂದು ವೇಳೆ ನೀವು ನಿಷ್ಕ್ರಿಯ ಕಾರ್ಡ್ ಅನ್ನೇ ಬಳಸಿದರೆ 10,000 ರೂ. ದಂಡ ತೆರಬೇಕಾಗುತ್ತದೆ. ಪ್ಯಾನ್-ಆಧಾರ್ ಜೋಡಣೆ ಸಂಬಂಧ ಗಡುವುಗಳನ್ನು ವಿಸ್ತರಿಸುತ್ತಲೇ ಬಂದಿರುವ ಆದಾಯ ತೆರಿಗೆ ಇಲಾಖೆ, ಈಗ ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಮಾರ್ಚ್ 31ರೊಳಗೆ ಜೋಡಣೆ ಮಾಡದೇ ಹೋದರೆ, ನಿಮ್ಮ ಪ್ಯಾನ್ ಕಾರ್ಡ್ ಏಪ್ರಿಲ್ 1ರಿಂದ ನಿಷ್ಕ್ರಿಯವಾಗುತ್ತದೆ. ನಿಷ್ಕ್ರಿಯ ಪ್ಯಾನ್ ಅನ್ನೇ ಬಳಕೆ ಮಾಡಿದರೆ 10,000 ರೂ. ದಂಡ ವಿಧಿಸುವುದಾಗಿ ತೆರಿಗೆ ಇಲಾಖೆ ಹೇಳಿದೆ. ಯಾವುದೇ ವ್ಯವಹಾರಕ್ಕೆ ನಿಷ್ಕ್ರಿಯ ಪ್ಯಾನ್ ಅನ್ನು ಬಳಸಿರುವುದು ಕಂಡು ಬಂದರೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272ಬಿ ಅನ್ವಯ ದಂಡ ವಿಧಿಸಬಹುದಾಗಿದೆ. . https://www.incometaxindiaefiling.gov.in/home ಜಾಲತಾಣಕ್ಕೆ ತೆರಳಿ ಪ್ಯಾನ್ ಜೊತೆ ಆಧಾರ್ ಅನ್ನು ಸುಲಭವಾಗಿ ಲಿಂಕ್ ಮಾಡಬಹುದಾಗಿದೆ.

ಹೊಸ ಕಾರ್ಡ್ ಅಗತ್ಯವಿಲ್ಲ: ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್‍ಗಳು ಏಪ್ರಿಲ್ 1ರ ಬಳಿಕ ನಿಷ್ಕ್ರಿಯವಾಗುತ್ತವೆ. ಆ ಸಂದರ್ಭದಲ್ಲಿ ಹೊಸ ಪ್ಯಾನ್‍ಗೆ ಅರ್ಜಿ ಸಲ್ಲಿಸುವುದು ಸರಿಯಲ್ಲ. ಆಧಾರ್ ಜೊತೆ ಲಿಂಕ್ ಮಾಡಿದರೆ, ನಿಷ್ಕ್ರಿಯ ಪ್ಯಾನ್ ಕಾರ್ಡ್ ಸಕ್ರಿಯವಾಗುತ್ತದೆ.

ಪ್ಯಾನ್ ಉಳ್ಳವರೇ ಗಮನಿಸಿ: ಪ್ಯಾನ್ ಕಾರ್ಡ್ ಉಳ್ಳವರು ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ ಜೊತೆ ಜೋಡಣೆ ಮಾಡಬೇಕು. ಇಲ್ಲದೇ ಹೋದರೆ, ನಿಮ್ಮ ಪ್ಯಾನ್ ಕಾರ್ಡ್ ರದ್ದಾಗುತ್ತದೆ. ಬ್ಯಾಂಕ್ ವ್ಯವಹಾರ, ಹಣಕಾಸು ವಹಿವಾಟು, ಯಾವುದೇ ಆಸ್ತಿಯ ಮಾರಾಟ/ಖರೀದಿ, ಷೇರು ಮತ್ತು ಮ್ಯೂಚುವಲ್ ಫಂಡ್‍ನಲ್ಲಿ ಹೂಡಿಕೆ ಮತ್ತಿತರ ಸಂದರ್ಭಗಳಲ್ಲಿ ಪ್ಯಾನ್ ನೀಡಬೇಕು. ನಿಷ್ಕ್ರಿಯ ಪ್ಯಾನ್ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ತೆರಿಗೆ ಇಲಾಖೆಗೆ 10,000 ದಂಡ ತೆರಬೇಕಾಗುತ್ತದೆ.
U
Àಡುವು ಮೀರಿದರೆ ಏನು ಮಾಡಬೇಕು: ಏಪ್ರಿಲ್ 1ರಿಂದ ನಿಷ್ಕ್ರಿಯವಾಗುವ ಪ್ಯಾನ್‍ಗಳನ್ನು ಯಾವುದೇ ಹಣಕಾಸು ವ್ಯವಹಾರಕ್ಕೆ ಬಳಸಬಾರದು. ಏಪ್ರಿಲ್ 1ರ ಬಳಿಕವೂ ಆಧಾರ್ ಜೊತೆ ಲಿಂಕ್ ಮಾಡಲು ಅವಕಾಶವಿದೆ. ನೀವು ಲಿಂಕ್ ಮಾಡಿದ ತಕ್ಷಣ ನಿಷ್ಕ್ರಿಯವಾಗಿದ್ದ ಪ್ಯಾನ್, ಬಳಕೆಗೆ ಯೋಗ್ಯವಾಗುತ್ತದೆ.

ಐಡಿ ಪ್ರೂಫ್ ಆಗಿ ಬಳಸಬಹುದೇ..: ನಿಷ್ಕ್ರಿಯ ಪ್ಯಾನ್ ಅನ್ನು ವ್ಯಕ್ತಿಯು ತನ್ನ ಗುರುತು ದೃಢೀಕರಣದ (ಐಡಿ ಪ್ರೂಫ್) ಸಲುವಾಗಿ ಬಳಸಿದರೆ, 10,000 ರೂ. ದಂಡವು ಅನ್ವಯವಾಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯಲು ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಳಸಿದರೆ ದಂಡ ಹಾಕೋದಿಲ್ಲ. ನಿಷ್ಕ್ರಿಯ ಪ್ಯಾನ್ ಮೂಲಕ ಬ್ಯಾಂಕ್ ಖಾತೆ ತೆರೆಯಬಹುದಾದರೂ, ಬ್ಯಾಂಕಿಂಗ್ ವ್ಯವಹಾರ ನಡೆಸೋದಕ್ಕೆ ಸಕ್ರಿಯವಾದ ಪ್ಯಾನ್ ಕಾರ್ಡ್ ಬೇಕೇ ಬೇಕು. 50,000 ರೂ.ಗೂ ಅಧಿಕ ಮೊತ್ತವನ್ನು ಠೇವಣಿ ಇಡಲು ಅಥವಾ ಹಿಂಪಡೆಯಲು ಪ್ಯಾನ್ ಅಗತ್ಯ. ಇಂಥ ಸಮಯದಲ್ಲಿ ನಿಷ್ಕ್ರಿಯ ಪ್ಯಾನ್ ಬಳಕೆಯಾದರೆ ದಂಡ ತಪ್ಪದು.

Translate »