ಮೈಸೂರು, ಮಾ.2(ಎಸ್‍ಬಿಡಿ)- ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತ(ಹಾರ್ಡಿಂಜ್ ಸರ್ಕಲ್)ದಲ್ಲಿ ಸಿಟಿ ಬಸ್ ನಿಲುಗಡೆಗೆ ವಿಧಿಸಲಾಗಿದ್ದ ನಿರ್ಬಂಧ ತೆರವಾಗಿದ್ದು, ಸೋಮವಾರ ಸಂಜೆಯಿಂದ ಯಥಾಸ್ಥಿತಿ ಮುಂದುವರೆದಿದೆ.
ವಿವಿಧ ಮಾರ್ಗಗಳಿಂದ ಬಸವೇಶ್ವರ ವೃತ್ತ(ಪಾಠಶಾಲೆ ಸಿಗ್ನಲ್), ಬಿಎನ್ ರಸ್ತೆ ಮೂಲಕ ಸಿಟಿ ಬಸ್ ನಿಲ್ದಾಣಕ್ಕೆ ಸಾಗುತ್ತಿದ್ದ ಬಸ್‍ಗಳು ಹಾರ್ಡಿಂಜ್ ವೃತ್ತದ ಬಳಿ ನಿಲುಗಡೆ ನೀಡುತ್ತವೆ. ಆದರೆ ಇದರಿಂದ ವಾಹನ ಸಂಚಾರ ಅಡ್ಡಿ ಹಾಗೂ ಪಾದಚಾರಿ ಗಳಿಗೆ ರಸ್ತೆ ದಾಟುವುದಕ್ಕೆ ಅಡ್ಡಿಯಾಗುವುದಲ್ಲದೆ, ಅಪಘಾತಕ್ಕೂ ಆಸ್ಪದವಾಗುತ್ತಿದೆ ಎಂಬ ಕಾರಣದಿಂದ ಕಳೆದ ಶನಿವಾರದಿಂದ ಬಸ್ ನಿಲುಗಡೆಯನ್ನು ನಿರ್ಬಂಧಿಸಿದ್ದರು. ಅಲ್ಲದೆ ಬ್ಯಾರಿಕೇಡ್ ಅಳವಡಿಸಿ, ಯಾವುದೇ ವಾಹನ ನಿಲ್ಲಿಸದಂತೆ ಎಚ್ಚರ ವಹಿಸಿದ್ದರು.
ಒಂದು ವೇಳೆ ನಿಯಮ ಮೀರಿ, ಬಸ್ ನಿಲುಗಡೆ ನೀಡಿದರೆ ದಂಡ ವಿಧಿಸುವುದಾಗಿ ಪೊಲೀಸರು ಎಚ್ಚರಿಸಿದ್ದರು. ಪರಿಣಾಮ ಕಳೆದೆರಡು ದಿನಗಳಿಂದ ಹಾರ್ಡಿಂಜ್ ವೃತ್ತದಲ್ಲಿ ನಿಲುಗಡೆ ನೀಡುತ್ತಿರಲಿಲ್ಲ. ಬಸ್‍ಗಳಲ್ಲಿ ನೋಟಿಸ್ ಅಂಟಿಸಿ, ಈ ಬಗ್ಗೆ ಪ್ರಯಾಣಿಕರ ಗಮನಕ್ಕೂ ತರಲಾಗಿತ್ತು. ಆದರೂ ನಂಜನಗೂಡು, ತಿ.ನರಸೀಪುರ, ಕೊಳ್ಳೆಗಾಲ, ಚಾಮರಾಜನಗರ ಸೇರಿದಂತೆ ಗ್ರಾಮಾಂತರ ಪ್ರದೇಶಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ. ವೃದ್ಧರು, ವಿಕಲಾಂಗಚೇತನರು, ಮಕ್ಕಳಿಗೆ ಸಿಟಿ ಬಸ್ ನಿಲ್ದಾಣದಿಂದ ವಾಪಸ್ ನಡೆದು ಬರುವುದಕ್ಕೆ ಕಷ್ಟವಾಗುತ್ತದೆ. ಆಟೋದಲ್ಲಿ ಬರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾರ್ಡಿಂಜ್ ವೃತ್ತದಲ್ಲಿ ನಿಲುಗಡೆ ನೀಡುವುದರಿಂದ ಅನುಕೂಲವಾಗುತ್ತದೆ ಎಂದು ಜನ ಒತ್ತಡ ಹೇರುತ್ತಿದ್ದರು. ಪೊಲೀಸರಿಗೂ ಈ ಬಗ್ಗೆ ಮನವಿ ಮಾಡಿದ್ದರು. ಹಾಗಾಗಿ ಸೋಮವಾರ ಸಂಜೆಯಿಂದ ಪೊಲೀಸರು ನಿರ್ಬಂಧ ತೆರವುಗೊಳಿಸಿದ್ದಾರೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.