ಮಾರುಕಟ್ಟೆಗಳ ಬಂದ್: ರಸ್ತೆಬದಿ ತರಕಾರಿ ಮಾರಾಟ
ಮೈಸೂರು

ಮಾರುಕಟ್ಟೆಗಳ ಬಂದ್: ರಸ್ತೆಬದಿ ತರಕಾರಿ ಮಾರಾಟ

May 4, 2021

ಮೈಸೂರು, ಮೇ 3(ಎಂಟಿವೈ)- ಜನಜಂಗುಳಿ ಹೆಚ್ಚಾಗಿ ಕೊರೊನಾ ಸೋಂಕು ಹರಡುವಿಕೆ ಆತಂಕದಿಂದ ಸರ್ಕಾರದ ಆದೇಶದ ಮೇರೆಗೆ ಮೈಸೂರಿನ ದೇವರಾಜ, ವಾಣಿವಿಲಾಸ, ಮಂಡಿ ಹಾಗೂ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿ ಗಳು ರಸ್ತೆ ಬದಿಯಲ್ಲಿ ವಹಿವಾಟು ನಡೆಸಿದರು.

ದೇವರಾಜ, ಮಂಡಿ, ವಾಣಿವಿಲಾಸ ಹಾಗೂ ಎಂ.ಜಿ.ರಸ್ತೆಯ ಮಾರುಕಟ್ಟೆಯನ್ನು ಭಾನುವಾರದಿಂದಲೇ ಮುಚ್ಚಿಸಲಾಗಿದ್ದರಿಂದ, ಅಲ್ಲಿನ ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಾಲ್ಕು ಮಾರುಕಟ್ಟೆಗಳಲ್ಲೂ ಇಂದು ಮುಂಜಾನೆಯಿಂದ ವ್ಯಾಪಾರಿಗಳು ವ್ಯಾಪಾರ ಮಾಡಲು ಮುಂದಾಗದೆ, ವಿವಿಧ ರಸ್ತೆ ಬದಿಯಲ್ಲೇ ವಹಿವಾಟು ನಡೆಸಿದರು. ಮಾರುಕಟ್ಟೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದ ತರಕಾರಿ, ಸೊಪ್ಪು, ಹಣ್ಣನ್ನು ರಸ್ತೆ ಬದಿಯಲ್ಲಿ ಗುಡ್ಡೆ ಹಾಕಿಕೊಂಡು ಮಾರಾಟ ಮಾಡಿದರು. ದೇವರಾಜ ಮಾರುಕಟ್ಟೆ ವ್ಯಾಪಾರಿಗಳು ಸಯ್ಯಾಜಿರಾವ್ ರಸ್ತೆ ಬದಿಯಲ್ಲೇ ಹೂವು, ತರಕಾರಿ ವ್ಯಾಪಾರ ಮಾಡಿದರು. ಅಗ್ರಹಾರ ವೃತ್ತ, ಆರ್‍ಎಂಸಿ ವೃತ್ತ, ಟೆರೆಷಿಯನ್ ಕಾಲೇಜು ವೃತ್ತ, ಸಿದ್ಧಾರ್ಥ ಬಡಾವಣೆ, ರಾಮಕೃಷ್ಣನಗರ, ಕುವೆಂಪುನರ, ಟಿ.ಕೆ.ಲೇಔಟ್ ಸೇರಿದಂತೆ ವಿವಿಧೆಡೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿದರು.

ಅಂಗಡಿಗಳಲ್ಲಿ: ಮೈಸೂರಿನ ಸಂತೇಪೇಟೆ, ಚಿಕ್ಕಗಡಿಯಾರ ವೃತ್ತದ ಸುತ್ತಮುತ್ತ ಇರುವ ಪ್ರದೇಶದಲ್ಲಿರುವ ಅಂಗಡಿ ಹೊರತು ಪಡಿಸಿದರೆ, ಉಳಿದೆಲ್ಲೆಡೆ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಇದರಿಂದ ಜನರು ನೂಕುನುಗ್ಗಲಿನಲ್ಲಿ ಮೇಲೆ ಬೀಳದೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿದರು. ಕೆಲವು ಬಡಾವಣೆಗಳಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಬೆಳಗ್ಗೆ 10 ನಂತರ ತೆಗೆದಿದ್ದ ಅಂಗಡಿಗಳ ಬಾಗಿಲು ಮುಚ್ಚಿಸುವ ಪ್ರಯತ್ನ ಮಾಡಿದರು. ಆದರೆ ವರ್ತಕರು ಮಧ್ಯಾಹ್ನ 12 ಗಂಟೆವರೆಗೂ ಕಿರಾಣಿ ಅಂಗಡಿಗಳಿಗೆ ಅವಕಾಶ ನೀಡಿರುವ ಕುರಿತು ಮನವರಿಕೆ ಮಾಡಿಕೊಟ್ಟರು. ನಂತರ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರು.

Translate »