ಕೊರೊನಾ ಕಷ್ಟದಲ್ಲೂ ನೈರುತ್ಯ ರೈಲ್ವೆ  ಸರಕು ಸಾಗಣೆ ಆದಾಯ ಶೇ.903 ಹೆಚ್ಚಳ
ಮೈಸೂರು

ಕೊರೊನಾ ಕಷ್ಟದಲ್ಲೂ ನೈರುತ್ಯ ರೈಲ್ವೆ ಸರಕು ಸಾಗಣೆ ಆದಾಯ ಶೇ.903 ಹೆಚ್ಚಳ

May 4, 2021

ಮೈಸೂರು, ಮೇ 3(ಎಂಕೆ)- ಕೊರೊನಾ ಸಂಕಷ್ಟದಲ್ಲಿಯೂ ಮೈಸೂರು ನೈರುತ್ಯ ರೈಲ್ವೆ ವಿಭಾಗ ದಾಖಲೆ ಪ್ರಮಾಣದಲ್ಲಿ ಸರಕು ಸಾಗಣೆ ಮಾಡಿ ಆದಾಯದಲ್ಲಿ ಶೇ.903 ರಷ್ಟು ಹೆಚ್ಚಳ ಕಂಡಿದೆ.

ಮೈಸೂರು ನೈರುತ್ಯ ರೈಲ್ವೆ ವಿಭಾಗವೂ ದೇಶದ ವಿವಿಧ ಭಾಗಗಳಿಗೆ ಅಗತ್ಯ ಸರಕು ಸಾಗಣೆ ಮಾಡುತ್ತಿದೆ. 2020ರ ಏಪ್ರಿಲ್‍ನಲ್ಲಿ 0.094 ಮಿಲಿಯನ್ ಟನ್ ಸರಕು ಸಾಗಿಸಿದ್ದರೆ, ಈ ವರ್ಷದ ಏಪ್ರಿಲ್‍ನಲ್ಲಿ 0.703 ಮಿಲಿಯನ್ ಟನ್ ಸಾಗಣೆ ಮಾಡಿದೆ.

ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸರಕು ಸಾಗಣೆಯಿಂದ 5.90 ಕೋಟಿ ರೂ. ಆದಾಯವಾಗಿದ್ದರೆ, ಈ ಬಾರಿ ಬರೋಬ್ಬರಿ 59.21 ಕೋಟಿ ರೂ., ಸಂಗ್ರಹಿಸಿ ದಾಖಲೆ ಮಾಡಲಾಗಿದೆ. ಪಾರ್ಸೆಲ್ ಆದಾಯದಲ್ಲಿಯೂ ಕಳೆದ ವರ್ಷ 0.03(3 ಲಕ್ಷ) ಕೋಟಿ ರೂ., ಇದ್ದದ್ದು, ಈ ಬಾರಿ 0.47(47 ಲಕ್ಷ) ಕೋಟಿ ರೂ.ಗೆ ಏರಿಕೆಯಾಗಿದೆ. ಸರಕು ಸಾಗಣೆಯಲ್ಲಿ ಶೇ.648 ಹಾಗೂ ಆದಾಯದಲ್ಲಿ ಶೇ.903ರಷ್ಟು ಏರಿಕೆಯಾಗಿದೆ. ಮೈಸೂರು ವಿಭಾಗ ಕಬ್ಬಿಣದ ಅದಿರು, ಪೆಟ್ರೋಲಿಯಂ ಉತ್ಪನ್ನಗಳು, ಸಿಮೆಂಟ್, ಮೆಕ್ಕೆಜೋಳ, ಆಹಾರ ಧಾನ್ಯ ಮತ್ತಿತರ ಸರಕುಗಳನ್ನು ಮೈಸೂರು, ನಂಜನಗೂಡು, ರಾಣೆಬೆನ್ನೂರು, ಅಮರಾವತಿ, ಅಮ್ಮಸಂದ್ರ ಮುಂತಾದ ಭಾಗಗಳಿಂದ ಸಾಗಿಸುತ್ತಿದೆ. ಕೋವಿಡ್-19ರ ಕಷ್ಟಕಾಲದಲ್ಲಿ ಮೈಸೂರು ವಿಭಾಗದ ರೈಲ್ವೆ ಸಿಬ್ಬಂದಿ ಗುರಿ ಮೀರಿ ಸೇವೆ ಸಲ್ಲಿಸಿದ್ದಾರೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‍ವಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »