ಕೊರೊನಾ ಹಾಟ್‍ಸ್ಪಾಟ್‍ಗಳಾಗುತ್ತಿವೆ ಸಬ್‍ರಿಜಿಸ್ಟ್ರಾರ್ ಕಚೇರಿಗಳು
ಮೈಸೂರು

ಕೊರೊನಾ ಹಾಟ್‍ಸ್ಪಾಟ್‍ಗಳಾಗುತ್ತಿವೆ ಸಬ್‍ರಿಜಿಸ್ಟ್ರಾರ್ ಕಚೇರಿಗಳು

May 4, 2021
  • ಮೈಸೂರು ನಗರದ 5 ಸೇರಿ ಜಿಲ್ಲೆಯ 14 ಕಚೇರಿಗಳಿಗೆ ನಿತ್ಯ ಸರಾಸರಿ 7,000 ಮಂದಿ ಭೇಟಿ 
  • ಮೈಸೂರಿನ ಉತ್ತರ ಉಪನೋಂದಣಾಧಿಕಾರಿ ಕಚೇರಿವೊಂದರಲ್ಲೇ ಎಂಟು ಸಿಬ್ಬಂದಿಗೆ ಕೊರೊನಾ ಸೋಂಕು ದೃಢ 
  • ಫೋಟೋಗಾಗಿ ಮಾಸ್ಕ್ ತೆಗೆಯಲೇಬೇಕು, ಥಂಬ್ ಇಂಪ್ರೆಷನ್, ಡಾಕ್ಯುಮೆಂಟೇಷನ್ ಮಾಡುವಾಗ ಸೋಂಕು ಹರಡುವ ಸಾಧ್ಯತೆ
    ಎಸ್.ಟಿ.ರವಿಕುಮಾರ್

ಮೈಸೂರು, ಮೇ 3- ಇಡೀ ವಿಶ್ವವನ್ನೇ ತಲ್ಲಣ ಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರಗಳು ಲಾಕ್‍ಡೌನ್, ಕಫ್ರ್ಯೂಗಳಂತಹ ಅಸ್ತ್ರಗಳನ್ನು ಬಳಸುತ್ತಿವೆ.

ಡೆಡ್ಲಿ ಕೊರೊನಾ ಮಣಿಸಲು ಕರ್ನಾಟಕದಲ್ಲಿ 14 ದಿನಗಳ ಕೊರೊನಾ ಕಫ್ರ್ಯೂ ವಿಧಿಸಿ ಜನರ ಓಡಾಟಕ್ಕೆ ನಿರ್ಬಂಧ ಹಾಕಲಾಗಿದೆ. ಹೆಚ್ಚು ಜನ ಸೇರುವ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನಿಯಮ ಪಾಲಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಿನಕ್ಕೆ ಸರಾಸರಿ (ಕಫ್ರ್ಯೂ ಸಂದರ್ಭವಾದ್ದರಿಂದ) 30ರಿಂದ 40 ಆಸ್ತಿ ನೋಂದಣಿಯಾಗುತ್ತಿವೆ. ಒಂದು ನೋಂದ ಣಿಗೆ 10ರಿಂದ 15 ಮಂದಿ ಹಾಜರಿರಬೇಕು. ಅವರ ಜೊತೆಗೆ ಕಚೇರಿಯಲ್ಲಿ 15ರಿಂದ 20 ಮಂದಿ ಸಿಬ್ಬಂದಿ ಬೇರೆ. ಕೇವಲ ಭೂಮಿ, ನಿವೇಶನ, ಕಟ್ಟಡ ಕ್ರಯ ನೋಂದಣಿಯಷ್ಟೇ ಅಲ್ಲದೇ, ಎನ್‍ಕಂಬರನ್ಸ್ ಸರ್ಟಿಫಿಕೇಟ್ (ಇಅ), ನೋಂದಣಿಯ ಸರ್ಟಿಫೈಡ್ ಕಾಪಿ, ವಿವಾಹ ನೋಂದಣಿಯಂತಹ ಸೇವೆಯನ್ನೂ ಒದಗಿಸುವುದರಿಂದ ಸಹಜವಾಗಿಯೇ ಅಲ್ಲಿಗೆ ಹೆಚ್ಚು ಜನರು ಭೇಟಿ ನೀಡುತ್ತಾರೆ. ಜೊತೆಗೆ ಸ್ಟ್ಯಾಂಪ್ ಡ್ಯೂಟಿ, ನೋಂದಣಿಗೆ ಬೇಕಾದ ದಾಖಲೆಗಳು ಮತ್ತಿತರ ವಿಷಯಗಳ ಬಗ್ಗೆ ವಿಚಾರಿಸಲೆಂದು ಒಂದಿಷ್ಟು ಜನ ಬರುತ್ತಾರೆ.

ಒಂದು ಉಪ ನೋಂದಣಾಧಿಕಾರಿ ಕಚೇರಿಗೆ ಒಂದು ದಿನಕ್ಕೆ ಕನಿಷ್ಠ 500 ಮಂದಿ ಭೇಟಿ ನೀಡಿದರೂ, ಮೈಸೂರಿನ ಐದು ಸೇರಿ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ 14 ಉಪನೋಂದಣಾಧಿಕಾರಿ ಕಚೇರಿಗಳಿಗೆ ಸರಿ ಸುಮಾರು 7000 ಮಂದಿ ಸಾರ್ವಜನಿಕರು ಭೇಟಿ ನೀಡಿದಂತಾಗುತ್ತದೆ.

ಆಸ್ತಿ ನೋಂದಣಿ ಮಾಡಬೇಕೆಂದರೆ ಕೊಳ್ಳುವ, ಮಾರುವವರ ಹಾಗೂ ವಾರಸುದಾರರ ಭಾವಚಿತ್ರ ತೆಗೆಯಬೇಕು, ಆ ವೇಳೆ ಮಾಸ್ಕ್ ಅನ್ನು ಕಳಚಲೇ ಬೇಕು. ದಾಖಲಾತಿಗಳಿಗೆ ಥಂಬ್ ಇಂಪ್ರೆಷನ್ ಹಾಕಿಸಲೇಬೇಕು. ಅಂತಹ ಸಂದರ್ಭದಲ್ಲಿ ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೊರೊನಾ ಸೋಂಕು ಹರಡುವುದನ್ನು ತಡೆಯಲಾಗದು.

ಮೈಸೂರಿನ ಮಿನಿ ವಿಧಾನಸೌಧದಲ್ಲಿರುವ ಉತ್ತರ ಸಬ್‍ರಿಜಿಸ್ಟ್ರಾರ್ ಕಚೇರಿಯೊಂದರಲ್ಲೇ 8 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದ ಹಲವು ಕಚೇರಿಗಳಲ್ಲೂ ಸಿಬ್ಬಂದಿಗೆ ಸೋಂಕು ತಗುಲು ತ್ತಿರುವುದು ಈಗ ಆತಂಕ ಹೆಚ್ಚಿಸಿದೆ.

ಇತ್ತೀಚೆಗೆ ಸಬ್‍ರಿಜಿಸ್ಟ್ರಾರ್ ಕಚೇರಿಗಳು ಕೊರೊನಾ ಸೋಂಕು ಹರಡುವ ಹಾಟ್‍ಸ್ಪಾಟ್‍ಗಳಾಗಿ ಪರಿವರ್ತನೆ ಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದು ವರಿದಲ್ಲಿ ಭಾರೀ ಅಪಾಯ ಸಂಭವಿಸುವ ಸಾಧ್ಯತೆ ಯನ್ನು ತಳ್ಳಿಹಾಕುವಂತಿಲ್ಲ.
ಕೊರೊನಾ ನಡುವೆಯೂ ಆಸ್ತಿಗಳ ಕ್ರಯ ನೋಂದಣಿಗೆ ಬೇಡಿಕೆ ಕಡಿಮೆಯಾಗದಿರುವುದರಿಂದ ಉಪನೋಂದ ಣಾಧಿಕಾರಿಗಳ ಕೋರಿಕೆ ಮೇರೆಗೆ ಜನರನ್ನು ನಿಯಂ ತ್ರಿಸಿ ಸಾಮಾಜಿಕ ಅಂತರ ಕಾಪಾಡಲು ಇದೀಗ ಪ್ರತೀ ಕಚೇರಿಗೆ ಒಬ್ಬೊಬ್ಬ ಹೋಂಗಾರ್ಡ್ ಒದಗಿಸಲಾಗಿದೆ.

ಮೈಸೂರು ನಗರದ ಡಾ.ರಾಜ್‍ಕುಮಾರ್ ರಸ್ತೆಯ ಪೂರ್ವ, ವಿಜಯನಗರ ವಾಟರ್ ಟ್ಯಾಂಕ್ ಬಳಿಯ ಪಶ್ಚಿಮ, ರಾಮಕೃಷ್ಣನಗರದ ದಕ್ಷಿಣ, ನಜರ್ ಬಾದ್‍ನ ಮಿನಿ ವಿಧಾನಸೌಧದ ಉತ್ತರ ಹಾಗೂ ಮುಡಾ ಕಚೇರಿ ಉಪನೋಂದಣಾಧಿಕಾರಿ ಕಚೇರಿ ಗಳು, ತಿ.ನರಸೀಪುರ, ಬನ್ನೂರು, ನಂಜನಗೂಡು, ಹೆಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ, ಬೆಟ್ಟದಪುರ, ಕೆ.ಆರ್.ನಗರ ಹಾಗೂ ಮಿರ್ಲೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲೂ ಜನಸಂದಣಿ ಹೆಚ್ಚಾಗಿದ್ದು, ನಿತ್ಯ ಆತಂಕದಲ್ಲೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕಾಗಿದೆ.

ಜನರನ್ನು ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿ ಕೊಂಡು ನೆಗೆಟಿವ್ ರಿಪೋರ್ಟ್ ತರಬೇಕೆಂಬ ಕಡ್ಡಾಯವಿಲ್ಲ. ಒಂದು ವೇಳೆ ಸಿಬ್ಬಂದಿಗೆ ಪಾಸಿಟಿವ್ ಬಂದರೂ ಕೇವಲ ಒಂದು ದಿನ ಮಾತ್ರ ಕಚೇರಿ ಸೀಲ್‍ಡೌನ್ ಮಾಡಲು ಅವಕಾಶವಿದೆ. ಸ್ಯಾನಿಟೈಸ್ ಮಾಡಿಸಿ ಮರುದಿನ ಕೆಲಸ ಮಾಡಲೇಬೇಕೆಂದು ಸರ್ಕಾರ ನಿರ್ದೇಶನ ನೀಡಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.

Translate »