ಪೌರಕಾರ್ಮಿಕರಿಗೆ ಶಾಸಕರಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮೈಸೂರು

ಪೌರಕಾರ್ಮಿಕರಿಗೆ ಶಾಸಕರಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ

March 22, 2020

ಮೈಸೂರು,ಮಾ.21(ಎಂಟಿವೈ)- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಶಾಸಕ ಎಸ್.ಎ.ರಾಮದಾಸ್ ಮೈಸೂರಿನ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕೃಷ್ಣರಾಜ ಕ್ಷೇತ್ರ ಬಿಜೆಪಿ ಘಟಕ ಹಾಗೂ `ಲೆಟ್ಸ್ ಡು ಇಟ್’ ಸಂಸ್ಥೆ ಸಹ ಯೋಗದಲ್ಲಿ ನಗರ ಪಾಲಿಕೆಯ 49 ಮತ್ತು 50 ಹಾಗೂ 51ನೇ ವಾರ್ಡ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಶನಿವಾರ ಬೆಳಿಗ್ಗೆ ಪುನರ್ ಬಳಕೆ ಮಾಡುವ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿ ದರು. ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಮತ್ತೆ ಮತ್ತೆ ಬಳಸಬಹುದಾದ ಮಾಸ್ಕ್ ಮತ್ತು ಕೈಸ್ವಚ್ಛತೆ ಕಾಪಾಡಿಕೊಳ್ಳಲು ಸ್ಯಾನಿಟೈಸರ್ ನೀಡಲಾಗಿದೆ ಎಂದರು.

ಸ್ವಚ್ಛತಾ ಕೆಲಸ ಮುಗಿಸಿ ಮನೆಗೆ ಹೋದ ನಂತರ ಸೋಪಿನಿಂದ ಕೈ ಕಾಲು ತೊಳೆದುಕೊಂಡ ಬಳಿಕವಷ್ಟೇ ಊಟ, ತಿಂಡಿ ಮಾಡಿ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿಣ, ಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಿ ಎಂದು ಕಿವಿಮಾತು ಹೇಳಿದರು.

ಕೊರೊನಾ ತಡೆಗಾಗಿ ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ದೇಶಾದ್ಯಂತ `ಜನತಾ ಕಫ್ರ್ಯೂ’ ನಡೆಸಲು ಪ್ರಧಾನಿ ಮೋದಿ ಕರೆ ನೀಡಿದ್ದು, ಎಲ್ಲರೂ ಕೈ ಜೋಡಿಸ ಬೇಕು. ಮನೆಯಿಂದ ಹೊರಬರದಂತೆ ದೃಢಸಂಕಲ್ಪ ಮಾಡಬೇಕು. ನಗರದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ನೀಡುವ ಮೂಲಕ `ಜನತಾ ಕಫ್ರ್ಯೂ ಮೈಸೂರು’ ಎಂಬ ಸಂದೇಶ ರವಾನಿಸಬೇಕು ಎಂದು ಉತ್ತೇಜಿಸಿದರು.

ಕಫ್ರ್ಯೂ ವೇಳೆ ಮನೆಯ ಹಿರಿಯ ನಾಗರಿಕರಿಗೆ ಏನಾ ದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಅಗತ್ಯ ಔಷಧಿ ಸರಬರಾಜು ಮಾಡಲು ನಗರದಲ್ಲಿ ಬಿಜೆಪಿಯಿಂದ ಕಾರ್ಯ ಪಡೆ ರಚಿಸಲಾಗಿದೆ. ಕೆ.ಆರ್.ಕ್ಷೇತ್ರದಲ್ಲಿ ಸೇವೆ ಪಡೆದು ಕೊಳ್ಳಲು ಸುಧೀಂದ್ರ -9845043666, ಬಾಲಾಜಿ – 9986004243, ವಸಂತ್ ಕುಮಾರ್ – 9611033110, ಪ್ರದೀಪ್ – 8073124047, ಸುಕೀರ್ತಿ – 9901269702 ಮೊ. ಸಂಖ್ಯೆ ಸಂಪರ್ಕಿಸಬಹುದು ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸೌಮ್ಯ ಉಮೇಶ್, `ಲೆಟ್ಸ್ ಡು ಇಟ್’ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಬಿಜೆಪಿ ಕೆ.ಆರ್.ಕ್ಷೇತ್ರ ಘಟಕದ ಅಧ್ಯಕ್ಷ ಎಂ. ವಡಿವೇಲು, ನೂರ್ ಫಾತಿಮಾ, ಎ.ವಿ.ವಿದ್ಯಾ ಅರಸ್, ಜೆ.ನಾಗೇಂದ್ರಕುಮಾರ್, ಭಾಷ್ಯಂ, ಸುಧೀರ್, ಕಿರಣ್, ಡಾ.ಜಯಂತ್, ಡಾ.ನಾಗರಾಜ್, ಪೂರ್ಣಿಮಾ, ಹರೀಶ್, ಮಂಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »