ಎಸ್‍ಸಿ, ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಸಂಬಂಧಿತ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ
ಮೈಸೂರು

ಎಸ್‍ಸಿ, ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಸಂಬಂಧಿತ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ

July 20, 2018

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ಅಧಿಕಾರಿ ಹಾಗೂ ನೌಕರರ ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಎಸ್‍ಸಿ-ಎಸ್‍ಟಿ ಅಧಿಕಾರಿಗಳ ಹಾಗೂ ನೌಕರರ ಬಡ್ತಿ, ಜೇಷ್ಠತೆ ಸಂರಕ್ಷಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ ರಾಜ್ಯ ಮೈತ್ರಿ ಸರ್ಕಾರ ಕಾಯ್ದೆ ಅನುಷ್ಠಾನಗೊಳಿಸದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಡ್ತಿ ಮೀಸಲಾತಿ ಎಸ್‍ಸಿ-ಎಸ್‍ಟಿ ಹಿತರಕ್ಷಣಾ ಸಮಿತಿಯ ಮೈಸೂರು ವಿಭಾಗದ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ಎಸ್‍ಸಿ-ಎಸ್‍ಟಿ ನೌಕರರ ಸಮನ್ವಯ ಸಮಿತಿ, ರಾಜ್ಯ ಎಸ್‍ಸಿ-ಎಸ್‍ಟಿ ನೌಕರರ ಒಕ್ಕೂಟ, ರಾಜ್ಯ ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಸಂಘ, ಮೈಸೂರು ವಿವಿ ಎಸ್‍ಸಿ-ಎಸ್‍ಟಿ ನೌಕರರ ಸಂಘ, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಂಯುಕ್ತಾಶ್ರದಯಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು, ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಬಡ್ತಿಯಲ್ಲಿ ಶೇ.15+3ರಷ್ಟು ಮೀಸಲಾತಿ ಚಾಲ್ತಿಯಲ್ಲಿದೆ ಎಂದು 1978ರ ಮೀಸಲಾತಿ ಆದೇಶದಂತೆ ಪಾಲನೆ ಮಾಡಬೇಕೆಂದು ಹಾಗೂ ಜೇಷ್ಠತಾ ಪಟ್ಟಿಯನ್ನು ಪುನರ್ ಪರಿಷ್ಕರಿಸಲು ಯಾವುದೇ ಬಾಧಕವಿಲ್ಲವೆಂದು ಸುತ್ತೋಲೆ ಮೂಲಕ ಸೂಚನೆ ನೀಡಿದ್ದು, ಸದರಿ ಸೂಚನೆ ಪಾಲನೆ ಮಾಡದೇ ರಾಜ್ಯದಲ್ಲಿ ನಿಯಮಬಾಹಿರವಾಗಿ ಹಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ 8 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ನೌಕರರಿಗೆ ಹಿಂಬಡ್ತಿ ನೀಡಲಾಗಿದೆ. ಜೊತೆಗೆ ಸುಮಾರು 60 ಸಾವಿರ ಅಧಿಕಾರಿ ಮತ್ತು ನೌಕರರ ಸೇವಾ ಜೇಷ್ಠತೆಯನ್ನು ಕೆಳಗಿನ ಕ್ರಮಾಂಕದಲ್ಲಿ ನಿಗದಿಪಡಿಸಲಾಗಿದೆ. ಇದರ ಪರಿಣಾಮ ಹಿಂಬಡ್ತಿ ಪಡೆದ ಮೂವರು ನೌಕರರು ಇದರ ಆಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂಬಡ್ತಿ ನೀಡಿದ್ದವರಿಗೆ ಇದೇ ಜೂ.8ರಂದು ಕೆಳಹಂತದ ಹುದ್ದೆಗಳ ವೇತನ ನಿಗದಿಪಡಿಸಲು ಆದೇಶಿಸಲಾಗಿದೆ. ಜೊತೆಗೆ ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಿವೃತ್ತಿ ಹೊಂದಿದ ದಲಿತ ಅಧಿಕಾರಿ ಹಾಗೂ ನೌಕರರಿಗೆ ಪಿಂಚಣಿ ಯಲ್ಲಿಯೂ ಕಡಿತಗೊಳಿಸಲಾಗಿದೆ. ಎಸ್‍ಸಿ-ಎಸ್‍ಟಿ ಸರ್ಕಾರಿ ಅಧಿಕಾರಿ ಮತ್ತು ನೌಕರರ ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಇದೇ ಜೂ.14ರಂದು ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರವೂ ಜೂ.23ರಂದು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಆದರೆ ಇಂದಿನ ಮೈತ್ರಿ ಸರ್ಕಾರ ಕಾಯ್ದೆ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಪ್ರಕಟಿಸಲಾದ ಜೇಷ್ಠತಾ ಪಟ್ಟಿಗಳು ತತ್‍ಕ್ಷಣ ರದ್ದಾಗಿದೆ. ಬಿ.ಕೆ.ಪವಿತ್ರ ಪ್ರಕರಣದ ತೀರ್ಪಿನಿಂದ ಹಿಂಬಡ್ತಿ ಹೊಂದಿದ್ದ ಎಲ್ಲಾ ಎಸ್‍ಸಿ-ಎಸ್‍ಟಿ ಅಧಿಕಾರಿ ಹಾಗೂ ನೌಕರರ ಹಿಂಬಡ್ತಿ ಆದೇಶಗಳನ್ನು ರದ್ದುಪಡಿಸಿ ಹಿಂಬಡ್ತಿ ಹೊಂದುವ ಪೂರ್ವದಲ್ಲಿ ಕೆಲಸ ನಿರ್ವಹಿಸಿದ್ದ ಹುದ್ದೆ ಹಾಗೂ ಸ್ಥಳದಲ್ಲೇ ನಿಯುಕ್ತಿಗೊಳಿಸಬೇಕು. ಬಿ.ಕೆ.ಪವಿತ್ರ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ ಜೇಷ್ಠತೆ ಪರಿಷ್ಕರಿಸಿ ಹಿಂಬಡ್ತಿ ನೀಡಲು ಕಾರಣರಾಗಿರುವ ಅಧಿಕಾರಿ ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ನಿಂದನಾ ಅರ್ಜಿ ವಜಾ ಆಗಿದ್ದರೂ ಸರ್ಕಾರಕ್ಕೆ ತಪ್ಪು ಅಭಿಪ್ರಾಯ ನೀಡಿರುವ ಅಡ್ವೊಕೇಟ್ ಜನರಲ್ ಉದಯಹೊಳ್ಳ ಅವರನ್ನು ಸದರಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಪುರಭವನದಿಂದ ಗಾಂಧಿ ಚೌಕ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆಯಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆ ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಮೈಸೂರು ಗಾಂಧಿನಗರದ ಉರಿಲಿಂಗಿ ಪೆದ್ದಿಮಠದ ಸ್ವಾಮೀಜಿಗಳೂ ಆದ ಸಮಿತಿಯ ಮೈಸೂರು ವಿಭಾಗದ ಗೌರವಾಧ್ಯಕ್ಷ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಛಲವಾದ ಗುರುಪೀಠದ ಛಲವಾದ ಮಹಾಸಂಸ್ಥಾನದ ಶ್ರೀ ಬಸವನಾಗಿದೇವ ಶರಣ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಅಹಿಂದ ಮುಖಂಡ ಮಲೆಯೂರು ಸೋಮಯ್ಯ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪನಾಯಕ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಭಾಗಗಳಿಂದ ವಿವಿಧ ಇಲಾಖೆಗಳ ಹಿಂಬಡ್ತಿ ಪಡೆದ ಅಧಿಕಾರಿ ಹಾಗೂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಸ್‍ಸಿ-ಎಸ್‍ಟಿ ಅಧಿಕಾರಿ ಮತ್ತು ನೌಕರರ ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಸಂಬಂಧದ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ರಾಜ್ಯ ಪತ್ರದಲ್ಲಿ ಅಧಿಸೂಚನೆ ಸಹ ಹೊರಡಿಸಿದೆ. ಆದರೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳದೇ ಮೌನಕ್ಕೆ ಶರಣಾಗಿದೆ. ರಾಷ್ಟ್ರಪತಿಗಳ ಅಂಕಿತಕ್ಕೆ ಗೌರವ ಕೊಡದ ಏಕೈಕ ರಾಜ್ಯ ಸರ್ಕಾರ ಎಂಬ ಅಪಖ್ಯಾತಿಗೆ ಕರ್ನಾಟಕ ರಾಜ್ಯ ಸರ್ಕಾರ ಒಳಗಾಗಿದೆ. ಸದರಿ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ನಮ್ಮ ಸಮುದಾಯ ಹಕ್ಕುಗಳನ್ನು ದೊರಕಿಸಿಕೊಡಬೇಕು. ಸದರಿ ಕಾಯ್ದೆ ಅನುಷ್ಠಾನಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಅನಿಧಿಷ್ಠಾವಧಿ ಪ್ರತಿಭಟನೆ ಇಂದು 4ನೇ ದಿನಕ್ಕೆ ಕಾಲಿಟ್ಟಿದ್ದರೂ ಸರ್ಕಾರ ಕಣ್ಮಚಿ ಕುಳಿತಿದೆ. ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ, ಇಡೀ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು. -ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ

Translate »