- ಸ್ಮಶಾನವಿಲ್ಲ, ಬೀದಿನಾಯಿ ಕಾಟ ತಪ್ಪಿಸಿ, ಗ್ರಾಪಂ ಕಟ್ಟಡ ಸರಿ ಮಾಡಿ, ಕೆರೆ, ಆಟದ ಮೈದಾನ ಒತ್ತುವರಿ ತೆರವು ಮಾಡಿಸಿ…
ಮೈಸೂರು: ಐದು ತಿಂಗಳ ಬಳಿಕ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಒಳಗೊಂಡು ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಮಶಾನವಿಲ್ಲ.. ಬೀದಿ ನಾಯಿ ಕಾಟ, ಗ್ರಾಪಂ ಕಟ್ಟಡ ಶಿಥಿಲ, ಕೆರೆ ಮತ್ತು ಆಟದ ಮೈದಾನಗಳ ಒತ್ತುವರಿ ಸೇರಿದಂತೆ ಒಟ್ಟು 16 ದೂರುಗಳು ಕೇಳಿಬಂದವು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜಿಪಂ ಸಿಇಓ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಯೋಗೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕಾಂತರಾಜು, ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಡಿಸಿಪಿ ವಿಷ್ಣುವರ್ಧನ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿಯಿಂದ ಮಹಿಳೆಯೊಬ್ಬರು ಕರೆ ಮಾಡಿ, ಹೊಸ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದೆ. ಗ್ರಾಮದಲ್ಲಿ ದಲಿತರಿಗೆ ಸ್ಮಶಾನವಿಲ್ಲ. ಈಗಾಗಲೇ ಈ ಸಂಬಂಧ ನಾಡಕಚೇರಿ, ಕೃಷಿ ಇಲಾಖೆ, ಗ್ರಾಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಮಶಾನ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ, ಜಿಪಂ ಸಿಇಓಗೆ ಈ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ನಂಜನಗೂಡು ತಾಲೂಕು ಹುಲ್ಲಹಳ್ಳಿಯಲ್ಲಿ ಕೃಷಿ ಇಲಾಖೆಗೆ 38 ಗ್ರಾಮಗಳ ರೈತರಿಗೆ ಯಾವ ಕೆಲಸವೂ ಆಗುತ್ತಿಲ್ಲ. 190 ಟಾರ್ಪಾಲ್‍ಗಳನ್ನು ವಿತರಿಸಿರುವ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಸಂಬಂಧಿಕರಿಗೆ ವಿತರಿಸಿದ್ದಾರೆ. ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಹುಲ್ಲಹಳ್ಳಿಯ ಮತ್ತೊಬ್ಬರು, ಬೀರುವಾಳು ಡ್ಯಾಂನಿಂದ ನೀರಾವರಿ ಇಲಾಖೆಯವರು ಹೂಳು ತೆಗೆದಿಲ್ಲ. ಹಾಗೆಯೇ ಕಾರ್ಯದಿಂದ ಹುಲ್ಲಹಳ್ಳಿವರೆಗಿನ ಕಬಿನಿ ಕಾಲುವೆಯ ಹೂಳು ತೆಗೆದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಚುನಾವಣೆಯಿಂದಾಗಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿತ್ತು. ಈಗ ಕಾಮಗಾರಿ ತ್ವರಿತವಾಗಿ ಕೈಗೊಳ್ಳಲಾಗುವುದು ಎಂದರು.
ಮೈಸೂರಿನ ಹಳೆಕೆಸರೆಯ ನಾಗರಿಕ ಕರೆ ಮಾಡಿ, ಕಸದೊಂದಿಗೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಇದರಿಂದ ಈ ಪ್ರದೇಶದ ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಆತಂಕ ತಲೆದೋರಿದೆ ಎಂದು ದೂರಿದರು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಮೈಸೂರು ನಗರದ ಸಾರ್ವಜನಿಕರು ಇಂತಹ ಯಾವುದೇ ದೂರುಗಳಿದ್ದರೆ ಪಾಲಿಕೆ ಕಂಟ್ರೋಲ್ ರೂಂ ಸಂಖ್ಯೆ 9449841195 ಅಥವಾ 9449841196 ಇಲ್ಲಿಗೆ ಕರೆ ಮಾಡಿ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೆಚ್.ಡಿ.ಕೋಟೆಯಿಂದ ವಿಭಜನೆಗೊಂಡು ಪ್ರತ್ಯೇಕ ತಾಲೂಕಾಗಿ ಸರಗೂರು ಘೋಷಣೆಯಾಗಿದ್ದರೂ ಇಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕೆರೆಗಳು, ಆಟದ ಮೈದಾನ ಒತ್ತುವರಿಯಾಗಿದೆ ಎಂದು ಹೇಳಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಸರಗೂರು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಶ್ರೀರಾಂಪುರ 2ನೇ ಹಂತದಲ್ಲಿ ಅಯೋಧ್ಯಾ ಲೇಔಟ್, ದೇವಯ್ಯನಹುಂಡಿ ಮತ್ತು ಪ್ರೀತಿ ಲೇಔಟ್‍ಗಳಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದ್ದು, ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗಿದೆ. ಸೈಕಲ್, ಬೈಕ್‍ಗಳಲ್ಲಿ ಹೋಗುವವರನ್ನು ಅಟ್ಟಿಸಿಕೊಂಡು ಹೋಗಿ ಕಚ್ಚುತ್ತಿವೆ. ಹಲವರು ಗಾಯಗೊಂಡಿದ್ದಾರೆ. ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಾಯಿಗಳನ್ನು ಸಾಯಿಸುವಂತಿಲ್ಲ. ಅವುಗಳಿಗೆ ಸಂತಾನಾಭಿವೃದ್ಧಿ ಆಗದಂತೆ ವ್ಯಾಕ್ಯುಲೇಷನ್ ಹಾಕಿಸಲು ಪಾಲಿಕೆ ಅಧಿಕಾರಿಗೆ ಸೂಚನೆ ನೀಡಿದರು.
ಮೈಸೂರಿನ ಶ್ರೀರಾಂಪುರ 2ನೇ ಹಂತದಲ್ಲಿ ಕಂದಾಯ ನಗರ ಬಡಾವಣೆಯಲ್ಲಿ 319 ಮನೆಗಳಿದ್ದು, ಮುಡಾ ಮತ್ತು ಪಾಲಿಕೆಗೆ ಸೇರಿಸಿ. ಸೌಲಭ್ಯಗಳು ಸಿಗುವಂತೆ ಮಾಡಿ ಎಂದು ಅಲ್ಲಿನ ನಿವಾಸಿಯೊಬ್ಬರು ಮನವಿ ಮಾಡಿದರು. ಇದನ್ನು ಮುಡಾ ಮತ್ತು ಪಾಲಿಕೆ ಅಧಿಕಾರಿಗಳು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಬಾಕಿ ಉಳಿದ ಕಡತ ಪೂರ್ಣಗೊಳಿಸಲು ಆ.15ರ ಗಡುವು
ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕಡತಗಳನ್ನು ಆ.15ರೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇಂದಿಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ನೇರ ಫೋನ್ ಇನ್ ಸಭೆಯ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಅಧಿಕಾರಿಗಳು ಬಾಕಿ ಇರುವ ಎಲ್ಲಾ ಕಡತಗಳನ್ನು ಸಾಧ್ಯವಾದರೆ ಹೆಚ್ಚು ಅವಧಿ ಕೆಲಸ ಮಾಡಿ ಶೇ.100ರಷ್ಟು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.