ಆನ್‍ಲೈನ್ ಮೂಲಕ ಮೈಸೂರು  ವಿವಿ ಹಾಸ್ಟೆಲ್‍ಗಳಿಗೆ ಪ್ರವೇಶ
ಮೈಸೂರು

ಆನ್‍ಲೈನ್ ಮೂಲಕ ಮೈಸೂರು  ವಿವಿ ಹಾಸ್ಟೆಲ್‍ಗಳಿಗೆ ಪ್ರವೇಶ

July 20, 2018

ಮೈಸೂರು: ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಆನ್‍ಲೈನ್ ಪ್ರಕ್ರಿಯೆ ಮೂಲಕ ನಿರ್ವಹಿಸಲು ಮೈಸೂರು ವಿಶ್ವವಿದ್ಯಾನಿಲಯ ಮುಂದಾಗಿದೆ.

ಮೈಸೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಬಿ.ಪ್ರವೀಣ್ ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿವಿ ವ್ಯಾಪ್ತಿಯಲ್ಲಿ ಮಂಡ್ಯ, ಹಾಸನ ಸೇರಿದಂತೆ ಒಟ್ಟು 20 ವಿದ್ಯಾರ್ಥಿನಿಲಯಗಳಿದ್ದು, 1.20 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರು ಈ ಸಾಲಿನಿಂದ ಆನ್‍ಲೈನ್‍ನಲ್ಲಿ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬೇಕು.

ದ್ವಿತೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಜು.20ರಿಂದ ಆನ್‍ಲೈನ್ ಮೂಲಕ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. ಜು.26 ಅಂತಿಮ ದಿನವಾಗಿದೆ. ಕಳೆದ ವರ್ಷ ಪ್ರವೇಶ ಪಡೆದಿದ್ದ ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಅರ್ಹರಾಗಿರುತ್ತಾರೆ. ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಜು.27ರಿಂದ ಆ.2ರೊಳಗೆ ಆನ್‍ಲೈನ್ ಮೂಲಕ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.

ನಿಲಯಗಳಿಗೆ ಆನ್‍ಲೈನ್ ಅರ್ಜಿ ಪ್ರವೇಶ ಪ್ರಕ್ರಿಯೆಗೆ ವಿವಿಯ ಸಿಂಡಿಕೇಟ್‍ನಲ್ಲಿ ಅನುಮತಿ ಪಡೆಯಲಾಗಿದೆ. ವಿದ್ಯಾರ್ಥಿನಿಲಯಗಳಲ್ಲಿ ಅನಧಿಕೃತವಾಗಿ ವಾಸ ಇರುವವರನ್ನೂ ಹೊರಗೆ ಕಳುಹಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ವಿದ್ಯಾರ್ಥಿನಿಲಯಗಳಲ್ಲಿ ಕೊಠಡಿಗಳ ಸಾಮಥ್ರ್ಯಕ್ಕಿಂತ ಅಧಿಕ ವಿದ್ಯಾರ್ಥಿಗಳು ಇರುವುದು ನಿಜ. ಪ್ರಸ್ತುತ ಸನ್ನಿವೇಶದಲ್ಲಿ ಅದು ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

ನಕಾರಾತ್ಮಕ ಮನೋಭಾವ ನಿವಾರಣೆಗೆ ಕಾರ್ಯಕ್ರಮ: ನಿರ್ದೇಶನಾಲಯ ವತಿಯಿಂದ ವಿದ್ಯಾರ್ಥಿಗಳನ್ನು ಕಾಡುವ ನಕಾರಾತ್ಮಕ ಮನೋಭಾವ ನಿವಾರಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದು ಡಾ.ಕೆ.ಬಿ.ಪ್ರವೀಣ್ ತಿಳಿಸಿದರು.

ವಿದ್ಯಾರ್ಥಿಗಳ ಔದ್ಯೋಗಿಕ, ವೈಯಕ್ತಿಕ ಹಾಗೂ ಮಾನಸಿಕ ಆರೋಗ್ಯ ಸಂಬಂಧಿಸಿದಂತೆ ಆಪ್ತ ಸಲಹೆ ಹಾಗೂ ಮಾರ್ಗದರ್ಶನಕ್ಕಾಗಿ `ಮಾರ್ಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರ’ವನ್ನು ತೆರೆಯಲಾಗುವುದು. ಅದಕ್ಕೆ ಪೂರಕವಾಗಿ ಮನಃಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಮತ್ತು ಆಪ್ತಸಲಹೆಗಾರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ವಿವರಿಸಿದರು.

ವಿದ್ಯಾರ್ಥಿಗಳಿಗೆ ಜೀವನ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಓದಿನೊಂದಿಗೆ ವಿದ್ಯಾರ್ಥಿಗಳು ಸ್ವಯಂ ಹಣಗಳಿಸುವ ದಾರಿಯಾಗಿರುವ ಕಲಿಕೆ-ಗಳಿಕೆ ಕಾರ್ಯಕ್ರಮವನ್ನು ಮತ್ತಷ್ಟು ಸುಧಾರಿಸಲು ಆಲೋಚಿಸಲಾಗಿದೆ. ಈ ಕಲಿಕೆ-ಗಳಿಕೆ ಕಾರ್ಯಕ್ರಮಕ್ಕಾಗಿ ಯುಪಿಇ ವತಿಯಿಂದ ಕಳೆದ ಸಾಲಿನಲ್ಲಿ ಮಂಜೂರಾಗಿದ್ದ 1 ಕೋಟಿ ರೂ. ಅನುದಾನದಲ್ಲಿ ಇನ್ನೂ 27 ಲಕ್ಷ ರೂ. ಉಳಿದಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಮಾಡಿಕೊಳ್ಳಲು ಉತ್ತೇಜನ ನೀಡಲು ಚಿಂತಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳ ಕ್ಷೇಮಪಾಲನಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ.ಲೋಹಿತ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »