ಉಡುಪಿಯ ಶಿರೂರು ಶ್ರೀಗಳು ವಿಧಿವಶ
ಮೈಸೂರು

ಉಡುಪಿಯ ಶಿರೂರು ಶ್ರೀಗಳು ವಿಧಿವಶ

July 20, 2018
  •  ದೇಹದಲ್ಲಿ ವಿಷಕಾರಿ ಅಂಶ ಪತ್ತೆ
  • ಪೊಲೀಸರಿಂದ ತನಿಖೆ ಆರಂಭ
  • ಮಠ ಮೂರು ದಿನ ಪೊಲೀಸರ ವಶಕ್ಕೆ
  •  ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧ
  •  ಮೂಲ ಮಠದಲ್ಲಿ ಶ್ರೀಗಳ ಅಂತ್ಯಕ್ರಿಯೆ
  •  ಮೂವರು ಶ್ರೀಗಳಿಂದ ಅಂತಿಮ ದರ್ಶನ
  • ಅಂತಿಮ ದರ್ಶನಕ್ಕೆ ಪೇಜಾವರ ಶ್ರೀಗಳ ನಕಾರ

ಉಡುಪಿ:  ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಅನಾರೋಗ್ಯದಿಂದ ಇಂದು ವಿಧಿವಶರಾದರು. ಹಠಾತ್ತನೇ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬುಧವಾರ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶ್ರೀಗಳ ಹೊಟ್ಟೆಯಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ಅವರು ಸೇವಿಸಿದ ಆಹಾರದಿಂದಾಗಿ ಹೀಗಾಗಿದೆ. ಅವರ ದೇಹದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ವೈದ್ಯರ ಈ ಹೇಳಿಕೆ ಹಾಗೂ ಶ್ರೀಗಳ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರೀಗಳ ದೇಹದ ಮರಣೋತ್ತರ ಪರೀಕ್ಷೆಗೆ ನಿರ್ಧರಿಸಿ, ಕೆಎಂಸಿ ಆಸ್ಪತ್ರೆಯಲ್ಲಿ ಆ ಪ್ರಕ್ರಿಯೆ ಪೂರೈಸಿದ ನಂತರ ಮಠದ ವಶಕ್ಕೆ ಶ್ರೀಗಳ ಪಾರ್ಥಿವ ಶರೀರವನ್ನು ಒಪ್ಪಿಸಿದರು.

ಉಡುಪಿಯ ಅಷ್ಟಮಠ ಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಪಾರ ಜನಸಾಗರವೇ ಹರಿದು ಬಂದಿತ್ತು. ಕೆಎಂಸಿ ಆಸ್ಪತ್ರೆಯಲ್ಲಿ ಶ್ರೀಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಆಸ್ಪತ್ರೆಯಿಂದ ಶ್ರೀ ಕೃಷ್ಣ ಮಠಕ್ಕೆ ತೆರೆದ ಜೀಪಿನಲ್ಲಿ ಮೆರವಣ ಗೆ ಮೂಲಕ ಪಾರ್ಥಿವ ಶರೀರ ತರಲಾಯಿತು.

ಕೆಲ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ನಂತರ ಕೃಷ್ಣಮಠದಿಂದ ಪುಷ್ಪಾಲಂಕೃತ ಬುಟ್ಟಿಯಲ್ಲಿ ಶಿರೂರು ಶ್ರೀಗಳ ಪಾರ್ಥಿವ ಶರೀರ ಇಟ್ಟು ಮೆರವಣ ಗೆ ಮೂಲಕ 21 ಕಿ.ಮೀ. ದೂರದ ಹಿರಿಯಡ್ಕದ ಮೂಲ ಶಿರೂರು ಮಠಕ್ಕೆ ಕೊಂಡೊಯ್ಯಲಾಯಿತು.

ಹಿರಿಯಡ್ಕದಲ್ಲಿರುವ ಶಿರೂರು ಮೂಲ ಮಠದ ಸ್ವರ್ಣಾನದಿ ತಟದಲ್ಲಿ ಅಂತಿಮ ಕ್ರಿಯೆ ನೆರವೇರಿಸಲಾ ಯಿತು. ಶಿರೂರು ಮೂಲ ಮಠದ ಆವರಣದಲ್ಲಿಯೇ ಶಾಸ್ತ್ರೋಕ್ತವಾಗಿ ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ-ವಿಧಾನ ನೆರವೇರಿಸುವ ಮೂಲಕ ಶ್ರೀಗಳು ವೃಂದಾವನಸ್ಥರಾದರು. ಅಷ್ಟಮಠಗಳ ಪೈಕಿ ಅದಮಾರು, ಕಣಿಯೂರು, ಸೋಧೆ ಶ್ರೀಗಳು ಮಾತ್ರ ಶಿರೂರು ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಶಿರೂರು ಮೂಲ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ: ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಶಿರೂರು ಮೂಲ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವರು ಪರಿಶೀಲನೆ ನಡೆಸಿದ್ದಾರೆ.

ಮಠ ಪೊಲೀಸರ ವಶಕ್ಕೆ: ಮೂರು ದಿನಗಳ ಕಾಲ ಶಿರೂರು ಮಠ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪೊಲೀಸರು ಶಿರೂರು ಮೂಲ ಮಠದಲ್ಲಿ ಪರಿಶೀಲನೆ, ತನಿಖೆ ನಡೆಸುತ್ತಿದ್ದಾರೆ.

ಪಟ್ಟದ ದೇವರ ವಿವಾದ: ಕಳೆದ ಕೆಲದಿನಗಳಿಂದ ಅವರಿಗೆ ಅನಾರೋಗ್ಯ ಇತ್ತಾದರೂ, ಕೊನೆಯ ಕೆಲ ದಿನಗಳಲ್ಲಿ ಸ್ವಾಮಿಯನ್ನು ಬಾಧಿಸಿದ್ದು ಪಟ್ಟದ ದೇವರ ವಿವಾದ. ನನ್ನ ಮಠದ ಪಟ್ಟದ ದೇವರನ್ನು ನಂಗೆ ಕೊಡಿ ಎಂದು ಶಿರೂರು ಸ್ವಾಮೀಜಿ ಕಳೆದ ಕೆಲ ದಿನಗಳಿಂದ ಪಟ್ಟು ಹಿಡಿದಿದ್ದರು. ಕಳೆದ ಕೆಲವು ತಿಂಗಳಿಂದ ನಡೆಯುತ್ತಿದ್ದ ಜಟಾಪಟಿ ನ್ಯಾಯಾಲಯದ ಮೆಟ್ಟಿಲು ಹತ್ತುವವರೆಗೂ ಹೋಗಿತ್ತು.

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿ ಕೊನೆಯ ಘಳಿಗೆಯಲ್ಲಿ ಹಿಂದಕ್ಕೆ ಸರಿದಿದ್ದರು. ಬಳಿಕ ಅವರು ನೀಡಿದ್ದ ಬಹಿರಂಗ ಹೇಳಿಕೆಯೊಂದು ತೀವ್ರ ಅಸಮಾಧಾನ ಸೃಷ್ಟಿಸಿತ್ತು. ಈ ಹಿಂದೆ ಅನಾರೋಗ್ಯ ಕಾರಣದಿಂದ ಶಿರೂರು ಶ್ರೀ, ಪಟ್ಟದ ದೇವರನ್ನು ಅದಮಾರು ಶ್ರೀಗಳಿಗೆ ಹಸ್ತಾಂತರಿ ಸಿದ್ದರು. ಬಳಿಕ ಪಲಿಮಾರು ಮಠಕ್ಕೆ ವರ್ಗಾವಣೆಗೊಂಡು ಪರ್ಯಾಯ ಪಲಿಮಾರು ಮಠಾಧೀಶರೇ ಪೂಜೆ ಸಲ್ಲಿಸುತ್ತಿದ್ದರು. ತಮ್ಮ ಪಟ್ಟದ ದೇವರು ತಮಗೆ ದೊರೆಯದಿದ್ದಕ್ಕೆ ಶಿರೂರು ಲಕ್ಷ್ಮೀವರ ತೀರ್ಥರು ತೀವ್ರವಾಗಿ ನೊಂದುಕೊಂಡಿದ್ದರು. ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳದಂತೆ ನ್ಯಾಯಾಲಯಕ್ಕೆ ಕೇವಿಯಟ್ ಅರ್ಜಿಯನ್ನೂ ಸಲ್ಲಿಸಿದ್ದರು. ಪಲಿಮಾರು ಮಠದ ಪಟ್ಟದ ದೇವರಾದ ರಾಮನ ಮೂರ್ತಿ ಅಥವಾ ಕೃಷ್ಣಮಠದ ಕಡಗೋಲು ಕೃಷ್ಣ ನನ್ನ ಸೊತ್ತಲ್ಲ. ಆದರೆ ವಿಠಲ ದೇವರು ನನ್ನ ಸಂಪತ್ತು. ಪಟ್ಟದ ದೇವರನ್ನು ನೀಡದೇ ಹೋದ್ರೆ ಕ್ರಿಮಿನಲ್ ಕೇಸ್ ಹಾಕಿಯಾದ್ರು ಪಟ್ಟದ ದೇವರನ್ನು ಪಡೆಯುತ್ತೇನೆ ಎಂದು ಕೊನೆಯ ದಿನಗಳಲ್ಲಿ ಶಿರೂರು ಶ್ರೀಗಳು ಹಠಕ್ಕೆ ಬಿದ್ದಿದ್ದರು. ಈ ಹೋರಾಟ ಮತ್ತು ಏಕಾಂಗಿತನ ಅವರ ಆರೋಗ್ಯ ಬಿಗಡಾಯಿಸಲು ಪ್ರಮುಖ ಕಾರಣಗಳಲ್ಲಿ ಒಂದಾಯಿತೆಂಬುದು ಶಿರೂರು ಶ್ರೀಗಳ ಆಪ್ತರು ದೂರಿದ್ದಾರೆ.

Translate »