ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ವಿಶೇಷ ವ್ಯವಸ್ಥೆ
ಮೈಸೂರು

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ವಿಶೇಷ ವ್ಯವಸ್ಥೆ

July 20, 2018
  •  ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ ನಿರೀಕ್ಷೆ
  • ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ನಾಳೆ(ಜು.20) ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದಲ್ಲಿ ನಡೆಯುವ ವಿಶೇಷ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಬೆಟ್ಟಕ್ಕೆ ದೇವಿ ದರ್ಶನಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಪ್ರತ್ಯೇಕ ನಾಲ್ಕು ಸಾಲುಗಳು: ದೇವಾಲಯ ಪ್ರವೇಶಿಸಲು ನಾಲ್ಕು ಸಾಲುಗಳ ವ್ಯವಸ್ಥೆ ಮಾಡಲಾ ಗಿದೆ. ಧರ್ಮ ದರ್ಶನ, 50 ರೂ. ಟಿಕೆಟ್ ಪಡೆದ ವರಿಗೆ, 300 ರೂ.ಗಳ ಅಭಿಷೇಕದ ಟಿಕೆಟ್ ಪಡೆದಿ ರುವವರಿಗೆ ಹಾಗೂ ವಿಐಪಿ ಮತ್ತು ವಿವಿಐಪಿಗಳಿಗೆ-ಹೀಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸರದಿ ಸಾಲಿನಲ್ಲಿ ಮಧ್ಯೆ, ಮಧ್ಯೆ ನುಸುಳುವುದನ್ನು ತಡೆಗಟ್ಟುವುದಕ್ಕೆ ಬ್ಯಾರಿಕೇಡ್‍ನೊಂದಿಗೆ ಹಸಿರು ಪರದೆಯನ್ನು ಅಳವಡಿಸಲಾಗಿದೆ. ಇದರಿಂದ ಭಕ್ತರು ಸರಾಗವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ.

ಖಾಸಗಿ ವಾಹನಗಳಿಗೆ ನಿರ್ಬಂಧ: ಈ ಬಾರಿಯೂ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರನ್ನು ಕರೆದೊಯ್ಯಲು ದೇವಾಲಯ ಆಡಳಿತ ಮಂಡಳಿಯಿಂದ ಸಾರಿಗೆ ಸಂಸ್ಥೆಯ 30ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್‍ಗಳಲ್ಲಿ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಬೆಟ್ಟಕ್ಕೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಭಕ್ತರಿಗೆ ವ್ಯವಸ್ಥೆ: ಬೆಟ್ಟಕ್ಕೆ ಬರುವ ಭಕ್ತರಿಗೆ ಹೆಲಿಪ್ಯಾಡ್, ಮೆಟ್ಟಿಲುಗಳ ಮೇಲೆ, ನಂದಿ ಮೂರ್ತಿ, ಬೆಟ್ಟದ ವಿವಿಧೆಡೆ ಕುಡಿಯುವ ನೀರು, ಶೌಚಾಲ ಯದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿಶೇಷ ದರ್ಶನ ಟಿಕೆಟ್ ಪಡೆಯಲು ಹೆಲಿಪ್ಯಾಡ್‍ನಲ್ಲಿ ಹಾಗೂ ದೇವಾಲಯ ಬಳಿ ಟಿಕೆಟ್ ಕೌಂಟರ್ ತೆರೆಯಲಾಗಿದೆ.

ಸರಗಳ್ಳರು, ಜೇಬುಗಳ್ಳರ ಬಗ್ಗೆ ಎಚ್ಚರ ವಹಿಸುವಂತೆ ಎಲ್ಲೆಡೆ ಫಲಕಗಳನ್ನು ಹಾಕುವ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಮಳೆಯಿಂದ ರಕ್ಷಣೆ ನೀಡಲು ಶೀಟ್ ಹಾಕಿ ತಾತ್ಕಾಲಿಕ ಮೇಲ್ಛಾವಣಿ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಗಸ್ತು: ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರೆ ಒಳಿತಾಗಲಿದೆ ಎಂಬ ಪ್ರತೀತಿ. ಅದರಲ್ಲೂ ಈ ವೇಳೆ ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಮುಂಜಾನೆಯಿಂದಲೇ ಭಕ್ತರು ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವುದರಿಂದ ವನ್ಯಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸರನ್ನು ಗಸ್ತಿಗೆ ನಿಯೋಜಿಸಲಾಗಿದೆ.

ಪ್ಲಾಸ್ಟಿಕ್ ನಿಷೇಧ: ಆಷಾಢ ಶುಕ್ರವಾರದ ವಿಶೇಷ ಪೂಜಾ ಕೈಂಕರ್ಯಕ್ಕೆ ಸಂಬಂಧಿಸಿ ದಂತೆ ದೇವಾಲಯದ ಆಡಳಿತಾಧಿಕಾರಿ ಕೆ.ಎಂ.ಪ್ರಸಾದ್, ಪತ್ರಕರ್ತರೊಂದಿಗೆ ಮಾತನಾಡಿ, ನಾಳೆಯ ಆಷಾಢ ಮಾಸದ ವಿಶೇಷ ಪೂಜೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ನೀರು ಕುಡಿಯುವುದಕ್ಕೂ ಪ್ಲಾಸ್ಟಿಕ್ ಲೋಟ ಬಳಸದೆ, ಸ್ಟೀಲ್ ಲೋಟವನ್ನಿಡಲಾಗಿದೆ. ಸಾರಿಗೆ ಸಂಸ್ಥೆಗೆ 5 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಲಾಗಿದ್ದು, ನಾಲ್ಕು ಶುಕ್ರವಾರಗಳಿಗೆ ದೇವಾಲಯದ ಆಡಳಿತ ಮಂಡಳಿ, ಸಾರಿಗೆ ಸಂಸ್ಥೆಗೆ ಇನ್ನೂ ಸುಮಾರು 12 ರಿಂದ 15 ಲಕ್ಷ ಪಾವತಿಸಬೇಕಾಗಬಹುದು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್‍ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ನಾಳೆ 25 ಬಸ್ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ಬಸ್‍ಗಳ ವ್ಯವಸ್ಥೆ ಮಾಡಲಾಗುತ್ತದೆ. ಸೂಕ್ತ ಭದ್ರತೆ, ಭಕ್ತರಿಗೆ ಪ್ರಸಾದದ ವ್ಯವಸ್ಥೆ, ಮಳೆಯಿಂದ ರಕ್ಷಣೆಗೆ ಸರದಿ ಸಾಲಿನುದ್ದಕ್ಕೂ ತಾತ್ಕಾಲಿಕ ಮೇಲ್ಛಾವಣಿ ಒದಗಿಸಲಾಗಿದೆ ಎಂದರು.

ಪರಿಶೀಲನೆ: ನಾಳೆ ಚಾಮುಂಡಿಬೆಟ್ಟಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅವರ ಸಚಿವ ಸಂಪುಟದ ಹಲವು ಸಚಿವರು ಆಗಮಿಸಲಿದ್ದಾರೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಪರಿಶೀಲನೆ ನಡೆಸಿದರು. ಕೆ.ಆರ್. ವಿಭಾಗದ ಎಸಿಪಿ ಎನ್.ಎಂ.ಧರ್ಮಪ್ಪ, ಕೆ.ಆರ್.ಠಾಣೆಯ ಇನ್ಸ್‍ಪೆಕ್ಟರ್ ಪ್ರಕಾಶ್, ಸಿದ್ಧಾರ್ಥ ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ಮುನಿಯಪ್ಪ ಭದ್ರತೆ ಹಾಗೂ ಸಂಚಾರ ವ್ಯವಸ್ಥೆ ಪರಿಶೀಲಿಸಿದರು. ಬೆಳಿಗ್ಗೆ 10.30ಕ್ಕೆ ಬೆಟ್ಟಕ್ಕೆ ಸಿಎಂ ಕುಮಾರಸ್ವಾಮಿ, ಕೆಲ ಸಚಿವರು ಹಾಗೂ ಇನ್ನಿತರರೊಂದಿಗೆ ಸಾರಿಗೆ ಸಂಸ್ಥೆಯ ಐರಾವತ ಬಸ್‍ನಲ್ಲಿ ಬೆಟ್ಟಕ್ಕೆ ಬಂದು, ದೇವಿಯ ದರ್ಶನ ಪಡೆಯಲಿದ್ದಾರೆ. ಮುಖ್ಯಮಂತ್ರಿಗಳು ನೇರವಾಗಿ ದೇವಾಲಯದ ಮುಖ್ಯದ್ವಾರದಲ್ಲಿ ಬಂದು ಬಸ್ ಇಳಿಯಲಿದ್ದಾರೆ. ನಂತರ ಅವರನ್ನು ದೇವಾಲಯದ ಆಡಳಿತ ಮಂಡಳಿ ಬರಮಾಡಿಕೊಳ್ಳಲಿದ್ದಾರೆ.

Translate »