ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಇಹಲೋಕ ತ್ಯಜಿಸಿ ಇಂದಿಗೆ ಐದು ದಿನ. ಶ್ರೀಗಳ ಸಾವಿನ ಸುತ್ತ ಹಲವು ಅನುಮಾನ ವ್ಯಕ್ತವಾಗಿವೆ. ಶಿರೂರು ಮೂಲ ಮಠದ ಸಿಸಿ ಕ್ಯಾಮರಾ ಡಿವಿಆರ್ ನಿಗೂಢವಾಗಿ ನಾಪತ್ತೆಯಾಗಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನವೇ ಮಠಕ್ಕೆ ಬಂದ ವ್ಯಕ್ತಿ ಎಗರಿಸಿದ್ದನಾ? ಆಸ್ಪತ್ರೆ ಸೇರುವ ಮುನ್ನ ಶ್ರೀಗಳೇ ಡಿವಿಆರ್ ಬದಲಿಸಿದ್ದಾರೆಯೇ? ಅನ್ನುವುದು ಪೊಲೀಸ ರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಅಲ್ಲದೆ ಶ್ರೀಗಳ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಇನ್ನು ಎರಡು ದಿನದಲ್ಲಿ ಹೊರಬರಲಿದೆ. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಮಗ್ರ ವರದಿಗೆ ಎರಡು ವಾರ ಕಾಯುವ ಅನಿವಾರ್ಯತೆ ಎದುರಾಗಿದೆ. ತಾತ್ಕಾಲಿಕ ವರದಿ ಪೊಲೀಸ್ ತನಿಖೆಗೆ ಒಂದಿಷ್ಟು ಬಲ ನೀಡಿದರೂ ವಿಧಿ ವಿಜ್ಞಾನ ವರದಿ ಶ್ರೀಗಳ ಸಾವಿನ ರಹಸ್ಯ ಬಯಲು ಮಾಡುವು ದಕ್ಕೆ ಆನೆ ಬಲ ನೀಡ ಲಿದೆ. ಉಡುಪಿ ಕೃಷ್ಣ ಮಠಕ್ಕೆ ತಾಗಿಕೊಂಡೇ ಇರುವ ಶಿರೂರು ಮಠ ಈಗ ಬಿಕೊ ಎನ್ನುತ್ತಿದೆ. ಪ್ರಥಮ ಏಕಾದಶಿ ದಿನ ಮಾಧ್ವ ಸಂಪ್ರ ದಾಯದಲ್ಲಿ ತಪ್ತ ಮುದ್ರಾಧಾರಣೆ ನಡೆಯುತ್ತದೆ. ಉಡುಪಿಯ ಅಷ್ಟಮಠಗಳ ಪರಿಸರದಲ್ಲಿ ಸಾವಿರಾರು ಮಂದಿ ಸೇರಿ ಮಠಾಧೀಶರಿಂದ ಮುದ್ರಾಧಾರಣೆ ಮಾಡಿಸಿ ಕೊಳ್ಳುತ್ತಾರೆ. ಅದರಲ್ಲೂ ಶಿರೂರು ಸ್ವಾಮೀಜಿ ಬದುಕಿದ್ದರೆ ಅವರ ಮಠದ ಮುಂದೆ ಜನ ಜಾತ್ರೆಯೇ ಸೇರುತ್ತಿತ್ತು. ಶಿರೂರು ಲಕ್ಷ್ಮೀ ವರ ತೀರ್ಥರಿಂದ ಮುದ್ರಾಧಾರಣೆ ಮಾಡಿಸಿ ಕೊಳ್ಳಲು ಭಕ್ತರು ಮುಗಿಬೀಳುತ್ತಿದ್ದರು.
ಶಿರೂರು ಶ್ರೀಗಳು ಜನರ ಅನುಕೂಲಕ್ಕೆ ತಕ್ಕಂತೆ ಮುಂಜಾನೆ ಬೇಗನೇ ಮುದ್ರಾ ಧಾರಣೆ ಆರಂಭಿಸುತ್ತಿದ್ದರು. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕೆ ತೆರಳುವವರಿಗೆ ತಮ್ಮ ಮಠದಲ್ಲಿ ಪ್ರಥಮ ಆದ್ಯತೆ ನೀಡುತ್ತಿದ್ದರು. ಆದರೆ ಈ ಬಾರಿ ಶಿರೂರು ಮಠಾಧೀಶರಿಲ್ಲ. ಹಾಗಾಗಿ ಮಠದ ಮುಂದೆ ನೀರವ ಮೌನ ಆವರಿಸಿದೆ. ಬ್ರಾಹ್ಮಣ ಸಮುದಾಯವೇ ಹೆಚ್ಚಾಗಿ ಮುದ್ರಾಧಾರಣೆ ಮಾಡಿಸಿಕೊಳ್ಳುವ ಪದ್ಧತಿ ಇತ್ತು. ಆದರೆ ಶಿರೂರು ಲಕ್ಷ್ಮೀವರ ತೀರ್ಥರು ಎಲ್ಲಾ ಸಮು ದಾಯದವರನ್ನು ಸೇರಿಸಿ ಮುದ್ರಾಧಾರಣೆ ನಡೆಸುತ್ತಿದ್ದರು.
ಈ ಬಾರಿ ಮಾತ್ರ ಶ್ರೀಗಳ ಅಕಾಲಿಕ ಸಾವಿನಿಂದ ಬ್ರಾಹ್ಮಣೇತರ ಭಕ್ತವೃಂದ ಮುದ್ರಾ ಧಾರಣೆಯಿಂದ ವಂಚಿತವಾಗಿದೆ. ಇನ್ನು ಶಿರೂರು ಮಠಕ್ಕೆ ಉತ್ತರಾಧಿಕಾರಿ ಯಾರು ಅನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಉತ್ತರಾಧಿಕಾರಿ ನೇಮಕದ ಹೊಣೆ ಸೋದೆ ಶ್ರೀಗಳ ಹೆಗಲಿಗೆ ಬಿದ್ದಿದೆ. ಉತ್ತರಾಧಿಕಾರಿ ನೇಮಕಕ್ಕೆ ವಿದ್ವಾಂಸರ ಸಮಿತಿ ರಚನೆಗೆ ಸೋದೆ ಮಠ ನಿರ್ಧರಿಸಿತ್ತು. ಆದರೂ ಇಂದು ನಡೆಯಬೇಕಿದ್ದ ಸಮಿತಿ ರಚನೆ 26ಕ್ಕೆ ಮುಂದೆ ಹೋಗಿದೆ. ಉತ್ತರಾಧಿಕಾರಿ ನೇಮಕಕ್ಕೆ ವಟುವಿನ ಜಾತಕ ಪರೀಕ್ಷೆ ನಡೆಯುತ್ತಿದೆ. ಆದ್ರೆ ಶಿರೂರು ಮಠದ ಉತ್ತರಾಧಿಕಾರಿಯಾಗುವುದಕ್ಕೆ ಆಸಕ್ತರು ಹಿಂದೇಟು ಹಾಕುತ್ತಿರುವುದು ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಸವಾಲಾಗಿ ಪರಿಣಮಿಸಿದೆ.