ರೈಲ್ವೆ ಗೂಡ್ಸ್ ಶೆಡ್‍ನಿಂದ ಅಕ್ಕಿ, ಗೋಧಿ  ಸಾಗಿಸಲು ಲಾರಿ ಮಾಲೀಕರ ಒಪ್ಪಿಗೆ
ಮೈಸೂರು

ರೈಲ್ವೆ ಗೂಡ್ಸ್ ಶೆಡ್‍ನಿಂದ ಅಕ್ಕಿ, ಗೋಧಿ  ಸಾಗಿಸಲು ಲಾರಿ ಮಾಲೀಕರ ಒಪ್ಪಿಗೆ

July 24, 2018

ಮೈಸೂರು: ಲಾರಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಲಾರಿಗಳು ಸಂಚರಿಸದ ಕಾರಣ ಬಂಡೀ ಪಾಳ್ಯ ಎಪಿಎಂಸಿ, ಬಂಬೂಬಜಾರ್ ಆರ್‍ಎಂಸಿಗಳಲ್ಲಿ ವಹಿವಾಟು ವ್ಯತ್ಯಯ ಕಂಡು ಬಂದಿದೆ. ಈ ಮಧ್ಯೆ ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ಅಗತ್ಯ ಭದ್ರತೆಯೊಂದಿಗೆ ಕೇರಳಕ್ಕೆ ತರಕಾರಿ ಸಾಗಿಸಲು ಬಂಡೀಪಾಳ್ಯ ಎಪಿಎಂಸಿ ಅಧ್ಯಕ್ಷ ಸಿದ್ದೇಗೌಡ ಪ್ರಯತ್ನ ನಡೆಸಿದ್ದಾರೆ.

ಇಂದು 4 ಲಾರಿ ತರಕಾರಿಯನ್ನು ಎಪಿಎಂಸಿ ದಲ್ಲಾಳಿಗಳು ಹಾಗೂ ಸಿಬ್ಬಂದಿ ಸಹಿತ ಕೇರಳದತ್ತ ಕಳಿಸಲಾಗಿದೆ. ಇನ್ನು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಇನ್ನಷ್ಟು ಲಾರಿ ತರಕಾರಿಗಳನ್ನು ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಮಧ್ಯೆ ರೈಲ್ವೆ ಗೂಡ್ಸ್ ಶೆಡ್‍ನಿಂದ ಅನ್ನಭಾಗ್ಯದ ಅಕ್ಕಿ ಮತ್ತು ಮುಕ್ತ ಮಾರುಕಟ್ಟೆಯ ಗೋಧಿ ಸಾಗಿಸಲು ಮಾತ್ರ ಲಾರಿ ಮುಷ್ಕರ ದಿಂದ ವಿನಾಯಿತಿ ನೀಡಲಾಗಿದೆ.

ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘದ ಗೌರವ ಅಧ್ಯಕ್ಷರೂ ಆಗಿರುವ ಶಾಸಕ ತನ್ವೀರ್‍ಸೇಠ್ ಅವರ ಅಧ್ಯಕ್ಷತೆಯಲ್ಲಿ ಬನ್ನಿಮಂಟಪದ ಗೂಡ್ಸ್ ಶೆಡ್ ಲಾರಿ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್, ಆಹಾರ ಇಲಾಖೆ ಡಿಡಿ ಪಿ.ಶಿವಣ್ಣ, ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು, ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಮತ್ತು ಇನ್ನಿತರ ಅಧಿಕಾರಿಗಳು ಪಾಲ್ಗೊಂಡು ಚರ್ಚಿಸಿದರು. ಲಾರಿ ಮುಷ್ಕರದಿಂದಾಗಿ ರೈಲ್ವೆ ಗೂಡ್ಸ್ ಶೆಡ್‍ನಲ್ಲಿ ಬಂದಿಳಿದಿರುವ ಪಡಿತರ ಅಕ್ಕಿ ಹಾಗೂ ಗೋಧಿ ತೆರವು ಗೊಳಿಸಬೇಕಾಗಿದೆ. ಸಾರ್ವಜನಿಕರ ವಿತರಣಾ ಸೇವೆಯಡಿ ಇದಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಈ ವೇಳೆ ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಮಾತನಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ರೈಲ್ವೆ ಗೂಡ್ಸ್‍ಶೆಡ್‍ನಿಂದ ಪಡಿತರ ಅಕ್ಕಿ, ಗೋಧಿ ಸಾಗಿಸಲು ನಮ್ಮದೇನೂ ತಕರಾರಿಲ್ಲ. ಆದರೆ ಬನ್ನಿಮಂಟಪದ ಹಜರತ್ ಗುಮ್‍ನಾಮ್ ಶಾವಲಿ ದರ್ಗಾ ರಸ್ತೆಯನ್ನು ರಿಂಗ್‍ರಸ್ತೆ ಸಂಪರ್ಕಿಸುವ ಕಾಮಗಾರಿಗೆ ರೈಲ್ವೆ ಇಲಾಖೆ ರಸ್ತೆಯಲ್ಲಿ ಅಡ್ಡ ಹಾಕಿರುವ ಮನ್ಣು ತೆರವುಗೊಳಿಸಬೇಕು. ಈ ರಸ್ತೆ ತೆರವುಗೊಳಿಸಿ ಅಭಿವೃದ್ಧಿಪಡಿಸಿದರೆ ರಿಂಗ್‍ರಸ್ತೆಗೆ ನೇರ ಸಂಪರ್ಕಿ ಹೊಂದುವ ಜೊತೆಗೆ ಲಾರಿಗಳು ಜೋಡಿ ತೆಂಗಿನಮರ ರಸ್ತೆ ಹಾಗೂ ಜನವಸತಿ ಪ್ರದೇಶಗಳಿಗೆ ಬರುವುದಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಶಾಸಕ ತನ್ವೀರ್‍ಸೇಠ್, ಮಂಗಳವಾರ (ಜು.24) ಜಿಲ್ಲಾಧಿಕಾರಿ, ರೈಲ್ವೆ ಇಲಾಖೆ ಅಧಿಕಾರಿಗಳು, ಮುಡಾ ಅಧಿಕಾರಿ, ಲಾರಿ ಸಂಘದ ಪದಾಧಿಕಾರಿಗಳನ್ನು ಒಳಗೊಂಡಂತೆ ರೈಲ್ವೆ ಇಲಾಖೆ ಅಡ್ಡವಾಗಿ ಮಣ್ಣು ಸುರಿದಿರುವ ಪ್ರದೇಶಕ್ಕೆ ತೆರಳಿ ಪರಿಶೀಲಿಸಲಿದ್ದೇವೆ. ಬುಧವಾರ (ಜು.25) ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಸಭೆ ಕರೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದು, ಇದರಿಂದಾಗಿ ಲಾರಿ ಮಾಲೀಕರು ರೈಲ್ವೆ ಗೂಡ್ಸ್‍ಶೆಡ್‍ನಲ್ಲಿರುವ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಗೋದಾಮಿಗೆ ಸಾಗಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಲಾರಿ ಮಾಲೀಕರು ರೈಲ್ವೆ ಗೂಡ್ಸ್‍ಶೆಡ್‍ನಿಂದ ಗೋದಾಮಿಗೆ ಅಕ್ಕಿ, ಗೋದಿ ಸಾಗಿಸಲು ಅವಕಾಶ ಮಾಡಿಕೊಟ್ಟರಲ್ಲದೆ, ತಕ್ಷಣವೇ 250ಕ್ಕೂ ಹೆಚ್ಚು ಲಾರಿಗಳನ್ನು ಕಳಿಸಿ ಅಕ್ಕಿ, ಗೋಧಿ ಸಾಗಣೆ ನಡೆಸಿದರು. ಇದರಿಂದ 300 ಲೋಡ್ ಅಕ್ಕಿ, 600 ಲೋಡ್ ಗೋಧಿಯನ್ನು ರೈಲ್ವೆ ವ್ಯಾಗನ್‍ಗಳಿಂದ ತೆರವುಗೊಳಿಸಲಾಯಿತು.

Translate »