ಐಟಿ ದಾಳಿ ವೇಳೆ ಮಾಜಿ ಸಿಎಂ, ಪ್ರಭಾವಿ ರಾಜಕಾರಣಿ ಕುಟುಂಬದ ಆಸ್ತಿ ದಾಖಲೆ ಪತ್ತೆ
ಮೈಸೂರು

ಐಟಿ ದಾಳಿ ವೇಳೆ ಮಾಜಿ ಸಿಎಂ, ಪ್ರಭಾವಿ ರಾಜಕಾರಣಿ ಕುಟುಂಬದ ಆಸ್ತಿ ದಾಖಲೆ ಪತ್ತೆ

July 24, 2018

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ರಾಜಕಾರಣಿಯೊಬ್ಬರ ಕುಟುಂಬಕ್ಕೆ ಸೇರಿದ ಸ್ಥಿರ ಮತ್ತು ಚರಾಸ್ತಿ ದಾಖಲೆಗಳು ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಪತ್ತೆಯಾಗಿವೆ.

ಕಳೆದ ಎರಡು ದಿನಗಳ ಹಿಂದೆ ನಗರದ ಬೌರಿಂಗ್ ಇನ್‍ಸ್ಟಿಟ್ಯೂಟ್ ಸಂಸ್ಥೆಯ ಸದಸ್ಯ ರೊಬ್ಬರ ಲಾಕರ್‍ನಲ್ಲಿ ಈ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲಾಕರ್ ಮಾಲೀಕ ಅವಿನಾಶ್ ಕುಕ್ರೇಜ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ರಾಜ್ಯದ ಕೆಲವು ಪ್ರಭಾವಿ ರಾಜಕಾರಣಿ ಗಳು, ಬಿಲ್ಡರ್‍ಗಳು ಮತ್ತು ವ್ಯಾಪಾರಸ್ಥರಿಗೆ ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹಾಸನದ ಬೇಲೂರಿನ ಎಸ್ಟೇಟ್‍ಗೆ ಸಂಬಂಧಿಸಿದ ಕೆಲವು ದಾಖಲೆ, ವಜ್ರ ಸೇರಿದಂತೆ ಹೆಚ್ಚು ಬೆಲೆ ಬಾಳುವ ಅಮೂಲ್ಯ ವಸ್ತುಗಳು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರಿಗೆ ಸೇರಿದ್ದು ಎನ್ನಲಾಗಿದೆ. ಪ್ರಮುಖ ರಾಜಕಾರಣಿಗಳು, ಕುಕ್ರೇಜ ಜೊತೆ ವ್ಯವಹಾರಿಕ ಸಂಬಂಧ ಹಾಗೂ ಕೆಲವು ದಾಖಲೆಗಳನ್ನು ಇಟ್ಟಿರುವ ವಿಷಯ ಆದಾಯ ತೆರಿಗೆ ಇಲಾಖೆ ಅಧಿ ಕಾರಿಗಳಿಗೆ ಪ್ರಾಥಮಿಕ ಮಾಹಿತಿಯಾಗಿ ಲಭ್ಯವಾಗುತ್ತಿದ್ದಂತೆ ಇಂದು ಕೂಡ ಬೌರಿಂಗ್ ಸೇರಿದಂತೆ ನಗರದ ಕೆಲವು ಹೆಸರಾಂತ ಕ್ಲಬ್‍ಗಳಲ್ಲೂ ತಪಾಸಣೆ ನಡೆಸಲಾಗಿದೆ.

ಈ ಆಸ್ತಿಗಳನ್ನು ಹೊಂದಿರುವ ದಾಖಲೆ ಗಳ ಮಾಹಿತಿ ಕ್ಲಬ್ಬಿನ ಆಡಳಿತ ಮಂಡಳಿಗೆ ತಿಳಿದಂತಿದೆ. ಆದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗೂ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಕೇಂದ್ರ ಸರ್ಕಾರದ ಆಡಳಿತದಡಿ ಬರುವ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೂ ಯಾವುದೇ ಸುಳಿವು ದೊರೆ ಯದಂತೆ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕುಕ್ರೇಜ ಅವರ ಒಡೆತನದ ನಾಲ್ಕು ಲಾಕರ್ ಗಳಲ್ಲಿ 500 ಕೋಟಿ ರೂ.ಗಳಿಗೂ ಮಿಗಿಲಾದ ಸ್ಥಿರಾಸ್ತಿ ಮತ್ತು ಚರಾಸ್ತಿ ದಾಖಲೆಗಳು ದೊರೆತಿವೆ. ದಾಖಲೆ ಜೊತೆಗೆ ಕೋಟ್ಯಂತರ ರೂ. ನಗದು, ಚಿನ್ನ, ವಜ್ರ ಹಾಗೂ ಅತ್ಯಂತ ಬೆಲೆ ಬಾಳುವ ಕೈಗಡಿಯಾರ ದೊರೆತಿದೆ. ಈ ಮಧ್ಯೆ ಪ್ರಭಾವಿ ಸಚಿವರೊಬ್ಬರು ತಮ್ಮ ಆಪ್ತ ಸಹಾಯಕನ ಮೂಲಕ ಕೆಲವು ದಾಖಲೆ ಪತ್ರಗಳನ್ನು ಪಡೆಯಲು ಕ್ಲಬ್‍ನ ಕಾರ್ಯದರ್ಶಿ ಮೇಲೆ ಒತ್ತಡ ಹೇರಿದರೆಂದು ಹೇಳಲಾಗಿದ್ದು, ಸಚಿವನ ಆ ಆಪ್ತ ಸಹಾಯಕನನ್ನು ಆದಾಯ ತೆರಿಗೆ ಅಧಿಕಾರಿಗಳು ಹಿಡಿಯಲು ಮುಂದಾದಾಗ ಆತ ಪರಾರಿಯಾದನೆಂದು ಮೂಲಗಳು ತಿಳಿಸಿವೆ.

Translate »