ಮೈಸೂರು, ಮಂಡ್ಯ, ಹಾಸನ ಸೇರಿ15 ಕಡೆ ಐಟಿ ದಾಳಿ
ಮೈಸೂರು

ಮೈಸೂರು, ಮಂಡ್ಯ, ಹಾಸನ ಸೇರಿ15 ಕಡೆ ಐಟಿ ದಾಳಿ

March 29, 2019

ಮೈಸೂರು, ಮಂಡ್ಯ, ಹಾಸನ ಸೇರಿ15 ಕಡೆ ಐಟಿ ದಾಳಿ

ಜೆಡಿಎಸ್ ಸಚಿವರು, ನಾಯಕರ ಆಪ್ತ ಗುತ್ತಿಗೆದಾರರು, ಅಧಿಕಾರಿಗಳು,
ಉದ್ಯಮಿಗಳೇ ಟಾರ್ಗೆಟ್; ಹುಟ್ಟುಹಬ್ಬದ ದಿನವೇ ನಾಗನಹಳ್ಳಿ ಬಳಿಯ ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ಮೈಸೂರು: ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆಯೇ ಜೆಡಿಎಸ್-ಕಾಂಗ್ರೆಸ್ ಮುಖಂಡರು, ಪಿಡಬ್ಲ್ಯೂಡಿ ಕಂಟ್ರಾಕ್ಟರ್‍ಗಳ ಮೈಸೂರು, ಮಂಡ್ಯ, ಹಾಸನ ಸೇರಿದಂತೆ 15 ಕಡೆ ಸಚಿವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಆಪ್ತ ಗುತ್ತಿಗೆದಾರರು, ಅಧಿಕಾರಿಗಳ ಮತ್ತು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಇಂದು ಏಕಕಾಲದಲ್ಲಿ ದಾಳಿ ನಡೆಸಿ, ಶಾಕ್ ನೀಡಿದ್ದಾರೆ.

ಬುಧವಾರ ಸಂಜೆಯಷ್ಟೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ‘ಆದಾಯ ತೆರಿಗೆ ಅಧಿಕಾರಿ ಗಳು ದಾಳಿ ಮಾಡುತ್ತಾರೆಂಬ ಮಾಹಿತಿ ಬಂದಿದೆ’ ಎಂದು ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲಿಯೇ ಐಟಿ ಅಧಿಕಾರಿಗಳು ಬೆಂಗಳೂರು, ಮೈಸೂರು, ಮಂಡ್ಯ, ಹಾಸನದಲ್ಲಿನ ಮೈತ್ರಿ ಸರ್ಕಾರದ ಸಚಿವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ಆರಂಭಿಸಿರು ವುದು ಜನಪ್ರತಿನಿಧಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ.

ಗುರುವಾರ ಮುಂಜಾನೆ 5.30ರ ವೇಳೆ ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ತಂಡೋಪತಂಡವಾಗಿ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಸಚಿವರು, ನಾಯಕರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗ ಳೂರಿನಲ್ಲಿ ಐಟಿ ಕಚೇರಿ ಎದುರು ಭಾರೀ ಪ್ರತಿಭಟನೆ ಯನ್ನೇ ನಡೆಸಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಪ್ತರು, ವಿಧಾನ ಪರಿಷತ್ ಸದಸ್ಯ ಫಾರೂಖ್, ಲೋಕೋಪಯೋಗಿ ಸಚಿವ ರೇವಣ್ಣ ಅವರ ಆಪ್ತ ಗುತ್ತಿಗೆದಾರರು, ಅಧಿಕಾರಿಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು.

ಚಿನಕುರಳಿ: ಪಾಂಡವಪುರ ತಾಲೂಕು, ಚಿನಕುರಳಿ ಗ್ರಾಮದ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಣ್ಣನ ಮಗ ಅಶೋಕ್ ಅವರ ಮನೆ ಮೇಲೆ ಮುಂಜಾನೆ ದಾಳಿ ನಡೆಸಿದ ಅಧಿಕಾರಿಗಳು, ಅಗತ್ಯ ದಾಖಲೆ ಹಾಗೂ ಮತ್ತಿತರ ಬೆಲೆ ಬಾಳುವ ವಸ್ತುಗಳಿಗಾಗಿ ರಾತ್ರಿವರೆಗೂ ಪರಿಶೀಲನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಸಚಿವ ಸಿ.ಎಸ್.ಪುಟ್ಟರಾಜು ಅವರು ಸ್ಥಳಕ್ಕೆ ಧಾವಿಸಿದರು. ದಾಳಿಯಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಸಚಿವರ ಬೆಂಬಲಿ ಗರು ಹಠಾತ್ ಬೀದರ್-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆಯನ್ನೂ ನಡೆಸಿದರು.

ಮಂಡ್ಯದಲ್ಲಿ: ಮಂಡ್ಯ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಣ್ಣನ ಮನೆ ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ್ ಮನೆ ಮೇಲೂ ಐಟಿ ಅಧಿಕಾರಿಗಳು ಸಿಐಎಸ್‍ಎಫ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಿದರು.

ಬೆಂಗಳೂರು ವರದಿ: ಅದೇ ರೀತಿ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಜೆಡಿಎಸ್ ಮುಖಂಡರೂ ಆದ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್ ಅವರ ಕಚೇರಿ, ಶಾಂತಿ ನಗರದ ನಿವಾಸದ ಮೇಲೂ ಕಳೆದ ರಾತ್ರಿಯೇ ದಾಳಿ ನಡೆಸಿದ ಅಧಿಕಾರಿಗಳು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಹಚರರ ವಹಿವಾಟು ಸ್ಥಳಗಳಿಗೂ ತೆರಳಿ, ದಾಖಲೆ ಪತ್ರಗಳನ್ನು ಪರಿಶೀಲಿಸಿದರು.

ಮೈಸೂರು ವರದಿ: ಮೈಸೂರಿನ ವಿಜಯನಗರ 3ನೇ ಹಂತದ 3ನೇ ಮೇನ್, 15ನೇ ಕ್ರಾಸ್, ಎ-1 ಬ್ಲಾಕ್‍ನಲ್ಲಿ ವಾಸವಾಗಿರುವ ಸಚಿವ ಸಿ.ಎಸ್.ಪುಟ್ಟರಾಜು ಅವರ ಸಹೋದರ ಲೇಟ್ ಸಣ್ಣತಮ್ಮೇಗೌಡರ ಮಕ್ಕಳಾದ ಶಿವಕುಮಾರ್, ಅಶೋಕ್ ಹಾಗೂ ಹರೀಶ್‍ಕುಮಾರ್ ಮನೆ ಸಂಖ್ಯೆ 466ರ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಮುಂಜಾನೆಯಿಂದ ಸಂಜೆವರೆಗೂ ಪರಿಶೀಲನೆ ನಡೆಸಿದರು.

ನಾಲ್ಕು ಇನ್ನೋವಾ ವಾಹನಗಳಲ್ಲಿ ಬಂದ ಐಟಿ ಇಲಾಖೆಯ 15 ಅಧಿಕಾರಿಗಳ ತಂಡ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಸಿಬ್ಬಂದಿಗಳೊಂದಿಗೆ ಮುಂಜಾನೆ 5.30 ಗಂಟೆಗೆ ಬಾಗಿಲು ತಟ್ಟಿತು. ಆಗ ಮನೆಯಲ್ಲಿ ಚಿನಕುರಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಗುತ್ತಿಗೆದಾರ ಹರೀಶ್‍ಕುಮಾರ್ ಹಾಗೂ ಕುಟುಂಬ ಸದಸ್ಯರಿದ್ದರು. ಮನೆ ಬಾಗಿಲು ತೆಗೆಯುತ್ತಿದ್ದಂತೆಯೇ ಎದುರಾದ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳನ್ನು ಕಂಡು ನಿಬ್ಬೆರಗಾದ ಮನೆಯವರು ಏನು ನಡೆಯುತ್ತಿದೆ ಎಂಬುದು ತಿಳಿಯದೆ ತಬ್ಬಿಬ್ಬಾದರು. ತಕ್ಷಣವೇ ಮನೆಯ ಮೂರು ಅಂತಸ್ತಿನ ಕಟ್ಟಡದ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿದ ಅಧಿಕಾರಿಗಳು, ಕುಟುಂಬ ಸದಸ್ಯರ ಮೊಬೈಲ್ ಫೋನುಗಳನ್ನೂ ವಶಕ್ಕೆ ಪಡೆದು ತಪಾಸಣೆ ಆರಂಭಿಸಿದರು.

ಮುಂಜಾನೆಯಿಂದ ಸಂಜೆ 6.30 ಗಂಟೆವರೆಗೂ ಐಟಿ ಅಧಿಕಾರಿಗಳು ಮನೆಯಲ್ಲಿ ಸ್ಥಿರ ಹಾಗೂ ಚರಾಸ್ಥಿಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು, ಚಿನ್ನ-ಬೆಳ್ಳಿ ಆಭರಣಗಳು, ಎಲ್‍ಐಸಿ, ಹೂಡಿಕೆ ಬಾಂಡ್‍ಗಳು, ನಗದು ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಪರಿಶೀಲಿಸಿ, ಮಾಹಿತಿಗಳನ್ನು ಕಲೆ ಹಾಕಿದರು.

ಆ ನಡುವೆ ಬೆಳಿಗ್ಗೆ ಮನೆಯವರನ್ನೇ ಐಟಿ ಅಧಿಕಾರಿಗಳು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಹೋಟೆಲ್‍ನಲ್ಲಿ ತಿಂಡಿ ಕೊಡಿಸಿ, ಪಾರ್ಸಲ್ ತಂದರಲ್ಲದೆ, ಮಧ್ಯಾಹ್ನವೂ ಅದೇ ರೀತಿ ಊಟ ತರಿಸಿಕೊಂಡರು. ಬಳಿಕ ಮನೆಯವರನ್ನು ಹೊರಕ್ಕೆ ಬಿಡದೇ ತೀವ್ರ ವಿಚಾರಣೆ ನಡೆಸಿದರು.

ಭದ್ರತೆ: ಪ್ರತಿಭಟನೆ ನಡೆಸಬಹುದೆಂದು ಭಾವಿಸಿ ಎನ್.ಆರ್ ಉಪ ವಿಭಾಗದ ಎಸಿಪಿ ಧರಣೇಶ್ ಅವರು, ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಮೈಸೂರಿನ ವಿಜಯನಗರ ಮನೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ, ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ವಿಜಯನಗರ 4ನೇ ಹಂತ: ಸಚಿವ ಸಿಎಸ್‍ಪಿ ಅವರ ಅಣ್ಣನ ಮಗ ಅಶೋಕ್ ಮೈಸೂರಿನ ವಿಜಯನಗರ 4ನೇ ಹಂತದ ಕಾರ್ಪೊರೇಷನ್ ಬ್ಯಾಂಕ್ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ಮನೆಗೂ ತೆರಳಿದ ಐಟಿ ಅಧಿಕಾರಿಗಳು, ಮನೆಯ ಫೋಟೋ ತೆಗೆದು ವೀಡಿಯೋ ಮಾಡಿಕೊಂಡರು.

ರೇವಣ್ಣ ಮನೆ ಮೇಲೂ: ಅದೇ ವೇಳೆ ಐಟಿ ಅಧಿಕಾರಿಗಳ ತಂಡವು ಬೆಂಗಳೂರು-ಮೈಸೂರು ಹೆದ್ದಾರಿಯ ನಾಗನಹಳ್ಳಿ ಕ್ರಾಸ್‍ನಲ್ಲಿರುವ ಕಾಂಗ್ರೆಸ್ ಮುಖಂಡರೂ ಆದ ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಮನೆ ಮೇಲೂ ದಾಳಿ ನಡೆದಿದೆ.

ಇಂದು ಜನ್ಮದಿನ ಆಚರಿಸಿಕೊಳ್ಳಲು ತಯಾರಿ ನಡೆಸುತ್ತಿದ್ದ ರೇವಣ್ಣಗೆ ಐಟಿ ಅಧಿಕಾರಿಗಳು ಮುಂಜಾನೆಯೇ ಶಾಕ್ ನೀಡಿದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಕಂಡು ದಿಗ್ಬ್ರಾಂತರಾದ ರೇವಣ್ಣ ಅವರು, ಅಧಿಕಾರಿಗಳ ತೀವ್ರ ವಿಚಾರಣೆಗೊಳಪಟ್ಟರು.

ಕ್ವಾರೆ ಮೇಲೂ ದಾಳಿ: ಪಾಂಡವಪುರ ತಾಲೂಕು, ಬೇಬಿ ಬೆಟ್ಟ ಗ್ರಾಮದ ಬಳಿ ರೇವಣ್ಣ ನಡೆಸುತ್ತಿದ್ದ ಕಲ್ಲಿನ ಕ್ವಾರಿ (ಈಗ ಸ್ಥಗಿತಗೊಂಡಿದೆ)ಗೂ ಅಧಿಕಾರಿಗಳು ದಾಳಿ ನಡೆಸಿ, ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದರು.
ಕ್ವಾರಿಯ ವಿಸ್ತೀರ್ಣ, ವಹಿವಾಟು, ಎಷ್ಟು ಜನ ಕೆಲಸ ಮಾಡುತ್ತಿದ್ದರು, ಎಷ್ಟು ಲಾರಿಗಳು ರೇವಣ್ಣ ಹೆಸರಿನಲ್ಲಿವೆ ಎಂಬಿತ್ಯಾದಿ ಮಾಹಿತಿ ಪಡೆದ ಐಟಿ ಅಧಿಕಾರಿಗಳು, ಕ್ವಾರಿಯ ಸಂಪೂರ್ಣ ವೀಡಿಯೋ ರೆಕಾರ್ಡ್ ಮಾಡಿಕೊಂಡರು.

ಹಾಸನ ಪಿಡಬ್ಲ್ಯೂಡಿ ಕಚೇರಿ: ಹಾಸನ ನಗರದ ಲೋಕೋಪಯೋಗಿ ಇಲಾಖೆ ಕಚೇರಿಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು, ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಅವರ ಮನೆಗಳಲ್ಲಿ ಪರಿಶೀಲನೆ ನಡೆಸಿದರು. ದಾಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಐಟಿ ದಾಳಿಯು ರಾಜಕೀಯ ಪ್ರೇರಿತವಾಗಿದೆ. ಆದರೆ ಇದರಿಂದ ಜೆಡಿಎಸ್‍ಗೆ ಚುನಾವಣೆಯಲ್ಲಿ ಅನುಕೂಲವೇ ಆಗಲಿದೆ ಎಂದಿದ್ದಾರೆ. ತಾವು ದಾಳಿಯನ್ನು ವಿರೋಧಿಸುವುದಿಲ್ಲ. ಒಂದು ವೇಳೆ ತಪ್ಪು ಎಸಗಿದ್ದರೆ ಅಂತಹವರ ವಿರುದ್ಧ ಐಟಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದ ಸಚಿವರು, ನಾನು ಇಂತಹ ದಾಳಿಗಳಿಗೆ ಹೆದರುವುದಿಲ್ಲ ಎಂದರು. ಈ ದಾಳಿ ನಿರೀಕ್ಷಿತವೇ ಆಗಿತ್ತು. ಐಟಿ ಅಧಿಕಾರಿ ಬಾಲಕೃಷ್ಣ ಬಿಜೆಪಿ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ ಎಂದೂ ಸಚಿವ ರೇವಣ್ಣ ಕಿಡಿಕಾರಿದರು.

ಕೇಂದ್ರ ಸರ್ಕಾರ ಪ್ರೇರಿತ ದಾಳಿ

ಪಾಂಡವಪುರ: ತಮ್ಮ ಸಂಬಂಧಿಕರ ಮನೆಗಳ ಮೇಲೆ ನಡೆದಿರುವ ಐಟಿ ದಾಳಿ ಕೇಂದ್ರ ಸರ್ಕಾರ ನಡೆಸಿರುವ ರಾಜಕೀಯ ಪ್ರೇರಿತ ದಾಳಿಯಾ ಗಿದ್ದು, ಇದರ ಮೂಲಕ ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಆರೋಪಿಸಿದರು. ನಾನು ಜಿಲ್ಲಾ ಉಸ್ತುವಾರಿ ಸಚಿವ ನಾಗಿದ್ದು, ಮಂಡ್ಯ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಸಹ ವಹಿಸಿರುವುದರಿಂದ ಚುನಾ ವಣೆಗೆ ಖರ್ಚು ಮಾಡಲು ನಮ್ಮ ಮನೆಯಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಹಣ ಇಟ್ಟಿದ್ದಾರೆ ಎಂದು ಭಾವಿಸಿ ಐಟಿ ದಾಳಿ ನಡೆಸಲಾಗಿದೆ ಎಂದರು. ನಾವೇನು ತಪ್ಪು ಮಾಡಿಲ್ಲ.

ಅಕ್ರಮವಾಗಿ ಹಣವನ್ನು ಸಂಗ್ರಹಿಸುತ್ತಿಲ್ಲ. ಆದರೆ ಚುನಾವಣೆಯಲ್ಲಿ ಯಾರ್ಯಾರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ನಮಗೂ ಗೊತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಂಡವಾಳವನ್ನು ಹೊರತೆಗೆಯುತ್ತೇನೆ. ನಾಳೆಯಿಂದಲೇ ಚುನಾವಣಾ ಪ್ರಚಾರ ಬಿರುಸು ಪಡೆಯಲಿದೆ ಎಂದರು.

ನಮ್ಮ ತಂದೆ ಕಾಲದಿಂದಲೂ ಅಂದರೆ ಸುಮಾರು 60 ವರ್ಷಗಳಿಂದಲೂ ಕಾನೂನಾತ್ಮಕವಾಗಿಯೇ ವ್ಯವಹಾರ ನಡೆಸಿಕೊಂಡು ಬಂದಿದ್ದೇವೆ. ಸರ್ಕಾರಕ್ಕೆ ತೆರಿಗೆ ವಂಚಿಸಿಲ್ಲ. ತೆರಿಗೆಯನ್ನು ಮುಂಗಡವಾಗಿಯೇ ಪಾವತಿಸುವ ಪರಿಪಾಠ ಬೆಳೆಸಿಕೊಂಡು ಬಂದಿದ್ದೇವೆ. ಒಂದು ವೇಳೆ ಅವರು ದಾಳಿ ಮಾಡುವುದೇ ಆಗಿದ್ದರೇ ಒಂದು ತಿಂಗಳ ಮುಂಚೆ ಮಾಡಬಹುದಿತ್ತು. ನಾನು ಮುಖ್ಯಮಂತ್ರಿಗಳ ಆಪ್ತನೆಂಬ ಕಾರಣಕ್ಕಾಗಿ ನಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದರು.

Translate »