ಮೈಸೂರಲ್ಲಿ ಚಿನ್ನಾಭರಣ ದೋಚಿದ್ದ ಪ್ರಕರಣ ತುಮಕೂರಲ್ಲಿ ಬಂಧಿತ ಖದೀಮರ ಗುರುತಿಸಿದ  ಆಭರಣ ಕಳೆದುಕೊಂಡ ಮಹಿಳೆ
ಮೈಸೂರು

ಮೈಸೂರಲ್ಲಿ ಚಿನ್ನಾಭರಣ ದೋಚಿದ್ದ ಪ್ರಕರಣ ತುಮಕೂರಲ್ಲಿ ಬಂಧಿತ ಖದೀಮರ ಗುರುತಿಸಿದ ಆಭರಣ ಕಳೆದುಕೊಂಡ ಮಹಿಳೆ

July 20, 2018

ಮೈಸೂರು: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆ ಅಳತೆ ಮಾಡುವ ನಾಟಕವಾಡಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಮೂವರು ಖದೀಮರನ್ನು ತುಮಕೂರು ತಿಲಕ್‍ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಿಚಾರಣೆ ಮಾಡಿದಾಗ ಅವರು ಮೈಸೂರಿನ ಕುವೆಂಪು ನಗರ ‘ಎನ್’ ಬ್ಲಾಕ್‍ನಲ್ಲಿರುವ ಕೆ.ಜೆ.ಲೀಲಾವತಿ ಎಂಬುವರ ಮನೆಯಲ್ಲಿ ಕಾರ್ಪೊರೇಷನ್ ಅಧಿಕಾರಿಗಳೆಂದು ಹೇಳಿಕೊಂಡು ಮನೆ ಅಳತೆ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ದೋಚಿದ್ದ ವಿಚಾರ ಬಾಯ್ಬಿಟ್ಟಿದ್ದರು.

ತುಮಕೂರು ಪೊಲೀಸರು ಆರೋಪಿಗಳ ಫೋಟೋ ತೆಗೆದುಕೊಂಡು ಬುಧವಾರ ಮೈಸೂರಿಗೆ ಬಂದು ಲೀಲಾವತಿ ಅವರನ್ನು ಭೇಟಿ ಮಾಡಿ ಅವುಗಳನ್ನು ತೋರಿಸಿದ್ದರು. ಆ ಫೋಟೋದಲ್ಲಿರುವ ಆಸಾಮಿಗಳೇ ತಮ್ಮ ಮನೆಗೆ ಬಂದು ಆಭರಣ ದೋಚಿದ್ದವರು ಎಂಬುದನ್ನು ಲೀಲಾವತಿ ಹಾಗೂ ಮನೆ ಕೆಲಸದ ಮಹಿಳೆ ಗುರುತಿಸಿದ್ದರು. ಆರೋಪಿಗಳನ್ನು ಮೈಸೂರಿಗೆ ಕರೆ ತರುತ್ತೇವೆ ಎಂದು ತುಮಕೂರು ಪೊಲೀಸರು ತಿಳಿಸಿದ್ದರಾದರೂ, ತುಮಕೂರಿನ ಮಗಳ ಮನೆಗೆ ನಾವೇ ಹೋಗಬೇಕಾಗಿದೆ. ವಿದೇಶದಿಂದ ಪುತ್ರಿ ಈಗಷ್ಟೇ ಅಲ್ಲಿಗೆ ಬಂದಿದ್ದಾರೆ ಎಂದು ಲೀಲಾವತಿ ಹೇಳಿದ್ದರು.

ಅದರಂತೆ ಲೀಲಾವತಿ ಅವರು ಮತ್ತೋರ್ವ ಪುತ್ರಿ ಚೇತನ ಹಾಗೂ ಅಳಿಯನೊಂದಿಗೆ ಇಂದು ಬೆಳಿಗ್ಗೆಯೇ ತುಮಕೂರಿಗೆ ತೆರಳಿ ಮಗಳ ಮನೆಯಲ್ಲಿದ್ದು, ಮಧ್ಯಾಹ್ನ 4 ಗಂಟೆಗೆ ತುಮಕೂರಿನ ಪೊಲೀಸರ ವಶದಲ್ಲಿದ್ದ ಆರೋಪಿಗಳು ತಮ್ಮ ಮನೆಯಲ್ಲಿ ಚಿನ್ನಾಭರಣ ದೋಚಿದ್ದವರು ಎಂಬುದನ್ನು ಗುರುತು ಹಚ್ಚಿದ್ದಾರೆ.

Translate »