ಗಣಿತವೆಂಬುದು ಕಬ್ಬಿಣದ ಕಡಲೆಯಲ್ಲ ಕಲ್ಲುಸಕ್ಕರೆ
ಮೈಸೂರು

ಗಣಿತವೆಂಬುದು ಕಬ್ಬಿಣದ ಕಡಲೆಯಲ್ಲ ಕಲ್ಲುಸಕ್ಕರೆ

March 17, 2021

ಮೈಸೂರು,ಮಾ.16-ಗಣಿತವೆಂದರೆ ಬಹಳ ಕಷ್ಟ. ಅದು ಕಬ್ಬಿಣದ ಕಡಲೆ ಇದ್ದಂತೆ ಎಂಬ ಭಾವನೆಯನ್ನು ವಿದ್ಯಾರ್ಥಿ ಗಳು ಮನಸ್ಸಿನಿಂದ ತೆಗೆದು ಹಾಕಿ. ಗಣಿತ ಕಷ್ಟವಲ್ಲ, ಅದು ಸವಿಯಾದ ಹುರಿಗಡಲೆ ಇದ್ದಂತೆ ಎಂಬ ಭಾವನೆಯನ್ನು ಬೆಳೆಸಿಕೊಂಡು ಗಣಿತವನ್ನು ಇಷ್ಟಪಟ್ಟು ಪ್ರೀತಿಯಿಂದ ಕಲಿತರೆ ಅದು ಕಲ್ಲುಸಕ್ಕರೆಯಂತೆ ವಿದ್ಯಾರ್ಥಿಗಳ ಜೀವನದಲ್ಲಿ ಸಿಹಿ ತರುತ್ತದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ವಿದ್ಯಾರಣ್ಯಪುರಂನ ವಾಣಿ ವಿದ್ಯಾಮಂದಿರ ದಲ್ಲಿ ಪ್ರತಿಷ್ಠಿತ ಶೈಕ್ಷಣಿಕ ಸೇವಾ ಸಂಸ್ಥೆಗಳಲ್ಲೊಂದಾದ ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಅಂತಾ ರಾಷ್ಟ್ರೀಯ ‘ಪೈ’ ದಿನಾಚರಣೆಯಲ್ಲಿ ಗಣಿತದಲ್ಲಿ ಅಗಣಿತ ವೆನಿಸುವ ‘ಪೈ’ ಸೂತ್ರದ ಚಿತ್ರವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಸಕ್ತಿಯಿಂದ ಕಲಿಯುವವ ರಿಗೆ ಗಣಿತ ಎಂಬುದು ಯಾವತ್ತೂ, ಯಾರಿಗೂ ಕಬ್ಬಿಣದ ಕಡಲೆಯಲ್ಲ. ಬದಲಿಗೆ ಅದು ಸಿಹಿಯಾದ ಕಲ್ಲು ಸಕ್ಕರೆ. ಬಾಯಿ ಚಪ್ಪರಿಸುವಂತಹ ಸಿಹಿ ಪೇಯ. ಮೇಲ್ನೋಟಕ್ಕೆ ಕಲ್ಲು ಸಕ್ಕರೆ ಗಟ್ಟಿಯಾಗಿ ಕಲ್ಲಿನಂತೆ ಕಠಿಣವಾಗಿ ಕಂಡರೂ ಬಾಯಲ್ಲಿ ಇಟ್ಟುಕೊಂಡಾಕ್ಷಣ ಕರಗಿ ಸಿಹಿಯಾದ ಸ್ವಾದ ನೀಡುವಂತೆ ಗಣಿತ ಕೂಡ ಕಲಿಯುತ್ತಾ ಹೋದಂತೆ ಕಠಿಣ ವೆನಿಸದೆ ಸುಲಭವಾಗಿ ಇಷ್ಟವಾಗಿ ಬಿಡುತ್ತದೆಂದರು.

ಯಾವುದೇ ಹಂತದ ಪರೀಕ್ಷೆಯಾದರೂ ಸರಿಯೇ ವಿದ್ಯಾರ್ಥಿಗಳು ಮನಸು ಪಟ್ಟರೆ ಗಣಿತದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಬಹುದು. ಆದರೆ ಇತರೆ ವಿಷಯ ಗಳಲ್ಲಿ ಇದು ಅಷ್ಟು ಸುಲಭವಲ್ಲ. ಆದ್ದರಿಂದ ಇಲ್ಲೇ ಅರ್ಥವಾಗುತ್ತದೆ ಎಲ್ಲಾ ವಿಷಯಗಳಿಗಿಂತ ಗಣಿತವೇ ಸುಲಭವೆಂದು. ಅಷ್ಟೇ ಅಲ್ಲ,ಗಣಿತವನ್ನು ಚೆನ್ನಾಗಿ ಕಲಿತ ವರಿಗೆ ಇನ್ನಿತರೆ ವಿಷಯಗಳನ್ನು ಕಲಿಯಲು ಬಹಳ ಸುಲಭವಾಗುತ್ತದೆ. ಏಕೆಂದರೆ ಪ್ರತಿಯೊಂದು ವಿಷಯ ದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಗಣಿತ ಇದ್ದೇ ಇರುತ್ತದೆ.ಹಾಗಾಗಿ ಗಣಿತದಲ್ಲಿ ಪರಿಣಿತಿ ಹೊಂದಿದವರು ಯಾವ ವಿಷಯಗಳಲ್ಲಾದರೂ ಸಾಧಕರಾಗಬಲ್ಲರು. ಗಣಿತದಲ್ಲಿ ಪಾಂಡಿತ್ಯ ಗಳಿಸಿದವರು ಒಂದು ರೀತಿಯಲ್ಲಿ ಜಗತ್ತನ್ನೇ ಗೆಲ್ಲ ಬಲ್ಲರು.ಈ ದಿಸೆಯಲ್ಲಿ ನಾವು ಪ್ರಾಚೀನ ಗಣಿತಜ್ಞರಿಂದ ಹಿಡಿದು ಇವತ್ತಿನ ಆಧುನಿಕ ಗಣಿತಜ್ಞರ ಸಾಧನೆಯನ್ನು ಕಾಣಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿ ಗಳು ಗಣಿತ ಕಷ್ಟ ಎನ್ನುವುದನ್ನು ಬಿಟ್ಟು ಗಣಿತಕ್ಕೆ ವಿಶೇಷ ಆದ್ಯತೆ ನೀಡಿ ಇಷ್ಟ ಪಟ್ಟು ಓದಬೇಕೆಂದು ಸಲಹೆ ನೀಡಿದರು.

ನಂತರ ಮಾತನಾಡಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ವಿಶ್ರಾಂತ ಶಿಕ್ಷಕ ಎಚ್.ವಿ.ಮುರಳಿಧರ್, ವಿಜ್ಞಾನ ಇಲ್ಲದೆ ಜಗತ್ತಿಲ್ಲ. ಪ್ರತಿ ಯೊಂದಕ್ಕೂ ಗಣಿತ ಬೇಕೇಬೇಕು. ಎಲ್ಲದರಲ್ಲೂ ಗಣಿತವಿದೆ. ಗಣಿತವೆಂಬುದು ಸರ್ವಾಂತ ರ್ಯಾಮಿ. ಈ ಹಿನ್ನೆಲೆಯಲ್ಲಿ ಗಣಿತ ಮತ್ತು ಗಣಿತದ ಮಹತ್ವವಾಗಿರುವ ‘ಪೈ’ ಪ್ರಮೇಯದ ಬಗ್ಗೆ ಅರಿವು ಮೂಡಿಸಲು ಮಾರ್ಚ್14ರಂದು ಪ್ರತಿವರ್ಷ ಅಂತಾ ರಾಷ್ಟ್ರೀಯ ‘ಪೈ’ ದಿನಾಚರಣೆ ಆಚರಿಸಲಾಗುತ್ತದೆ. ಎಂದು ‘ಪೈ’ ದಿನಾಚರಣೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ರಾಂತ ಗಣಿತ ಶಿಕ್ಷಕ ಎ.ಸಂಗಪ್ಪ, ವಿದ್ಯಾರ್ಥಿ ಗಳ ಪ್ರತಿಭಾ ವಿಕಸನಕ್ಕೆ ಪೂರಕವಾಗುವಂತೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು.ಹಿರಿಯ ಶಿಕ್ಷಕಿ ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಮೀನಾಕ್ಷಿ, ವಿಜಯ ಲಕ್ಷ್ಮಿ, ವಿಶ್ರಾಂತ ಗಣಿತ ಶಿಕ್ಷಕರಾದ ಬಾಲಸುಬ್ರಹ್ಮಣ್ಯ, ಶ್ರೀನಿವಾಸ, ಪತ್ರಕರ್ತರಾದ ಹೊಮ್ಮ ಮಂಜುನಾಥ್, ಕೆ.ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »