- ಮೇಯರ್ ತಸ್ನೀಂ ನೇತೃತ್ವದಲ್ಲಿ ಸ್ಥಳ ಪರಿಶೀಲನೆ
- ಸಬ್ ವೇಗಾಗಿ ಬಜೆಟ್‍ನಲ್ಲಿ 3 ಕೋಟಿ ರೂ. ಮೀಸಲಿಡಲು ಸ್ಥಳೀಯ ಕಾರ್ಪೊರೇಟರ್ ಬಿ.ವಿ.ಮಂಜುನಾಥ್ ಮನವಿ
ಮೈಸೂರು, ಮಾ.10(ಎಸ್‍ಬಿಡಿ)- ಹೆಚ್ಚು ಜನ-ವಾಹನ ದಟ್ಟಣೆಯ ಮೈಸೂರು ನಗರ ಬಸ್ ನಿಲ್ದಾಣದ ಬಳಿ ಸಬ್ ವೇ ನಿರ್ಮಾಣಕ್ಕೆ ನಗರಪಾಲಿಕೆ ಚಿಂತನೆ ನಡೆಸಿದೆ.
ಅಂಬಾವಿಲಾಸ ಅರಮನೆ ಬ್ರಹ್ಮಪುರಿ ದ್ವಾರದ ಕಡೆಯಿಂದ ಜಗನ್ಮೋಹನ ಅರಮನೆ ರಸ್ತೆ ಕಡೆಗೆ ಸಯ್ಯಾಜಿರಾವ್ ರಸ್ತೆಯಲ್ಲಿ ಸಬ್ ವೇ ನಿರ್ಮಾಣಕ್ಕೆ ಒತ್ತಾಯವಿರುವ ಹಿನ್ನೆಲೆಯಲ್ಲಿ ಮಂಗಳ ವಾರ ಮೇಯರ್ ತಸ್ನೀಂ ಅವರ ನೇತೃತ್ವ ದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಸಬ್ ವೇ ನಿರ್ಮಾಣಕ್ಕೆ ಮನವಿ ಸಲ್ಲಿಸಿರುವ ಸ್ಥಳೀಯ ಕಾರ್ಪೊರೇಟರ್ ಬಿ.ವಿ.ಮಂಜುನಾಥ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ದೇವರಾಜ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಮುನಿಯಪ್ಪ, ಸಬ್ ಇನ್‍ಸ್ಪೆಕ್ಟರ್ ಲೇಪಾಕ್ಷ, ವಲಯ ಕಚೇರಿ 1ರ ಅಭಿವೃದ್ಧಿ ಅಧಿಕಾರಿ ಭರತ್ ಹಾಗೂ 51ನೇ ವಾರ್ಡ್ ಇಂಜಿನಿಯರ್ ಸಂತೋಷ್ ಪರಿಶೀಲನೆ ನಡೆಸಿ, ಮಾಹಿತಿ ವಿನಿಮಯ ಮಾಡಿಕೊಂಡರು.
3 ಕೋಟಿ ರೂ.ಗೆ ಮನವಿ: ನಗರ ಬಸ್ ನಿಲ್ದಾಣದ ಬಳಿ ಸಬ್ ವೇ ನಿರ್ಮಾಣಕ್ಕೆ ಪಾಲಿಕೆ ಬಜೆಟ್‍ನಲ್ಲಿ 3 ಕೋಟಿ ರೂ. ಹಣ ಮೀಸಲಿಡುವಂತೆ ಸ್ಥಳೀಯ ಕಾರ್ಪೊರೇಟರ್ ಬಿ.ವಿ.ಮಂಜುನಾಥ್ ಸೋಮವಾರವಷ್ಟೇ ಮೇಯರ್ ತಸ್ನೀಂ ಅವರಿಗೆ ಮನವಿ ಸಲ್ಲಿಸಿದ್ದರು.
ಕೃಷ್ಣರಾಜ ವೃತ್ತದ ಸಮೀಪವಿರುವ ನಗರ ಬಸ್ ನಿಲ್ದಾಣದ ಬಳಿ ಅಧಿಕ ವಾಹನ ದಟ್ಟಣೆ ಹಾಗೂ ಪಾದಚಾರಿಗಳ ಸಂಚಾರವಿರುವ ಕಾರಣ ಸಯ್ಯಾಜಿ ರಾವ್ ರಸ್ತೆಯಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರ ಸಾಧ್ಯವಾಗುತ್ತಿಲ್ಲ. ಮಹಾರಾಣಿ ಪಿಯು ಕಾಲೇಜು, ಮರಿ ಮಲ್ಲಪ್ಪ ವಿದ್ಯಾ ಸಂಸ್ಥೆ, ಸದ್ವಿದ್ಯಾ ಶಿಕ್ಷಣ ಸಂಸ್ಥೆ, ಮಹಾರಾಣಿ ಪದವಿ ಕಾಲೇಜು ಸೇರಿದಂತೆ ಅನೇಕ ಟ್ಯೂಷನ್ ಸೆಂಟರ್ ಗಳ ವಿದ್ಯಾರ್ಥಿಗಳು ಜಗನ್ಮೋಹನ ರಸ್ತೆ ಹಾಗೂ ನಗರ ಬಸ್ ನಿಲ್ದಾಣದ ನಡುವೆ ಓಡಾಡುತ್ತಾರೆ. ಸಂಚಾರ ಪೊಲೀಸರ ವಿಶ್ಲೇಷಣೆಯಂತೆ ನಿತ್ಯ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ರಸ್ತೆ ದಾಟುತ್ತಾರೆ.
ಅಲ್ಲದೆ ಸಮೀಪದ ಸಂತೆಪೇಟೆಗೂ ಹೆಚ್ಚು ಜನ ಓಡಾಡುತ್ತಾರೆ. ಹಾಗಾಗಿ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ರಸ್ತೆ ಸಂಚಾರಕ್ಕೆ ಅನುಕೂಲವಾಗುವ ಸಬ್ ವೇ ನಿರ್ಮಾಣಕ್ಕೆ 2020-21ನೇ ಸಾಲಿನ ಆಯವ್ಯಯದಲ್ಲಿ 3 ಕೋಟಿ ರೂ. ಮೀಸ ಲಿಡುವಂತೆ ಕೋರಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಮೇಯರ್ ತಸ್ನೀಂ, ಸ್ಥಳ ಪರಿಶೀಲಿಸಿ, ಸಬ್ ವೇ ಅಗತ್ಯದ ಬಗ್ಗೆ ಮಾಹಿತಿ ಪಡೆದರು. ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರೂ ಸಕಾರಾತ್ಮಕ ವಾಗಿ ಸ್ಪಂದಿಸಿದ್ದು, ಈ ಯೋಜನೆಯ ಬಗ್ಗೆ ಫಾಲೋಅಪ್ ಮಾಡುವಂತೆ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸಬ್ ವೇ ಬೇಕು: ಸಯ್ಯಾಜಿರಾವ್ ರಸ್ತೆ ಹಾಗೂ ಧನ್ವಂತರಿ ರಸ್ತೆ ಜಂಕ್ಷನ್‍ನ ಬಳಿ ಹಾಗೂ ದಸರಾ ವಸ್ತು ಪ್ರದರ್ಶನದ ಬಳಿ ಬಿಎನ್ ರಸ್ತೆಯಲ್ಲಿ ಸಬ್ ವೇಗಳಿವೆ. ಆದರೆ ಅಗತ್ಯವಿದ್ದ ಸೂಕ್ತ ಸ್ಥಳದಲ್ಲಿ ನಿರ್ಮಿಸದ ಕಾರಣ ಸಾರ್ವಜನಿಕರಿಗೆ ಸದುಪಯೋಗ ವಾಗುತ್ತಿಲ್ಲ. ಅನೈತಿಕ ಚಟುವಟಿಕೆಗಳು, ಅನೈರ್ಮಲ್ಯದ ತಾಣವಾಗಿದ್ದರಿಂದ ಬೀಗ ಹಾಕಲಾಗಿತ್ತು. ನಡುವೆ ಕೆಲ ದಿನಗಳ ಕಾಲ ಬೀಗ ತೆಗೆದು ಸಂಚಾರಕ್ಕೆ ಮುಕ್ತಗೊಳಿ ಸಲಾಗುತ್ತದೆ. ಹೆಚ್ಚು ಜನ ಓಡಾಡದಿದ್ದರೆ ಮತ್ತೆ ಬಂದ್ ಮಾಡಲಾಗುತ್ತದೆ. ಆದರೆ ನಗರ ಬಸ್ ನಿಲ್ದಾಣದ ಬಳಿ ಸಬ್ ವೇ ಅಗತ್ಯವಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್‍ಗಳು ನಿಲ್ದಾಣದಿಂದ ಸಯ್ಯಾಜಿರಾವ್ ರಸ್ತೆಗೆ ತಿರುವು ಪಡೆ ಯುವ ಸ್ಥಳವಿದು. ಜಗನ್ಮೋಹನ ರಸ್ತೆಗೆ ಹೋಗುವ ಹಾಗೂ ಅಲ್ಲಿಂದ ಬರುವ ವಾಹನಗಳೂ ಇದೇ ಸ್ಥಳದಲ್ಲಿ ಕೂಡುತ್ತವೆ. ಇಂತಹ ಅಪಾಯಕಾರಿ ಸ್ಥಳದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ರಸ್ತೆ ದಾಟ ಬೇಕು. ಸಂಚಾರ ಪೊಲೀಸರು ಅಥವಾ ಹೋಂಗಾರ್ಡ್ ಸಿಬ್ಬಂದಿಯೂ ಇಲ್ಲಿ ಅಸಹಾಯಕರಾಗುವ ಸ್ಥಿತಿಯಿದೆ. ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಸಬ್ ವೇ ಬೇಕು ಎಂಬುದು ಸಾರ್ವಜನಿಕರ ಒತ್ತಾಯವೂ ಆಗಿದೆ.